ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕಾಡುಹಂದಿಗಳ ಬೇಟೆಯಾಡಲು ಸ್ಫೋಟಕ ಹಂದಿ ಗುಂಡುಗಳನ್ನು ಇಟ್ಟು ಜಾನುವಾರುಗಳ ಹತ್ಯೆಗೆ ಕಾರಣರಾಗಿದ್ದ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ. ಕವಿತಾ ಹೇಳಿದರು.ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ರಾಮಾಪುರ, ಹನೂರು, ಕೊಳ್ಳೇಗಾಲ ಗ್ರಾಮಾಂತರ ಹಾಗೂ ಕುದೇರು ಪೊಲೀಸ್ ಠಾಣಾ ಸರಹದ್ದಿನ ಗ್ರಾಮಗಳ ಹೊರವಲಯದಲ್ಲಿ ಕಳೆದ ಒಂದು ತಿಂಗಳಿನಿಂದ ಕಾಡುಹಂದಿಗಳನ್ನು ಬೇಟೆಯಾಡಲು ದುಷ್ಕರ್ಮಿಗಳು ಸ್ಫೋಟಕ ಹಂದಿ ಗುಂಡುಗಳನ್ನು ತಯಾರಿಸಿ ಮುಸುಕಿನ ಜೋಳದ ಸಂಡು ಹಾಗೂ ಮೇವಿನ ಜೊತೆ ಪಾಳು ಜಮೀನು ಹಾಗೂ ಸ್ಥಳದಲ್ಲಿ ಇಡುತ್ತಿದ್ದು, ಮೇವನ್ನು ಅರಸಿ ಬರುವ ಜಾನುವಾರುಗಳು ಇವುಗಳನ್ನು ಮೇವು ಎಂದು ತಿನ್ನುವ ಸಮಯದಲ್ಲಿ ಸ್ಫೋಟಕ ಹಂದಿ ಗುಂಡುಗಳು ಕಚ್ಚಿದಾಗ ಅವುಗಳು ಸ್ಪೋಟಗೊಂಡು ಜಾನುವಾರುಗಳ ಬಾಯಿ ಹಾಗೂ ಮುಖ ಛಿದ್ರವಾಗಿ ಗಾಯಗೊಂಡು ಮೃತಪಟ್ಟಿರುವ ಬಗ್ಗೆ ಪೊಲೀಸ್ ಠಾಣೆಗಳಲ್ಲಿ ಒಟ್ಟು ೫ ಪ್ರಕರಣಗಳು ದಾಖಲಾಗಿತ್ತು ಎಂದರು.ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೊಳ್ಳೇಗಾಲ ಡಿವೈಎಸ್ಪಿ ಧರ್ಮೇಂದ್ರ ನೇತೃತ್ವದಲ್ಲಿ ಒಂದು ವಿಶೇಷ ತಂಡ ರಚಿಸಿ, ಆರೋಪಿಗಳ ಪತ್ತೆಗೆ ವ್ಯಾಪಕ ಬಲೆ ಬೀಸಲಾಗಿತ್ತು. ರಾಮಾಪುರ ಪೊಲೀಸ್ ಠಾಣಾ ಸರಹದ್ದು ಭದ್ರಯ್ಯನಹಳ್ಳಿ ಗ್ರಾಮದ ಹೊರವಲಯದಲ್ಲಿ ಸ್ಫೋಟಕ ಹಂದಿ ಗುಂಡನ್ನು ಕಚ್ಚಿ ಜಾನುವಾರುವೊಂದರ ಬಾಯಿ ಛಿದ್ರಗೊಂಡು ತೀವ್ರಗಾಯಗೊಂಡು ಮೃತಪಟ್ಟಿತ್ತು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು, ಇದರ ಆಧಾರದ ಮೇಲೆ ತನಿಖೆ ನಡೆಸಿ, ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು, ಇನ್ನು ಮೂವರು ತಲೆ ಮರೆಸಿಕೊಂಡಿದ್ದು ಇವರ ಬಂಧನಕ್ಕೆ ವ್ಯಾಪಕ ಬಲೆ ಬೀಸಲಾಗಿದೆ ಎಂದರು.ಕೊಳ್ಳೇಗಾಲ ತಾಲೂಕು ಕುಣಗಳ್ಳಿ ಗ್ರಾಮದ ಸುಮಾರು ೪೫ ವರ್ಷದ ರಾಮಶೆಟ್ಟಿ ಮತ್ತು ಸೋಮಣ್ಣ ಬಂಧಿತರು, ಇವರಲ್ಲಿ ರಾಮಶೆಟ್ಟಿ ಸ್ಫೋಟಕ ತಯಾರು ಮಾಡಿಕೊಡುತ್ತಿದ್ದು, ಸೋಮಣ್ಣ ಇದನ್ನು ಮಾರಾಟ ಮಾಡುತ್ತಿದ್ದ ಜೊತೆಗೆ ಸ್ಫೋಟಕ ತಯಾರಿಕೆ ಗನ್ ಪೌಡರ್ ತಂದುಕೊಡುತ್ತಿದ್ದ ಎಂಬುದು ತಿಳಿದುಬಂದಿದೆ. ಆರೋಪಿತರಿಂದ ೩೪ ಜೀವಂತ ಸ್ಫೋಟಕ ಹಂದಿ ಗುಂಡುಗಳನ್ನು ವಶಪಡಿಸಿಕೊಂಡಿದ್ದು, ಇವರಿಗೆ ಸಹಕರಿಸುತ್ತಿದ್ದ ಇನ್ನೂ ಮೂವರು ತಲೆ ಮರೆಸಿಕೊಂಡಿದ್ದು ಇವರ ಪತ್ತೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.ವಿಶೇಷ ತಂಡಕ್ಕೆ ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅಕ್ರಮ ಚಟುವಟಿಕೆಗಳನ್ನು ಪತ್ತೆ ಹಚ್ಚಿ ನಿಗ್ರಹಿಸುವಂತೆ ಸೂಚನೆಗಳನ್ನು ನೀಡಿದರು. ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟರ್ ಪಿ.ಎನ್. ಶೇಷಾದ್ರಿ, ಪಿಎಸ್‌ಐ ಲೋಕೇಶ್, ಪೊಲೀಸ್ ಸಿಬ್ಬಂದಿ ಪರಶುರಾಮ್, ಗಿರೀಶ್, ಬಂಟಪ್ಪ, ರವಿ ಚೌಹ್ಹಾಣ್, ದಯಾನಂದ ಪವಾರ್, ಸಿ.ಮಹೇಂದ್ರ, ಭಾಗವಹಿಸಿದ್ದರು. ಪತ್ರಿಕಾಗೋಷ್ಠಿಯಲ್ಲಿ ಅಡಿಷನಲ್ ಎಸ್ಪಿ ಎಂ.ಎನ್. ಶಶಿದರ್, ಕೊಳ್ಳೇಗಾಲ ಡಿವೈಎಸ್ಪಿ ಧರ್ಮೇಂದ್ರ ಇದ್ದರು.