ಶುಶ್ರೂಷಕಿ ಜಾತಿ ಸಿಂಧುತ್ವ ಪ್ರಮಾಣಪತ್ರ ನೀಡಲು 15 ವರ್ಷಗಳಿಂದ ಸತಾಯಿಸಿದ್ದಲ್ಲದೆ, ಆಕೆಯ ಸಂಬಳವನ್ನು ತಿಂಗಳಿಗೆ ಕೇವಲ 10 ಸಾವಿರಕ್ಕೆ ಸೀಮಿತಗೊಳಿಸಿರುವ ಸರ್ಕಾರ ಮತ್ತು ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಛೀಮಾರಿ ಹಾಕಿರುವ ಹೈಕೋರ್ಟ್, ರೋಗಿಗಳ ಆರೈಕೆಗೆ ಜೀವನ ಮೀಸಲಿಟ್ಟಿರುವ ಶುಶ್ರೂಷಕಿಯನ್ನು ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿರುವುದು ಅಕ್ಷಮ್ಯ ಅಪರಾಧ ಎಂದು ಕಿಡಿಕಾರಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಶುಶ್ರೂಷಕಿ ಜಾತಿ ಸಿಂಧುತ್ವ ಪ್ರಮಾಣಪತ್ರ ನೀಡಲು 15 ವರ್ಷಗಳಿಂದ ಸತಾಯಿಸಿದ್ದಲ್ಲದೆ, ಆಕೆಯ ಸಂಬಳವನ್ನು ತಿಂಗಳಿಗೆ ಕೇವಲ 10 ಸಾವಿರಕ್ಕೆ ಸೀಮಿತಗೊಳಿಸಿರುವ ಸರ್ಕಾರ ಮತ್ತು ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಛೀಮಾರಿ ಹಾಕಿರುವ ಹೈಕೋರ್ಟ್, ರೋಗಿಗಳ ಆರೈಕೆಗೆ ಜೀವನ ಮೀಸಲಿಟ್ಟಿರುವ ಶುಶ್ರೂಷಕಿಯನ್ನು ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿರುವುದು ಅಕ್ಷಮ್ಯ ಅಪರಾಧ ಎಂದು ಕಿಡಿಕಾರಿದೆ. ತಾನು ಹೊಂದಿರುವ ಹುದ್ದೆಯ ಶ್ರೇಣಿಗೆ ಅನುಗುಣವಾಗಿ ವೇತನ ನೀಡಲು ಮತ್ತು ಜಾತಿ ಸಿಂಧುತ್ವ ಪ್ರಮಾಣ ಪತ್ರ ವಿತರಿಸಲು ಸರ್ಕಾರ ಮತ್ತು ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ನಿರ್ದೇಶಿಸುವಂತೆ ಕೋರಿ ಕರ್ನಾಟಕ ವೈದ್ಯಕೀಯ ವಿಜ್ಞಾನ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಕ್ಯಾಥ್ ಲ್ಯಾಬ್ ವಿಭಾಗದ ನರ್ಸಿಂಗ್ ಅಧಿಕಾರಿ ಅನಸೂಯಾ ಪಿ.ಕೋಟಿ ಸಲ್ಲಿಸಿರುವ ತಕರಾರು ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ನೇತೃತ್ವದ ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.ಅನಸೂಯಾ ಅವರಿಗೆ ಸಮಾನವಾಗಿ ಕರ್ತವ್ಯ ನಿರ್ವಹಿಸುವ ಮತ್ತೊಬ್ಬ ಉದ್ಯೋಗಿ 36 ಸಾವಿರದಿಂದ 67,550 ರು.