ಬದುಕಿರುವಾಗ ಜಾತಿ-ಜಾತಿ ಎಂದು ಬೈದಾಡಿಕೊಳ್ಳುತ್ತೇವೆ. ಸತ್ತ ಮೇಲು ಹೂಳಕ್ಕೂ ಜಾತಿ ಬೇಕಾ? ಎಂದ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಕಾನೂನಿನಲ್ಲಿ ಪ್ರತಿ ಧರ್ಮಕ್ಕೆ ಪ್ರತ್ಯೇಕ ರುದ್ರ ಭೂಮಿಗೆ ಅವಕಾಶ ಇದೆ. ಜಾತಿಗೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಆಡಳಿತದಲ್ಲಿ ಪಾರದರ್ಶಕತೆ ತರಲು ಇ-ಆಫೀಸ್ ಅನುಷ್ಟಾನಗೊಳಿಸಿದೆ. ಫೆ.1ರಿಂದ ಜಿಲ್ಲೆಯ ಎಲ್ಲಾ ತಹಸೀಲ್ದಾರ್‌ ಕಚೇರಿಯಲ್ಲಿ ಇ-ಕಚೇರಿ ಮೂಲಕವೇ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿ ಸ್ವೀಕೃತಿ ಸಂಖ್ಯೆ ನೀಡಬೇಕು. ಯಾವುದೇ ಕಾರಣಕ್ಕೂ ಭೌತಿಕ ಕಡತ ಪ್ರಕ್ರಿಯೆ ಇರಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಅಲ್ಲದೆ ಫೆ.1ರಿಂದ ಆವಕ ಸಿಬ್ಬಂದಿಗೆ ಸ್ಟ್ಯಾಂಪ್, ಸೀಲು ಸಹ ನೀಡಬಾರದು ಎಂದರು.

ಜಿಲ್ಲೆಯ ಶಹಾಬಾದ, ಯಡ್ರಾಮಿ, ಕಾಳಗಿ ತಹಸೀಲ್ದಾರ್‌ ಕಚೇರಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಇ-ಕಚೇರಿ ಅನುಷ್ಟಾನ ಮಾಡದಿರುವುದಕ್ಕೆ ಸಿಡಿಮಿಡಿಗೊಂಡ ಅವರು, ಪಾರದರ್ಶಕ, ಸಮಯ ಉಳಿತಾಯ, ಅಕೌಂಟೇಬಿಲಿಟಿ ಇರಲೆಂದೇ ನೂತನ ಸಾಫ್ಟವೇರ್ ಅಭಿವೃದ್ಧಿಪಡಿಸಿದೆ. ಹೊಸ ವ್ಯವಸ್ಥೆಗೆ ಹೊಂದಿಕೊಂಡು ಕಡ್ಡಾಯವಾಗಿ ಅನುಷ್ಠನಾಗೊಳಿಸಬೇಕು ಎಂದು ತಹಸೀಲ್ದಾರ್‌, ಕಂದಾಯ ಸಿಬ್ಬಂದಿಗೆ ತಾಕೀತು ಮಾಡಿದರು.

ಯಡ್ರಾಮಿ ತಹಸೀಲ್ದಾರ್‌ ಕಚೇರಿಯಲ್ಲಿ ಕಳೆದ‌ 6 ತಿಂಗಳಲ್ಲಿ ಕೇವಲ 42 ಕಡತ ಸೃಜಿಸಿದ್ದು, ಇ-ಆಫೀಸ್ ಸಮರ್ಪಕವಾಗಿ ಅನುಷ್ಠಾನ ಮಾಡದ ಕಾರಣ ತಹಸೀಲ್ದಾರರಿಗೆ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ‌ ನೀಡಿದ ಸಚಿವರು, ಜನವರಿ ಅಂತ್ಯಕ್ಕೆ ಎಲ್ಲಾ ತಹಸೀಲ್ದಾರ್‌ ಕಚೇರಿಯಲ್ಲಿ ಇ-ಕಚೇರಿಯಲ್ಲಿ ಸೃಜಿಸಿದ ಕಡತ ಪರಿಶೀಲಿಸಬೇಕು. ಶೇ.75ರಷ್ಟು ಅರ್ಜಿಗಳು ಇ-ಕಚೇರಿಯಲ್ಲಿ ಇನ್ ವಾರ್ಡ್ ಮಾಡದಿದ್ದಲ್ಲಿ ಅಂತಹವರಿಗೆ ನೋಟಿಸ್ ಜಾರಿಗೊಳಿಸಿ ಎಂದರು.

