ಸಾರಾಂಶ
ಎಲ್ಲ ಸಮುದಾಯದಲ್ಲಿಯೂ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಬಡವರಿದ್ದಾರೆ.
ಶಿರಸಿ; ಬಿಜೆಪಿಯವರಿಗೆ ಬಡವರ ಬಗ್ಗೆ ಚಿಂತೆ ಇಲ್ಲ. ಎಲ್ಲ ಸಮುದಾಯದಲ್ಲಿಯೂ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಬಡವರಿದ್ದಾರೆ. ಸರ್ಕಾರದ ಪ್ರತಿಯೊಂದು ಯೋಜನೆಗಳು ಎಲ್ಲರಿಗೂ ಸಿಗಬೇಕು ಎಂದು ಜಾತಿಗಣತಿ ವರದಿ ಜಾರಿಗೊಳಿಸಲಾಗುತ್ತಿದೆ ಎಂದು ಕನ್ನಡ- ಸಂಸ್ಕೃತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ಅವರು ಶನಿವಾರ ಬನವಾಸಿಯಲ್ಲಿ ಮಾಧ್ಯಮದವರ ಜತೆ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಂಗಳ ಹಿಂದೆ ನೀಡಿರುವ ಹೇಳಿಕೆ ಒಮ್ಮೆ ನೋಡುವುದು ಒಳಿತು. ೧.೬೬ ಲಕ್ಷ ಅಧಿಕಾರಿಗಳು ಪ್ರತಿ ಮನೆಗೆ ಭೇಟಿ ನೀಡಿದ್ದಾರೆ. ೧.೫೫ ಲಕ್ಷ ಶಿಕ್ಷಕರು ಮನೆ ಮನೆಗೆ ಭೇಟಿ ನೀಡಿ ಜಾತಿ ಗಣತಿ ವರದಿ ಸಿದ್ಧಪಡಿಸಿದ್ದಾರೆ. ಒಕ್ಕಲಿಗರು, ಲಿಂಗಾಯತರು, ಬ್ರಾಹ್ಮಣರಲ್ಲಿ ಬಡವರಿದ್ದಾರೆ. ಸರ್ಕಾರದಿಂದ ಯೋಜನೆ ಅವರಿಗೂ ತಲುಪಿಸಬೇಕು ಎಂದು ಜಾತಿಗಣತಿ ವರದಿ ತಂದಿದ್ದಾರೆ. ಪ್ರಮುಖ ೫೪ ಮಾನದಂಡವಿಟ್ಟುಕೊಂಡು ಜಾತಿಗಣತಿ ಮಾಡಿದ್ದೇವೆ. ಏ. ೧೭ಕ್ಕೆ ವಿಶೇಷ ಸಚಿವ ಸಂಪುಟ ಸಭೆ ಕರೆದು ಅಲ್ಲಿ ಚರ್ಚಿಸಲಾಗುತ್ತದೆ ಎಂದರು.ಪ್ರಾಧಿಕಾರಗಳಿಗೆ ಹಣ ಬಿಡುಗಡೆಯಾಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಎಲ್ಲ ಪ್ರಾಧಿಕಾರಿಗಳಿಗೂ ಅನುದಾನ ನೀಡಲಾಗಿದೆ. ಅದಕ್ಕೆ ಸಂಬಂಧಪಟ್ಟ ಇಲಾಖೆ ಸಚಿವರ ಹಾಗೂ ಅಧಿಕಾರಿಗಳ ಗಮನಕ್ಕೆ ತರುತ್ತೇನೆ. ಅದರಂತೆ ಬನವಾಸಿ ಅಭಿವೃದ್ಧಿ ಪ್ರಾಧಿಕಾರಕ್ಕೂ ಅನುದಾನ ಬಿಡುಗಡೆಗೆ ಕ್ರಮ ವಹಿಸಲಾಗುತ್ತದೆ ಎಂದು ಹೇಳಿದರು.
ಈ ವೇಳೆ ಶಾಸಕ ಶಿವರಾಮ ಹೆಬ್ಬಾರ್, ಭೋವಿವಡ್ಡರ ಸಮಾಜದ ತಾಲೂಕಾಧ್ಯಕ್ಷ ಮಂಜುನಾಥ ರಾಮಾಪುರ, ಉಪಾಧ್ಯಕ್ಷ ಲಕ್ಷ್ಮಣ ಭೋವಿ, ಪ್ರಮುಖರಾದ ಗಣೇಶ ದಾವಣಗೆರೆ, ಎಂ.ಎಂ. ಕಮನಳ್ಳಿ, ಹನುಮಂತಪ್ಪ ಸಾಲಿ, ಮಾರುತಿ ಮಟ್ಟೇರ ಕುಪ್ಪಗಡ್ಡೆ, ಕೆಂಪರಾಜು ಮತ್ತಿತರರು ಇದ್ದರು.