ವರೆಗೆ ವೇತನ ಶ್ರೇಣಿಯಲ್ಲಿದ್ದಾರೆ. ಆದರೆ, ಸರ್ಕಾರ ಜಾತಿ ಸಿಂಧುತ್ವ ಪ್ರಮಾಣ ಪತ್ರ ವಿತರಿಸದ್ದಕ್ಕೆ ಮೇಲ್ಮನವಿದಾರರು ಮಾಸಿಕ ಕೇವಲ 10 ಸಾವಿರ ರು. ಅತ್ಯಲ್ಪ ಪ್ರಮಾಣದ ವೇತನ ಪಡೆಯುತ್ತಾ ಜೀವನ ಸಾಗಿಸುತ್ತಿದ್ದಾರೆ. ಒಬ್ಬ ಉದ್ಯೋಗಿಯ ಕಾನೂನುಬದ್ಧ ಹಕ್ಕನ್ನು ತಳ್ಳಿಹಾಕಿ ಅವರನ್ನು ಶಾಶ್ವತವಾದ ಆರ್ಥಿಕ ನಷ್ಟಕ್ಕೆ ಗುರಿಪಡಿಸಲು ಸಾಧ್ಯವಿಲ್ಲ ಎಂದು ಪೀಠ ಆಕ್ರೋಶ ವ್ಯಕ್ತಪಡಿಸಿದೆ.ಕಣ್ಮುಚ್ಚಿ ಕೂರಲಾಗದು:
ಸಮಾನ ವೇತನ ಪಾವತಿ ಆಗದಿರುವಾಗ ಹಾಗೂ ಉದ್ಯೋಗಿ ಜೀವನೋಪಾಯ ಮತ್ತು ಘನತೆಗೆ ಸಂಬಂಧಿಸಿದ ಪ್ರಶ್ನೆ ಎದುರಾದಾಗ ನ್ಯಾಯಾಲಯ ಕಣ್ಮುಚ್ಚಿ ಕೂರಲಾಗದು. ಅನಸೂಯ ಅವರಿಗೆ ಜಾತಿ ಸಿಂಧುತ್ವ ಪ್ರಮಾಣ ಪತ್ರ ನೀಡಲು ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಸೂಚಿಸಿ 2011ರ ಜೂ.29ರಂದು ಹೈಕೋರ್ಟ್ ಏಕ ಸದಸ್ಯಪೀಠ ಹೊರಡಿಸಿದ ಆದೇಶ ಈವರೆಗೆ ಪಾಲನೆಯಾಗದಿರುವುದು ನ್ಯಾಯಾಲಯದ ಅಂತಃಸಾಕ್ಷಿಯನ್ನೇ ಕಲಕುತ್ತಿದೆ. ಹಾಗಾಗಿ, ಈ ಆದೇಶದ ಪ್ರತಿಯನ್ನು ಸ್ವೀಕರಿಸಿದ ದಿನದಿಂದ ನಾಲ್ಕು ವಾರಗಳ ಅವಧಿಯಲ್ಲಿ ಮೇಲ್ಮನವಿದಾರರು ಮೊಗೇರ ಜಾತಿಗೆ ಸೇರಿರುವ ಬಗ್ಗೆ ಜಾತಿ ಸಿಂಧುತ್ವ ಪ್ರಮಾಣ ಪತ್ರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕರಿಗೆ ಪೀಠ ತಾಕೀತು ಮಾಡಿದೆ.ಕಳೆದ ಹದಿನೈದು ವರ್ಷಗಳಲ್ಲಿ ಮೇಲ್ಮನವಿದಾರರು ಅನುಭವಿಸಿದ್ದಾರೆಂದು ಹೇಳಲಾದ ವೇತನ ನಷ್ಟವನ್ನು, ಜಾತಿ ಸಿಂಧುತ್ವ ಪ್ರಮಾಣ ಪತ್ರವನ್ನು ದೀರ್ಘಕಾಲದವರೆಗೆ ನೀಡದ್ದಕ್ಕೆ ಕಾರಣರಾದ ಅಧಿಕಾರಿಗಳಿಂದ ಏಕೆ ವಸೂಲಿ ಮಾಡಬಾರದು ಎಂಬುದರ ಬಗ್ಗೆ ಸರ್ಕಾರ ಮುಂದಿನ ವಿಚಾರಣೆ ವೇಳೆ ಕಾರಣ ತಿಳಿಸಬೇಕು ಎಂದು ಪೀಠ ಸೂಚಿಸಿದೆ. ಜೊತೆಗೆ, ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ, ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಮತ್ತು ಜಾತಿ ಸಿಂಧುತ್ವ ಪರಿಶೀಲನಾ ಸಮಿತಿಯ ಅಧ್ಯಕ್ಷರೂ ಆದ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಅ.29ಕ್ಕೆ ಮುಂದೂಡಿದೆ.
