ಕ್ಯಾಟರಿಂಗ್‌ ಕೆಲಸ ಮಾಡುವವರ ಪುತ್ರಿ ರಾಜ್ಯಕ್ಕೆ 4ನೇ ರ‍್ಯಾಂಕ್‌

| Published : Apr 09 2025, 02:03 AM IST

ಕ್ಯಾಟರಿಂಗ್‌ ಕೆಲಸ ಮಾಡುವವರ ಪುತ್ರಿ ರಾಜ್ಯಕ್ಕೆ 4ನೇ ರ‍್ಯಾಂಕ್‌
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ಕಾಡಸಿದ್ದೇಶ್ವರ ಕಲಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಇನಿಷ್ಕಾ ನಡುಗಡ್ಡಿ ದ್ವಿತೀಯ ಪಿಯುಸಿ ಕಲಾ ಪರೀಕ್ಷೆಯಲ್ಲಿ 594(ಶೇ. 99) ಅಂಕ ಪಡೆಯುವ ಮೂಲಕ ರಾಜ್ಯಕ್ಕೆ 4ನೇ ಸ್ಥಾನ, ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾಳೆ.

ಹುಬ್ಬಳ್ಳಿ: ಇಲ್ಲಿನ ಕಾಡಸಿದ್ದೇಶ್ವರ ಕಲಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಇನಿಷ್ಕಾ ನಡುಗಡ್ಡಿ ದ್ವಿತೀಯ ಪಿಯುಸಿ ಕಲಾ ಪರೀಕ್ಷೆಯಲ್ಲಿ 594(ಶೇ. 99) ಅಂಕ ಪಡೆಯುವ ಮೂಲಕ ರಾಜ್ಯಕ್ಕೆ 4ನೇ ಸ್ಥಾನ, ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾಳೆ.

ಇನಿಷ್ಕಾ ಹಿಂದಿ- 98, ಇಂಗ್ಲೀಷ್- 96, ಇತಿಹಾಸ- 100, ರಾಜ್ಯಶಾಸ್ತ್ರ- 100, ಅರ್ಥಶಾಸ್ತ್ರ- 100. ಭೂಗೋಳಶಾಸ್ತ್ರ- 100 ಅಂಕಗಳೊಂದಿಗೆ 600ಕ್ಕೆ 594(ಶೇ. 99) ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾಳೆ.

ಇಲ್ಲಿನ ಪಾಲಾ ಬಾದಾಮಿ ರಸ್ತೆಯ ಬಾಷಲ್‌ ಮಿಷನ್‌ ಹತ್ತಿರ ನೆಲೆಸಿರುವ ಇನಿಷ್ಕಾ ತಂದೆ ನವೀನ್ ನಡುಗಡ್ಡಿ ಕಳೆದ 2018ರಲ್ಲಿ ನಿಧನರಾಗಿದ್ದಾರೆ. ತಾಯಿ ಪ್ರಾಂಜೆಲಾ ನಡುಗಡ್ಡಿ ಕ್ಯಾಟರಿಂಗ್‌ ಕೆಲಸ ಮಾಡುತ್ತಿದ್ದು, ಇವರೇ ಕುಟುಂಬಕ್ಕೆ ಜೀವನಾಧಾರವಾಗಿದ್ದಾರೆ.

ತಾಯಿಯೇ ಆಸರೆ

ತಂದೆ ನಿಧನರಾಗಿದ್ದರಿಂದ ಇನಿಷ್ಕಾಗೆ ತಾಯಿಯೇ ಆಸರೆ. ಜತೆಗೆ ಅಜ್ಜ-ಅಜ್ಜಿಯರು ಇವಳ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ. ಕ್ಯಾಟರಿಂಗ್‌ ಕೆಲಸದಿಂದ ಬರುವ ಆದಾಯದಿಂದಲೇ ಇವರ ಜೀವನ ಸಾಗುತ್ತಿದೆ. ಮಧ್ಯಮ ವರ್ಗದ ಕುಟುಂಬವಾಗಿದ್ದರೂ ಪ್ರಾಂಜೆಲಾ ಅವರು ತಮ್ಮ ಪುತ್ರಿ ಇನಿಷ್ಕಾಳ ಕಲಿಕೆಗೆ ಯಾವುದೇ ರೀತಿ ಕಡಿಮೆ ಮಾಡಿಲ್ಲ. ಓದಿನಲ್ಲಿ ಸದಾ ಮುಂದು

ಇನಿಷ್ಕಾ ಕಾಲೇಜಿನಲ್ಲಿ ಮೊದಲಿನಿಂದಲೂ ಓದಿನಲ್ಲಿ ಸದಾ ಮುಂದೆ ಇದ್ದಳು. ಕಾಲೇಜಿನಲ್ಲಿ ನಡೆಯುವ ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿಯಿಂದ ಪಾಲ್ಗೊಳ್ಳುವ ಮೂಲಕ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾಳೆ. ಇವಳ ಕಲಿಕೆಗೆ ಕಾಲೇಜಿನ ಸರ್ವ ಸಿಬ್ಬಂದಿ ಕೈಜೋಡಿಸಿದ್ದಾರೆ. ವಿದ್ಯಾರ್ಥಿನಿಯ ಈ ಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ ಎಂದು ಕಾಲೇಜು ಪ್ರಾಚಾರ್ಯೆ ನಿರ್ಮಲಾ ಅಣ್ಣಿಗೇರಿ ಕನ್ನಡಪ್ರಭಕ್ಕೆ ತಿಳಿಸಿದರು.ಅರ್ಥಶಾಸ್ತ್ರದಲ್ಲಿ ಆಸಕ್ತಿ

ನನ್ನ ಈ ಸಾಧನೆಗೆ ತಾಯಿ, ಕಾಲೇಜು ಸಿಬ್ಬಂದಿ ಪ್ರೋತ್ಸಾಹ ಕಾರಣ. ಅರ್ಥಶಾಸ್ತ್ರ ವಿಭಾಗದಲ್ಲಿ ಹೆಚ್ಚಿನ ವ್ಯಾಸಂಗ ಮಾಡುವ ಆಸಕ್ತಿಯಿದೆ.

- ಇನಿಷ್ಕಾ ನಡುಗಡ್ಡಿ, ಕಲಾ ವಿಭಾಗದಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಪಡೆದ ವಿದ್ಯಾರ್ಥಿನಿ