ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂದಗಿ
ಶತಮಾನಗಳಿಂದ ಆಚರಿಸಿಕೊಂಡು ಬಂದ ವರ್ಣ ಪರಿಕಲ್ಪನೆ ಇಂದು ಜಾತಿ ಎಂಬ ಪೆಡಂಭೂತವಾಗಿ ಕಾಡುತ್ತಲಿದೆ ಎಂದು ಉಪನ್ಯಾಸಕ ಸಾಹೇಬಗೌಡ ದುದ್ದಗಿ ಅಭಿಪ್ರಾಯ ಪಟ್ಟರು.ಪಟ್ಟಣದ ಪದ್ಮರಾಜ ವಿದ್ಯಾವರ್ಧಕ ಸಂಘದ ಜಿ.ಪಿ.ಪೋರವಾಲ ಕಲಾ, ವಾಣಿಜ್ಯ ಹಾಗೂ ವಿ.ವಿ.ಎಸ್.ವಿಜ್ಞಾನ ಮಹಾವಿದ್ಯಾಲಯದ ಕನ್ನಡ ವಿಭಾಗ ಮತ್ತು ವಿದ್ಯಾಚೇತನ ಪ್ರಕಾಶನ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕನ್ನಡ ಸಾಹಿತ್ಯದಲ್ಲಿ ವರ್ಣ ಸಂಘರ್ಷ ಎಂಬ ವಿಷಯದ ಮೇಲೆ ಮಾತನಾಡಿದರು. ವೇದಾಕಾಲದಿಂದ ಹಿಡಿದು ಬಿಳಿಯ ಮತ್ತು ಕಪ್ಪು ವರ್ಣಗಳ ನಡುವೆ ಸಂಘರ್ಷ ನಡೆಯುತ್ತಲೇ ಇದ್ದುದಕ್ಕೆ ಇಂದಿಗೂ ಅಳಿಯದೆ ಉಳಿದು ಹೆಮ್ಮರವಾಗಿ ಬೆಳೆದು ನಿಂತ ಜಾತಿ ಎಂಬ ಪದವೇ ಜ್ವಲಂತ ಉದಾಹರಣೆಯಾಗಿದೆ. ಕನ್ನಡ ಸಾಹಿತ್ಯವನ್ನು ಅವಲೋಕನ ಮಾಡಿದ್ದಾದರೆ ವರ್ಣ ಸಂಘರ್ಷದ ಛಾಯೆ ಎಲ್ಲೆಲ್ಲೂ ಕಾಣಸಿಗುತ್ತದೆ. ಇಂತಹ ಅಮಾನವೀಯ ಗುಣಗಳನ್ನು ನಮ್ಮ ಹೃದಯದದಿಂದ ಕಳಚಿ ಹಾಕಿದಾಗಲೇ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಸ್.ಐ.ಭಂಡಾರಿ ಮಾತನಾಡಿ, ಕಪ್ಪು ಮತ್ತು ಬಿಳುಪು ಒಂದೇ ನಾಣ್ಯದ ಎರಡು ಮುಖಗಳು. ಇವುಗಳನ್ನು ಹೇಗೆ ಬೇರ್ಪಡಿಸಲು ಅಸಾಧ್ಯವೋ ಅದೇ ರೀತಿ ಎರಡೂ ವರ್ಣಗಳು ಒಂದನೊಂದು ಕೂಡಿಕೊಂಡಾಗ ಮಾತ್ರ ಬದುಕು ಸಾರ್ಥಕ ಎಂದು ಹೇಳಿದರು.
ಐಕ್ಯೂಎಸಿ ಸಂಚಾಲಕ ಪ್ರೊ.ಬಸವರಾಜ ಮಹಾಜನಶೆಟ್ಟಿ, ವಿದ್ಯಾರ್ಥಿ ಸಂಘದ ಕಾರ್ಯಧ್ಯಕ್ಷ ಡಾ.ಶ್ರೀದೇವಿ ಸಿಂದಗಿ ಇದ್ದರು. ದಾನಯ್ಯ ಮಠಪತಿ, ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಜರಿದ್ದರು.