ಬೇಬಿ ಬೆಟ್ಟದಲ್ಲಿ ಫೆ.26 ರಿಂದ ದನಗಳ ಜಾತ್ರೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ

| Published : Feb 08 2025, 12:31 AM IST

ಬೇಬಿ ಬೆಟ್ಟದಲ್ಲಿ ಫೆ.26 ರಿಂದ ದನಗಳ ಜಾತ್ರೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಬೇಬಿಬೆಟ್ಟದ ಜಾತ್ರಾ ಮಹೋತ್ಸವದಲ್ಲಿ ಹಲವು ಸಾಂಸ್ಕೃತಿಕ ಕಾರ್‍ಯಕ್ರಮಗಳು, ಕ್ರೀಡೆಗಳು, ವಸ್ತುಪ್ರದರ್ಶನ, ಮಹಿಳಾ ಸಾಂಸ್ಕೃತಿಕ ಉತ್ಸವ, ಉಚಿತ ಸರಳ ಸಾಮೂಹಿಕ ವಿವಾಹ, ಆರೋಗ್ಯ ಶಿಬಿರಗಳು, ರಥೋತ್ಸವ, ತೆಪ್ಪೋತ್ಸವ, ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ ಕಾರ್‍ಯಕ್ರಮಗಳು ನಡೆಯಲಿವೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಬೇಬಿಬೆಟ್ಟದಲ್ಲಿ ಇದೇ ಫೆ.26 ರಿಂದ ಮಾ.5ರವರೆಗೆ ನಡೆಯುವ ಭಾರೀ ದನಗಳ ಜಾತ್ರಾ ಮಹೋತ್ಸವ ಹಾಗೂ ಉಚಿತ ಸರಳ ಸಾಮೂಹಿಕ ವಿವಾಹ ಮಹೋತ್ಸವ ಕುರಿತು ಜಿಲ್ಲಾದ್ಯಂತ ಪ್ರಚಾರ ನಡೆಸಲು ರಥಕ್ಕೆ ಪಟ್ಟಣದಲ್ಲಿ ಶಾಸಕ ದರ್ಶನ್‌ ಪುಟ್ಟಣ್ಣಯ್ಯ, ಶ್ರೀರಾಮಯೋಗೀಶ್ವರ ಮಠದ ಶ್ರೀ ಶಿವಬಸವ ಸ್ವಾಮೀಜಿ ಚಾಲನೆ ನೀಡಿದರು.

ಐದು ದೀಪದ ವೃತ್ತದಲ್ಲಿ ಚಾಲನೆ ನೀಡಿದ ನಂತರ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಮಾತನಾಡಿ, ತಾಲೂಕಿನ ಬೇಬಿಬೆಟ್ಟದ ಅಮೃತ ಕಾವಲ್ ಪ್ರದೇಶದಲ್ಲಿ ಪ್ರತಿ ವರ್ಷ ನಡೆಯುವ ಭಾರೀ ದನಗಳ ಜಾತ್ರಾ ಮಹೋತ್ಸವವು ರಾಜ್ಯದಲ್ಲಿಯೇ ಸಾಕಷ್ಟು ಪ್ರಸಿದ್ಧಿ ಹೊಂದಿದೆ ಎಂದರು.

ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ರಾಸುಗಳು, ರೈತರು ಭಾಗವಹಿಸುತ್ತಾರೆ. ಜಾತ್ರೆಗೆ ಆಗಮಿಸುವ ರಾಸುಗಳಿಗೆ ವಾಸ್ತವ್ಯಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಿಕೊಳ್ಳಲಾಗಿದೆ. ಬೇಬಿಬೆಟ್ಟದ ಸುತ್ತಮುತ್ತಲಿನ ಗ್ರಾಪಂಗಳ ಅಧಿಕಾರಿಗಳು, ನೌಕರರು, ಸಿಬ್ಬಂದಿ ಸಕಲ ಸಿದ್ಧತೆಯನ್ನು ನಡೆಸಿಕೊಂಡಿದ್ದಾರೆ ಎಂದು ತಿಳಿಸಿದರು.

ಬೇಬಿಬೆಟ್ಟದ ಜಾತ್ರಾ ಮಹೋತ್ಸವದಲ್ಲಿ ಹಲವು ಸಾಂಸ್ಕೃತಿಕ ಕಾರ್‍ಯಕ್ರಮಗಳು, ಕ್ರೀಡೆಗಳು, ವಸ್ತುಪ್ರದರ್ಶನ, ಮಹಿಳಾ ಸಾಂಸ್ಕೃತಿಕ ಉತ್ಸವ, ಉಚಿತ ಸರಳ ಸಾಮೂಹಿಕ ವಿವಾಹ, ಆರೋಗ್ಯ ಶಿಬಿರಗಳು, ರಥೋತ್ಸವ, ತೆಪ್ಪೋತ್ಸವ, ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ ಕಾರ್‍ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.

ಮಾ.2 ರಂದು ಬೆಳಗ್ಗೆ 9.30ರಿಂದ 10ಗಂಟೆಯ ಶುಭಲಗ್ನದಲ್ಲಿ ಉಚಿತ ಸರಳ ಸಾಮೂಹಿಕ ವಿವಾಹ ನಡೆಯಲಿದೆ. ಭಾಗವಹಿಸುವ ಸಾರ್ವಜನಿಕರು ಆಯಾ ವ್ಯಾಪ್ತಿ ಗ್ರಾಪಂಗಳಲ್ಲಿ ಸಾಮೂಹಿಕ ವಿವಾಹದ ಅರ್ಜಿ ಪಡೆದು ಫೆ.20 ರೊಳಗೆ ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.

ಜಾತ್ರೆಯ ಬಹುಮಾನಕ್ಕಾಗಿ ಭಾಗವಹಿಸುವ ರಾಸುಗಳು ಫೆ.27 ರಾತ್ರಿ 10 ಗಂಟೆಯೊಳಗೆ ಸಂಬಂಧಪಟ್ಟ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳಬೇಕು. ಪ್ರಚಾರ ರಥಕ್ಕೆ ಇದೇ ಮೊದಲ ಬಾರಿಗೆ ಚಾಲನೆ ನೀಡಲಾಗಿದ್ದು, ರಥವು ಜಿಲ್ಲಾದ್ಯಂತ ಸಂಚರಿಸಿ ಪ್ರಚಾರ ನಡೆಸಲಿದೆ ಎಂದರು.

ಶ್ರೀರಾಮಯೋಗೀಶ್ವರ ಮಠದ ಶ್ರೀಶಿವಬಸವಸ್ವಾಮೀಜಿ ಮಾತನಾಡಿ, ಬೇಬಿಬೆಟ್ಟದಲ್ಲಿ ಫೆ.26ರಿಂದ ಮಾ.5ರವರೆಗೆ 8 ದಿನಗಳ ಕಾಲ ನಡೆಯುವ ಭಾರೀ ದನಗಳ ಜಾತ್ರಾ ಮಹೋತ್ಸವದ ಪ್ರಚಾರ ರಥಕ್ಕೆ ಚಾಲನೆ ನೀಡಲಾಗಿದೆ. ಶ್ರೀಮಠದ ಭಕ್ತರು, ಸಾರ್ವಜನಿಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತಿಳಿಸಿದರು.

ತಾಪಂ ಇಒ ಲೋಕೇಶ್‌ಮೂರ್ತಿ ಸೇರಿ ಹಲವು ರೈತ ಮುಖಂಡರು ಭಾಗವಹಿಸಿದ್ದರು.