ಕೆಸ್ವಾನ್ ಸಂಪರ್ಕ ಇಲ್ಲ, ಸರ್ವರ್ ಇಲ್ಲ ಎಂಬ ಕುಂಟುನೆಪ ಬೇಡ. ನಾನು ಅದೇ ಸರ್ವರ್ ಮೂಲಕವೇ ಕಡತ ವಿಲೇವಾರಿ‌ ಮಾಡುತ್ತಿದ್ದೇನೆ. ಡಿ.ಸಿ. ಕಚೇರಿಯಿಂದ ಕಂದಾಯ ಆಯುಕ್ತರಿಗೆ ಕಡತ ಕಳುಹಿಸಿದಲ್ಲಿ 2-3 ದಿನದಲ್ಲಿ ಸೂಕ್ತ ಆದೇಶದ ಜೊತೆಗೆ ವಿಲೇವಾರಿ ಮಾಡಲಾಗುತ್ತಿದೆ. ಅಷ್ಟೊಂದು ತ್ವರಿತಗತಿಯಲ್ಲಿ ಸರ್ಕಾರದ ಮಟ್ಟದಲ್ಲಿ ಕಡತ ವಿಲೇವಾರಿ ಪ್ರಕ್ರಿಯೆ ನಡೆದಿದೆ. ಹಳೇ ಫೈಲ್ ಪದ್ಧತಿ ವಿಲೇವಾರಿಯಿಂದ ಹೊರ‌ಬನ್ನಿ. ತಂತ್ರಜ್ಞಾನ ಸಮರ್ಪಕವಾಗಿ ಬಳಸಬೇಕು‌ ಎಂದು ಸಿಬ್ಬಂದಿಗೆ ನಿರ್ದೇಶನ ನೀಡಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಜಿಲ್ಲೆಯಲ್ಲಿ ಇ-ಆಫೀಸ್ ಅನುಷ್ಟಾನ ಏಕೆ ಸಮರ್ಪಕವಾಗಿ ಜಾರಿ ಮಾಡುತ್ತಿಲ್ಲ. ಸಮಸ್ಯೆ ಇದ್ದರೆ ಹೇಳಿ, ಐ.ಟಿ-ಬಿ.ಟಿ‌ ಸಚಿನಾಗಿರುವುದರಿಂದ ನಮ್ಮ ಇಲಾಖೆಯಿಂದ‌ ಸಮಸ್ಯೆ ಬಗೆಹರಿಸಬಹುದಾದರೆ ಪ್ರಯತ್ನಿಸುವೆ ಎಂದ‌ ಅವರು, ಸಾರ್ವಜನಿಕರು ಕಚೇರಿಗೆ ಅಲಿಯಬೇಕು, ತಮ್ಮನ್ನು ಬಂದು ಕಾಣಬೇಕು ಎಂಬ ಹಳೇ ಪದ್ಧತಿಯಿಂದ ಹೊರಬನ್ನಿ ಎಂದರು.

ಸತ್ತ ಮೇಲೂ ಜಾತಿ ಬೇಕಾ: ಸಭೆಯಲ್ಲಿ ಸ್ಮಶಾನ ಭೂಮಿ ಚರ್ಚೆ ವೇಳೆಯಲ್ಲಿ ಜಿಲ್ಲೆಯಲ್ಲಿ 9 ಅರ್ಜಿ ಸ್ಮಶಾನ ಭೂಮಿ ಮಂಜೂರಾತಿಗೆ ಬಾಕಿ ಉಳಿದಿವೆ. ಜಾತಿಗೊಂದು ರುದ್ರ ಭೂಮಿ ಕೇಳುತ್ತಿದ್ದು, ಮಂಜೂರಾತಿಗೆ ಸಮಸ್ಯೆಯಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಚಿವ ಕೃಷ್ಣ ಬೈರೇಗೌಡ ಅವರಿಗೆ ಹೇಳಿದರು. ಆಗ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಬದುಕಿರುವಾಗ ಜಾತಿ-ಜಾತಿ ಎಂದು ಬೈದಾಡಿಕೊಳ್ಳುತ್ತೇವೆ. ಸತ್ತ ಮೇಲು ಹೂಳಕ್ಕೂ ಜಾತಿ ಬೇಕಾ? ಎಂದ ಅವರು ಕಾನೂನಿನಲ್ಲಿ ಪ್ರತಿ ಧರ್ಮಕ್ಕೆ ಪ್ರತ್ಯೇಕ ರುದ್ರ ಭೂಮಿಗೆ ಅವಕಾಶ ಇದೆ. ಜಾತಿಗೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬಗರ್ ಹುಕುಂ ಸಾಗುವಳಿ ಚೀಟಿ ವಿತರಣೆ ಮೇಲೆ ನಿಗಾ ಇಡಿ: ರಾಜ್ಯದಲ್ಲಿ ಬಗರ್ ಹುಕುಂ ಸಾಗುವಳಿ ಇದ್ದು, 50 ಲಕ್ಷ‌ ಎಕರೆ ಸಾಗುವಳಿ ಚೀಟಿಗೆ ಅರ್ಜಿ ಬಂದಿರೋದು 54 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ. ಸಾಗುವಳಿ ಅಲ್ಲದವರು ಅರ್ಜಿ ಹಾಕಿದ್ದಾರೆ. ಸೂಕ್ತವಾಗಿ ಪರಿಶೀಲಿಸಿ ರೆಸೋಲುಷನ್ ಪಾಸ್ ಮಾಡಿ ಸಾಗುವಳಿ ಚೀಟಿ ವಿತರಿಸಬೇಕು. ಇನ್ನು ಮುಂದೆ ಸಾಗುವಳಿ ‌ಚೀಟಿ ಜೊತೆಗೆ ಪೋಡಿ ಸ್ಕೆಚ್ ನೀಡುವ ಚಿಂತನೆ ನಡೆದಿದೆ. ಮುಮದೆ ಆನ್‌ಲೈನ್ ಮೂಲಕವೇ ಸಾಗುವಳಿ ಚೀಟಿ ನೀಡಲಾಗುವುದು ಎಂದರು.

ಶಾಸಕರಾದ ಎಂ.ವೈ. ಪಾಟೀಲ, ಕನೀಜ್ ಫಾತಿಮಾ, ಕಂದಾಯ ಇಲಾಖೆಯ ಆಯುಕ್ತ ಸುನೀಲ ಕುಮಾರ, ಜಿಲ್ಲಾ ಪಂಚಾಯ್ತಿ ಸಿ.ಇ.ಓ ಭಂವರ್ ಸಿಂಗ್ ಮೀನಾ ಸೇರಿದಂತೆ ತಹಸೀಲ್ದಾರರು, ಸಬ್ ರಿಜಿಸ್ಟ್ರಾರ್, ಇತರೆ ಅಧಿಕಾರಿಗಳು ಇದ್ದರು.