ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿಜಿಲ್ಲೆಯ ಕೋರವಾರ, ಮುಗಟಾ ಮತ್ತು ದಂಡೋತಿ ಗ್ರಾಮಗಳಲ್ಲಿ ಜಾನುವಾರು ಕಳ್ಳತನ ಮಾಡಿದ್ದ ಮೂವರನ್ನು ಮಾಡಬೂಳ ಠಾಣೆ ಪೊಲೀಸರು ಬಂಧಿಸಿ ಟಂಟಂ, ಆಟೋ ರೀಕ್ಷಾ ಸೇರಿದಂತೆ 4.90 ಲಕ್ಷ ರು.ಮೌಲ್ಯದ ಸ್ವತ್ತನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್‍ಪಿ ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ.
ನಗರದ ಎಸ್‍ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಹಾಬಾದ ಪಟ್ಟಣದ ಅಕ್ಲಾಲ್ ತಂದೆ ಮಹ್ಮದ್ ರಫಿಕ್ ಚೌದ್ರಿ, ಮಹ್ಮದ್ ಮುಸ್ತಾಕ್ ಬಾಬುಲಾಲ್ ಮತ್ತು ಶಕೀಲ್ ಅಹೆಮದ್ ಅಬ್ದುಲ್ ರೆಹಮಾನ್ ಶೇಖ್ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.ಕೋರವಾರ ಗ್ರಾಮದ ಬಸವರಾಜ ಮಲಕಾಜಪ್ಪ ಕಂಟಿ, ಮುಗಟಾ ಗ್ರಾಮದ ಮಲ್ಲೇಶ ಶಾಂತಪ್ಪ ಕುರಿ ಮತ್ತು ದಂಡೋತಿ ಗ್ರಾಮದ ಮಹ್ಮದ್ ಹುಸೇನ್ ಶೇಖ್ ತಮ್ಮ ಜಾನುವಾರುಗಳು ಕಳವು ಆದ ಬಗ್ಗೆ ಮಾಡಬೂಳ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಎಸ್‍ಪಿ, ಹೆಚ್ಚುವರಿ ಎಸ್‍ಪಿ ಮಹೇಶ ಮೇಘಣ್ಣನವರ್, ಡಿಎಸ್‍ಪಿ ಶಂಕರಗೌಡ ಪಾಟೀಲ, ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಮಾಡಬೂಳ ಪಿಎಸ್‍ಐ ಶೀಲಾದೇವಿ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಮುಗಟಾ ಹತ್ತಿರ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು.11 ಬೈಕ್ ಜಪ್ತಿ: ಇನ್ನೊಂದು ಪ್ರಕರಣದಲ್ಲಿ ಯಾದಗಿರಿ ನಗರದ ವಿವಿಧೆಡೆ ಮೋಟಾರ್ ಬೈಕ್‍ಗಳನ್ನು ಕಳ್ಳತನ ಮಾಡಿದ್ದ ಚಿತ್ತಾಪುರ ತಾಲೂಕಿನ ದಂಡಗುಂಡ ಗ್ರಾಮದ ನಿಂಗಪ್ಪ ಚೌಡಪ್ಪ ಬಡಿಗೇರ ಎಂಬಾತನನ್ನು ಯಡ್ರಾಮಿ ಪೊಲೀಸರು ಬಂಧಿಸಿ 3.05 ಲಕ್ಷ ರು.ಮೌಲ್ಯದ 11 ಬೈಕ್ ಜಪ್ತಿ ಮಾಡಿದ್ದಾರೆ ಎಂದು ತಿಳಿಸಿದರು.
ಜಾನುವಾರು ಮತ್ತು ಬೈಕ್ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯ ಶ್ಲಾಘಿಸಿದರು. ಹೆಚ್ಚುವರಿ ಎಸ್‍ಪಿ ಮಹೇಶ ಮೇಘಣ್ಣನವರ್, ಡಿವೈಎಸ್ಪಿ ಶಂಕರಗೌಡ ಪಾಟೀಲ್ ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.