ಮಕ್ಕಳ ಮನಸ್ಸಿನಲ್ಲಿ ಜಾತಿ ಭಾವನೆ ಬಿತ್ತಬಾರದು

| Published : Jan 22 2024, 02:21 AM IST

ಸಾರಾಂಶ

ಮಕ್ಕಳು ತಾಯಂದಿರ ಅಕ್ಕರೆಯಲ್ಲಿ ಬೆಳೆಯ ಬೇಕು. ಮಾತೃ ವಾತ್ಸಲ್ಯದಲ್ಲಿ ಬೆಳೆದ ಮಕ್ಕಳಿಗೆ ಮಾತೃ ಪ್ರೇಮ ಹಾಗೂ ಸಂಬಂಧಗಳ ಮಹತ್ವದ ಅರಿವು ಮೂಡಲಿದೆ. ಆದ್ದರಿಂದ ಮಠದ ಎಲ್ಲ ಶಾಲೆಗಳಲ್ಲಿ ಪ್ರತಿ ವರ್ಷ ಈ ಕಾರ್ಯಕ್ರಮವನ್ನು ಆಯೋಜಿಸಿಕೊಂಡು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸಮಾಜದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಕಿತ್ತಾಟವಿದೆ. ಇಂತಹದ್ದರ ನಡುವೆ ಇಲ್ಲಿ ಮಕ್ಕಳಿಗೆ ಊಟ ಬಡಿಸುವಾಗ ಯಾರೂ ಸಹ ಜಾತಿ, ಧರ್ಮವನ್ನು ಕೇಳಲಿಲ್ಲ. ಮಕ್ಕಳ ಮನಸ್ಸಿನಲ್ಲಿ ಜಾತಿ, ಧರ್ಮಗಳಿಗೆ ಹೊರತಾದ ಭಾವನೆಗಳು ಬೆಳೆಯಬೇಕು’ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಹೇಳಿದರು.

ಗೌರಿಬಿದನೂರು ನಗರದ ಬಿ.ಜಿ.ಎಸ್.ಪಬ್ಲಿಕ್ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಮಾತೃ ಭೋಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ‘ಪಾಠ ‍‍ಪ್ರವಚನಗಳು ಎಲ್ಲ ಶಾಲೆಗಳಲ್ಲಿಯೂ ಆಗುತ್ತದೆ. ಆದರೆ ಮಾತೃಭೋಜನದಂತಹ ಕಾರ್ಯಕ್ರಮಗಳು ಎಲ್ಲಾ ಶಾಲೆಗಳಲ್ಲಿ ನಡೆಯಬೇಕು ಎಂದು ಹೇಳಿದರು.

ತಾಯಿಯ ಅಕ್ಕರೆಯಲ್ಲಿ ಬೆಳೆಯಬೇಕು

ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಕಾರ್ಯದರ್ಶಿ ಮಂಗಳಾನಾಥಸ್ವಾಮೀಜಿ ಮಾತನಾಡಿ, ಮಕ್ಕಳು ತಾಯಂದಿರ ಅಕ್ಕರೆಯಲ್ಲಿ ಬೆಳೆಯ ಬೇಕು. ಮಾತೃ ವಾತ್ಸಲ್ಯದಲ್ಲಿ ಬೆಳೆದ ಮಕ್ಕಳಿಗೆ ಮಾತೃ ಪ್ರೇಮ ಹಾಗೂ ಸಂಬಂಧಗಳ ಮಹತ್ವದ ಅರಿವು ಮೂಡಲಿದೆ. ಆದ್ದರಿಂದ ಮಠದ ಎಲ್ಲ ಶಾಲೆಗಳಲ್ಲಿ ಪ್ರತಿ ವರ್ಷ ಈ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದರು.ಮಾಜಿ ಶಾಸಕಿ ಎನ್.ಜ್ಯೋತಿ ರೆಡ್ಡಿ ಮಾತನಾಡಿ, ಪ್ರತಿ ಮನೆಯಲ್ಲಿ ತಾಯಿಯ ಪಾತ್ರ ಬಹುಮುಖ್ಯ. ತಾಯಿಯು ಸರಿಯಾದ ಗಮನ ಕಡೆ ಹರಿಸಿದರೆ ಮಕ್ಕಳು ಉತ್ತಮ ಪ್ರಜೆಗಳಾಗಿ ಬೆಳೆಯುತ್ತಾರೆ. ಮಕ್ಕಳಿಗೆ ಮಾತೃ ಪ್ರೇಮದ ಸವಿ ತುತ್ತು ಉಣಿಸುವ ಈ ಕಾರ್ಯಕ್ರಮ ತುಂಬಾ ವೈಶಿಷ್ಟ್ಯವಾಗಿದೆ ಎಂದರು.

ಮಾತೃಭೋಜನದ ಪ್ರಯುಕ್ತ ತಾಯಂದಿರು ಬಗೆ ಬಗೆಯ ಊಟ ತಿಂಡಿಗಳನ್ನು ಮನೆಯಲ್ಲಿ ಮಾಡಿಕೊಂಡು ಬುತ್ತಿ ಕಟ್ಟಿಕೊಂಡು ಶಾಲೆಗೆ ಬಂದಿದ್ದರು. ಜಾತಿ ಧರ್ಮಗಳ ಬೇದವಿಲ್ಲದೆ ತಮ್ಮ ಮಕ್ಕಳಿಗೆ ಮಾತ್ರವಲ್ಲದೆ ಇತರರ ಮಕ್ಕಳಿಗೂ ಕೈತುತ್ತು ತಿನಿಸುವ ಮೂಲಕ ಮಾತೃ ವಾತ್ಸಲ್ಯ ಮೆರೆದರು. ಈ ವೇಳೆ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ಬಿಜಿಎಸ್‌ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಡಾ.ಎನ್. ಶಿವರಾಮರೆಡ್ಡಿ,ಪ್ರಾಂಶುಪಾಲ ಚಿಕ್ಕಪ್ಪ, ನಗರಸಭೆ ಮಾಜಿ ಸದಸ್ಯ ಕೆ.ಎಸ್.ಅನಂತ ರಾಜು , ಶಾಲೆಯ ಬೋಧಕ ಬೋಧಕೇತರ ಸಿಬ್ಬಂದಿ,ವಿದ್ಯಾರ್ಥಿಗಳು ಮತ್ತು ಪೋಷಕರು ಇದ್ದರು.