ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಜಾತಿ ಗಣತಿ ಬಗ್ಗೆ ಅಷ್ಟೊಂದು ಸಮಾಧಾನ ಇಲ್ಲ. ತೃಪ್ತಿಯಿಲ್ಲ. ಅದನ್ನು ಮರುಗಣತಿ ಮಾಡಿ ಜಾರಿಗೆ ತರಬೇಕು ಎಂದು ಶ್ರೀಶೈಲ ಪೀಠದ ಜಗದ್ಗುರು ಶ್ರೀ ಡಾ.ಚನ್ನಸಿದ್ಧರಾಮ ಶಿವಾಚಾರ್ಯ ಭಗವತ್ಪಾದರು ನುಡಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ನಡೆಸಿರುವ ಜಾತಿ ಗಣತಿ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಎಲ್ಲರನ್ನು ಸಂಪರ್ಕ ಮಾಡಿಲ್ಲ. ಅದೊಂದು ಅವೈಜ್ಞಾನಿಕ ಗಣತಿ ಎನ್ನುವುದು ನಮ್ಮ ಅಭಿಮತ ಇದೆ. ನಮ್ಮ ಸಮುದಾಯದ ಮಠಾಧೀಶರು, ಅಖಿಲ ಭಾರತ ವೀರಶೈವ ಮಹಾಸಭಾದ ಅಭಿಪ್ರಾಯವೂ ಇದೆ ಆಗಿದೆ. ಈ ಅಭಿಪ್ರಾಯವನ್ನು ನಾವು ಬೆಂಬಲಿಸುತ್ತೇವೆ ಎಂದರು.ಈ ಬಗ್ಗೆ ಸಮಾಜದ ಹಿರಿಯರು, ಮಠಾಧೀಶರೊಂದಿಗೆ ಮತ್ತೇ ನಾವು ಚರ್ಚೆ ಮಾಡಿಕೊಂಡು ಏನು ಮಾಡಬೇಕೆಂದು ನಿರ್ಣಯ ತೆಗೆದುಕೊಳ್ಳುತ್ತಿದ್ದೇವೆ. ಕರ್ನಾಟಕದ ಬಹುತೇಕ ಮುಂದುವರೆದ ಸಮುದಾಯಗಳು ಈ ಗಣತಿಯ ಬಗ್ಗೆ ಸಮಾಧಾನ ಇಲ್ಲ. ಸರ್ಕಾರ ಇದನ್ನು ಮಾಡಿಯೇ ತೀರುತ್ತೇವೆ ಎಂದು ಜಿದ್ದಿಗೆ ಬಿದ್ದರೆ ಯಾವ ರೀತಿ ಕ್ರಮ ಕೈಗೊಳ್ಳಬೇಕೆಂದು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಗುಡುಗಿದರು.ಜಾತಿ ಗಣತಿಯನ್ನು ಮರು ಗಣತಿ ಮಾಡಬೇಕೆಂದು ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸವನ್ನು ವೀರಶೈವ ಮಹಾಸಭಾದಿಂದ ಒತ್ತಡ ಮಾಡುತ್ತೇವೆ. ಅಲ್ಪಸಂಖ್ಯಾತರನ್ನು ಬಹುಸಂಖ್ಯಾತರು ಎಂದು ಬಿಂಬಿಸುತ್ತಿರುವುದನ್ನು ಮಹಾಸಾಭಾದ ಅಧಿವೇಶನದಲ್ಲಿಯೇ ನಾವು ಖಂಡಿಸಿದ್ದೇವೆ. ಮಹಾಸಭಾದವರೊಂದಿಗೆ ನಿರಂತರವಾಗಿ ಚರ್ಚೆ ಮಾಡಲಾಗುತ್ತಿದೆ. ಬಳಿಕ ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂಬುದನ್ನು ತಿಳಿಸಲಾಗುವುದು ಎಂದರು.ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಇದ್ದರು.