ದ.ಕ. ಸಮಗ್ರ ಅಭಿವೃದ್ಧಿಗೆ ‘ಕ್ಯಾಚಪ್ ಕ್ಯಾಪ್ಟನ್‌’ ವೇದಿಕೆ: ಬ್ರಿಜೇಶ್‌ ಚೌಟ

| Published : Apr 25 2024, 01:01 AM IST

ದ.ಕ. ಸಮಗ್ರ ಅಭಿವೃದ್ಧಿಗೆ ‘ಕ್ಯಾಚಪ್ ಕ್ಯಾಪ್ಟನ್‌’ ವೇದಿಕೆ: ಬ್ರಿಜೇಶ್‌ ಚೌಟ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣಾ ಅಧಿಕಾರಿಗಳೂ ತಾಪಮಾನ ಹಿನ್ನೆಲೆಯಲ್ಲಿ ಬೇಗನೆ ಮತದಾನಕ್ಕೆ ಪೂರಕ ವಾತಾವರಣ ಕಲ್ಪಿಸುತ್ತಾರೆ ಎಂದು ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ.ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಕೋನದಡಿ ಕಾರ್ಯನಿರ್ವಹಿಸಲು ಎಲ್ಲ ವರ್ಗಗಳ ಅಭಿಪ್ರಾಯ ಸಂಗ್ರಹಕ್ಕೆ ‘ಕ್ಯಾಚಪ್‌ ಕ್ಯಾಪ್ಟನ್‌’ ಹೆಸರಿನಲ್ಲಿ ಪ್ರತ್ಯೇಕ ವೇದಿಕೆ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ದ.ಕ. ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್ ಚೌಟ ಹೇಳಿದ್ದಾರೆ.

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ನಾನು ಗೆದ್ದುಬಂದರೆ, ಪ್ರಣಾಳಿಕೆಯಲ್ಲಿರುವ ಎಲ್ಲ ಒಂಭತ್ತು ಅಂಶಗಳ ಈಡೇರಿಕೆಗೆ ಮುಂದಾಗುತ್ತೇನೆ. ವಿವಿಧ ವರ್ಗದ ಜನತೆಯ ಜತೆ ಸಂವಾದ ನಡೆಸಿ ಅಭಿಪ್ರಾಯ ಕ್ರೋಢೀಕರಿಸಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುತ್ತೇನೆ ಎಂದರು.

ನಾಮಪತ್ರ ಸಲ್ಲಿಕೆ ಬಳಿಕ ಕ್ಷೇತ್ರದಾದ್ಯಂತ ಓಡಾಟ ನಡೆಸಿದ್ದೇನೆ. ಕಾರ್ಯಕರ್ತರ ಮೂಲಕ ಮತದಾರರ ತಲುಪುವ ಪ್ರಯತ್ನ ನಡೆಸಿದ್ದೇನೆ. ಆಯ್ಕೆಯಾದರೆ ಹಿಂದುತ್ವಕ್ಕೆ ಬದ್ಧವಾಗಿ ಕೆಲಸ ಮಾಡುತ್ತೇನೆ ಎಂದರು.

ದ.ಕ.ಜಿಲ್ಲೆಯ ಜನತೆ ಶಾಂತಿಪ್ರಿಯರು. ಹಿಂದುತ್ವ ಎಲ್ಲವನ್ನೂ ಒಳಗೊಂಡ ಜಿಲ್ಲೆ ಇದು. ಆದರೆ ಜಿಲ್ಲೆಯ ಬಗ್ಗೆ ಅಭಿಮಾನ ಇಲ್ಲದವರು ಕೋಮು ಸಾಮರಸ್ಯ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ವಾಸ್ತವದಲ್ಲಿ ಇದು ಸಾಮರಸ್ಯದ ಸ್ವಾಭಿಮಾನಿ ಜಿಲ್ಲೆಯಾಗಿದ್ದು, ಈ ಅಪಪ್ರಚಾರವನ್ನು ಮೆಟ್ಟಿ ನಿಲ್ಲುವ ಕೆಲಸ ಮುಂದಿನ ದಿನಗಳಲ್ಲಿ ಆಗಲಿದೆ ಎಂದರು. ಬೇಗನೆ ಮತದಾನ ಮಾಡಿ:

ಏ.26ರಂದು ಬೇಗನೆ ಮತಗಟ್ಟೆಗೆ ಬಂದು ಮತದಾನ ಮಾಡಿ. ಕರಾವಳಿಯಲ್ಲಿ ಬಿಸಿಲ ಝಳ ವಿಪರೀತವಾಗಿರುವುದರಿಂದ ಬೆಳಗ್ಗೆಯೇ ಸಾಧ್ಯವಾದಷ್ಟು ಮಂದಿ ಮತಗಟ್ಟೆಗೆ ಬಂದು ಮತ ಚಲಾಯಿಸಬೇಕು. ಕರಾವಳಿಯ ಬಿಸಿಲಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೂ ಇತ್ತೀಚೆಗೆ ನನಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿ, ಬೇಗನೆ ಮತ ಚಲಾಯಿಸುವಂತೆ ವಿನಂತಿಸಿದ್ದಾರೆ. ಚುನಾವಣಾ ಅಧಿಕಾರಿಗಳೂ ತಾಪಮಾನ ಹಿನ್ನೆಲೆಯಲ್ಲಿ ಬೇಗನೆ ಮತದಾನಕ್ಕೆ ಪೂರಕ ವಾತಾವರಣ ಕಲ್ಪಿಸುತ್ತಾರೆ ಎಂದು ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಹೇಳಿದರು.

ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಚುನಾವಣಾ ಜಿಲ್ಲಾ ಸಂಚಾಲಕ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌, ಪ್ರಭಾರಿ ನಿತಿನ್‌ ಕುಮಾರ್‌, ಸಹ ಸಂಚಾಲಕ ಪ್ರೇಮಾನಂದ ಶೆಟ್ಟಿ, ಮಾಜಿ ಅಧ್ಯಕ್ಷ ಸುದರ್ಶನ್‌ ಮೂಡುಬಿದಿರೆ, ಮಾಜಿ ಶಾಸಕ ರುಕ್ಮಯ ಪೂಜಾರಿ, ಜಿಲ್ಲಾ ಕಾರ್ಯದರ್ಶಿ ಸತೀಶ್‌ ಆರ್ವಾರ್‌ ಇದ್ದರು.