ಜಾತಿ ವ್ಯವಸ್ಥೆ ತೋಲಗಿ ಶಿಕ್ಷಣ ಬೆಳಗಬೇಕು

| Published : Apr 15 2025, 12:54 AM IST

ಸಾರಾಂಶ

ಜಾತಿ ವ್ಯವಸ್ಥೆ, ಅಸಮಾನತೆ, ಮೌಢ್ಯತೆ ವಿರುದ್ಧ ಬಂಡಾಯ ಸಾರಿದ ಅಂಬೇಡ್ಕರ್ ಅವರ ತತ್ವಾದರ್ಶ ಅನುಕರಿಸಬೇಕು. 12ನೇ ಶತಮಾನದಲ್ಲಿ ಬಸವಣ್ಣ, 20ನೇ ಶತಮಾನದಲ್ಲಿ ಅಂಬೇಡ್ಕರ್‌ ಸಮಾನತೆ ಬಯಸಿದ ಚಿಂತಕರಾಗಿದ್ದಾರೆ.

ಕೊಪ್ಪಳ(ಯಲಬುರ್ಗಾ):

ಅಸ್ಪೃಶ್ಯತೆ, ಮೌಢ್ಯತೆ ನಿವಾರಣೆಗೆ ಡಾ. ಬಿ.ಆರ್‌. ಅಂಬೇಡ್ಕರ್‌ ಶ್ರಮಿಸಿದ್ದರು ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ಯಲಬುರ್ಗಾದ ಬಯಲು ರಂಗಮಂದಿರದಲ್ಲಿ ತಾಲೂಕಾಡಳಿತ, ತಾಪಂ, ಪಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸೋಮವಾರ ಜರುಗಿದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಾಜಿ‌ ಉಪಪ್ರಧಾನಿ ಡಾ. ಜಗಜೀವನರಾಮ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾನು ಬಸವಣ್ಣ ಹಾಗೂ ಅಂಬೇಡ್ಕರ್‌ ಅನುಯಾಯಿಯಾಗಿದ್ದೇನೆ ಎಂದರು.

ಜಾತಿ ವ್ಯವಸ್ಥೆ, ಅಸಮಾನತೆ, ಮೌಢ್ಯತೆ ವಿರುದ್ಧ ಬಂಡಾಯ ಸಾರಿದ ಅಂಬೇಡ್ಕರ್ ಅವರ ತತ್ವಾದರ್ಶ ಅನುಕರಿಸಬೇಕು ಎಂದ ಅವರು, 12ನೇ ಶತಮಾನದಲ್ಲಿ ಬಸವಣ್ಣ, 20ನೇ ಶತಮಾನದಲ್ಲಿ ಅಂಬೇಡ್ಕರ್‌ ಸಮಾನತೆ ಬಯಸಿದ ಚಿಂತಕರಾಗಿದ್ದಾರೆ. ದೇಶದ ಪ್ರತಿಯೊಬ್ಬರಿಗೂ ಸಮಾನತೆ ಕಲ್ಪಿಸಿ, ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ ಎಂದರು.

ಡಾ. ಬಾಬು ಜಗಜೀವನರಾಮ್‌ ದೇಶಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದರಿಂದ ನೀರಾವರಿ, ಕೃಷಿ ಯೋಜನೆಗಳು ಮುನ್ನೆಲೆಗೆ ಬಂದು ಹಸಿರು ಕ್ರಾಂತಿಯ ಹರಿಕಾರರಾದರು ಎಂದು ಹೇಳಿದರು.

ನಾನು ಈ ಹಿಂದೇ ಸಚಿವನಾದ ವೇಳೆ ಅಂಬೇಡ್ಕರ್ ಹೆಸರಿನಲ್ಲಿ ಬೆಂಗಳೂರಿನ ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್‌ ಸಂಸ್ಥೆ ತೆರೆದು ₹ 250 ಕೋಟಿ ವೆಚ್ಚದಲ್ಲಿ 40 ಎಕರೆ ಪ್ರದೇಶದಲ್ಲಿ ಅಂಬೇಡ್ಕರ್‌ ಕುರಿತು ಅಧ್ಯಯನ ಮಾಡಲು ವಿವಿಗೆ ಅನುದಾನ ನೀಡಿದ್ದೇನೆ ಎಂದ ಅವರು, ದೇಶದಲ್ಲಿ ಜಾತಿ ವ್ಯವಸ್ಥೆ ಸಂಪೂರ್ಣವಾಗಿ ತೊಲಗಬೇಕು. ಜಾತಿಯತೆಯಿಂದ ಸಮಾಜ ಮತ್ತಷ್ಟು ದುರ್ಬಲವಾಗುತ್ತದೆ. ಅಸ್ಪೃಶ್ಯತೆ, ಮೌಢ್ಯತೆ ನಿವಾರಣೆಯಾಗಬೇಕು. ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು.

ಈ ವೇಳೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ಉಪನ್ಯಾಸಕ ತಿಮ್ಮಾರಡ್ಡಿ ಮಾತನಾಡಿದರು.

ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ತಹಸೀಲ್ದಾರ್ ಗುರುರಾಜ ಛಲವಾದಿ, ತಾಪಂ ಇಒ ಸಂತೋಷ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆರಿಬಸಪ್ಪ ನಿಡಗುಂದಿ, ಪಿಕಾರ್ಡ್‌ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಶಿಧರ ಸಕ್ರಿ, ಅಧಿಕಾರಿಗಳಾದ ಬಿ. ಮಲ್ಲಿಕಾರ್ಜುನ, ನಾಗೇಶ, ನಿಂಗನಗೌಡ ಪಾಟೀಲ್, ಸೋಮಶೇಖರಗೌಡ ಪಾಟೀಲ್, ಸಚಿನ್ ಪಾಟೀಲ್, ಮೌನೇಶ್ವರ ಮಾಲಿಪಾಟೀಲ್, ಬಸವರಾಜ ಗೋಗೇರಿ, ಪ್ರಮೋದ ತುಂಬಳ,‌ ಅಂದಾನಗೌಡ ಉಳ್ಳಾಗಡ್ಡಿ, ಸಂಗಣ್ಣ ತೆಂಗಿನಕಾಯಿ, ಅಂದಪ್ಪ ಹಾಳಕೇರಿ, ರೇವಣಪ್ಪ ಸಂಗಟಿ, ಸಿದ್ದಪ್ಪ ಕಟ್ಟಿಮನಿ, ಆನಂದ ಉಳ್ಳಾಗಡ್ಡಿ, ವಸಂತ ಭಾವಿಮನಿ, ಮಲ್ಲಿಕಾರ್ಜುನ ‌ಜಕ್ಕಲಿ ಸೇರಿದಂತೆ ಇತರರು ಇದ್ದರು.ಸಂವಿಧಾನ ಪೀಠಿಕೆ ಹೊತ್ತು ಸಾಗಿದ ಮಹಿಳೆಯರು

ಡಾ. ಬಿ.ಆರ್‌. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಮ್ ಅವರ ಭಾವಚಿತ್ರ ಮೆರವಣಿಗೆ ಪಟ್ಟಣದ ಪ್ರಮುಖ‌ ಬೀದಿಗಳಲ್ಲಿ ಸಕಲ ವಾದ್ಯ ವೃಂದದೊಂದಿಗೆ ಸಾಗಿತು. ಈ ವೇಳೆ ಮಹಿಳೆಯರು ಕುಂಭದ ಬದಲು ಸಂವಿಧಾನ ಪೀಠಿಕೆ ಹೊತ್ತು ಸಾಗಿದರು.