ಧಾರವಾಡ: ಮಳೆಗಾಲ ಶುರುವಾಗಿದ್ದು, ಜಿಲ್ಲೆಯ ಹವಾಮಾನದಲ್ಲಿ ಬದಲಾವಣೆಯಾಗಿದೆ. ತಂಪಾದ ಗಾಳಿ, ಜಿಟಿ ಜಿಟಿ ಮಳೆಯಿಂದಾಗಿ ಸಾಂಕ್ರಾಮಿಕ ರೋಗಗಳು ಕಂಡು ಬರುತ್ತಿವೆ. ಹೆಚ್ಚಾಗಿ ಮಕ್ಕಳು, ವೃದ್ಧರಲ್ಲಿ ಜ್ವರ, ಕೆಮ್ಮು, ಶೀತ ಮತ್ತು ವಾಂತಿ ಪ್ರಕರಣಗಳು ಹೆಚ್ಚುತ್ತಿವೆ.

ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಕಳೆದ ಐದು ತಿಂಗಳಲ್ಲಿ 29 ಡೆಂಘೀ ಮತ್ತು 16 ಚಿಕೂನ್‌ಗುನ್ಯಾ ಪ್ರಕರಣಗಳು ವರದಿಯಾಗಿವೆ. ಇನ್ನೂ ಅನೇಕರು ಡೆಂಘೀ ಮತ್ತು ಚಿಕೂನ್‌ಗುನ್ಯಾದ ಲಕ್ಷಣ ಹೊಂದಿದ್ದು, ವರದಿಗಾಗಿ ಕಾಯುತ್ತಿದ್ದಾರೆ. ಹೆಚ್ಚುತ್ತಿರುವ ಜ್ವರ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಇಲಾಖೆಯು ಖಾಸಗಿ ಆಸ್ಪತ್ರೆಗಳಿಗೆ ಶಂಕಿತ ಡೆಂಘೀ ಲಕ್ಷಣಗಳಿರುವ ರೋಗಿಗಳಿಗೆ ಕಡ್ಡಾಯವಾಗಿ ಪರೀಕ್ಷೆ ಮಾಡಿಸಲು ಸೂಚಿಸಿದೆ.

ಈ ವರೆಗೆ ಜಿಲ್ಲೆಯಲ್ಲಿ 2,051 ಶಂಕಿತ ಡೆಂಘೀ ಲಕ್ಷಣಗಳಿರುವ ಜನರನ್ನು ಪರೀಕ್ಷಿಸಲಾಗಿದ್ದು, ಈ ಪೈಕಿ 29 ಮಂದಿ ಪಾಸಿಟಿವ್ ಎಂದು ದೃಢಪಟ್ಟಿದೆ. ಧಾರವಾಡ ನಗರದಲ್ಲಿ ಅತಿ ಹೆಚ್ಚು 11 ಪ್ರಕರಣಗಳು ದಾಖಲಾದರೆ, ನಂತರ ಧಾರವಾಡ ಗ್ರಾಮೀಣ (7) ಮತ್ತು ಹುಬ್ಬಳ್ಳಿ ಗ್ರಾಮೀಣ (3), ಕಲಘಟಗಿ, ನವಲಗುಂದ, ಕುಂದಗೋಳ ಮತ್ತು ಹುಬ್ಬಳ್ಳಿ ನಗರದಲ್ಲಿ ತಲಾ ಎರಡು ಪ್ರಕರಣ ವರದಿಯಾಗಿವೆ. ಆದರೆ, 2024ರಲ್ಲಿ 873 ಡೆಂಘೀ ಪ್ರಕರಣ ವರದಿಯಾಗಿದ್ದು, 2025ರಲ್ಲಿ 164 ಪ್ರಕರಣಗಳಿಗೆ ತೀವ್ರವಾಗಿ ಇಳಿದಿರುವುದು ಸಮಾಧಾನದ ಸಂಗತಿ.

ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಸೊಳ್ಳೆಯಿಂದ ಹರಡುವ ರೋಗಗಳು ಹೆಚ್ಚಾಗಿ ಕಂಡುಬರುತ್ತವೆ ಎನ್ನುವುದು ಸಮೀಕ್ಷೆಯಿಂದ ಆರೋಗ್ಯ ಅಧಿಕಾರಿಗಳು ಕಂಡುಕೊಂಡಿದ್ದಾರೆ. ನಗರದ ನಿವಾಸಿಗಳು ಹೆಚ್ಚುತ್ತಿರುವ ಸೊಳ್ಳೆ ಕಾಟದ ಬಗ್ಗೆ ಪಾಲಿಕೆ ಹಾಗೂ ಆರೋಗ್ಯ ಇಲಾಖೆಗೆ ದೂರು ನೀಡಿದ್ದಾರೆ. ಫಾಗಿಂಗ್ ಕಾರ್ಯಾಚರಣೆ ತೀವ್ರಗೊಳಿಸಲು, ನಿಂತ ನೀರನ್ನು ತೊಡೆದುಹಾಕಲು ಮತ್ತು ಸಂತಾನೋತ್ಪತ್ತಿಯನ್ನು ತಡೆಗಟ್ಟಲು, ನೈರ್ಮಲ್ಯವನ್ನು ಸುಧಾರಿಸಲು ಆರೋಗ್ಯ ಇಲಾಖೆ ಕ್ರಮಕೈಗೊಂಡಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸುತ್ತಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪರಶುರಾಮ, ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಿದ್ದೇವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಾಕಷ್ಟು ಔಷಧಿಗಳ ದಾಸ್ತಾನು ಹೊಂದಿದೆ. ಇಂತಹ ಸಮಯದಲ್ಲಿ ಜನರು ವೈಯಕ್ತಿಕ ನೈರ್ಮಲ್ಯ ಕಾಪಾಡಿಕೊಳ್ಳುವುದು, ಮನೆ ಸುತ್ತಲು ಸ್ವಚ್ಛತೆ ಕಾಪಾಡಿಕೊಳ್ಳುವುದು ಮುಖ್ಯ ಎಂಬ ಸಲಹೆ ನೀಡಿದರು.ಡೆಂಘೀ ಹಾಗೂ ಇತರೆ ಸಾಂಕ್ರಾಮಿಕ ರೋಗ ತಡೆಯಲು ಚಿಕ್ಕಮಕ್ಕಳ ತಜ್ಞ ವೈದ್ಯೆ ಡಾ. ಕವನ ದೇಶಪಾಂಡೆ ಕೆಲವು ಸಲಹೆ ನೀಡಿದ್ದಾರೆ.


- ಪ್ರತಿಯೊಬ್ಬರು ಬಿಸಿ ನೀರು, ಬಿಸಿ ಆಹಾರ ಸೇವಿಸಬೇಕು.

- ಮಳೆಯಲ್ಲಿ ತೋಯಿಸಿಕೊಳ್ಳದೇ ರಕ್ಷಣೆ, ಬೆಚ್ಚನೆಯ ಬಟ್ಟೆ ಧರಿಸಬೇಕು

- ನಾಗರಿಕರು ಸುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿ ಮತ್ತು ನೀರು ನಿಲ್ಲದಂತೆ ಎಚ್ಚರ ವಹಿಸಬೇಕು

- ಜಲಮೂಲಗಳನ್ನು ಸ್ವಚ್ಛಗೊಳಿಸುವ ಮತ್ತು ಕೀಟನಾಶಕ ಸಿಂಪಡಿಸುವ ಮೂಲಕ ಸೊಳ್ಳೆಗಳ ಸಂತಾನೋತ್ಪತ್ತಿ ನಿಯಂತ್ರಿಸುವುದು

- ಕೆಮ್ಮು-ನೆಗಡಿ, ಜ್ವರದಂತಹ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.