ಕುಷ್ಟಗಿ: ಆಧುನಿಕತೆಯ ಪರಿಣಾಮವಾಗಿ ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸದ ಹಿನ್ನೆಲೆಯಲ್ಲಿ ಕ್ಯಾನ್ಸರನಂತಹ ರೋಗಗಳಿಗೆ ತುತ್ತಾಗುತ್ತಿರುವುದು ಕಂಡು ಬರುತ್ತಿದ್ದು, ಆಹಾರದ ಬಗ್ಗೆ ಜಾಗೃತರಾಗಬೇಕು. ಹೊರಗಿನ ತಿಂಡಿ-ತಿನಿಸು, ಬಣ್ಣ ಮಿಶ್ರಿತ ಆಹಾರವನ್ನು ಸೇವಿಸಬಾರದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಅನ್ನಪೂರ್ಣ ಪಾಟೀಲ ಹೇಳಿದರು.

ತಾಲೂಕಿನ ದೋಟಿಹಾಳ ಗ್ರಾಮದ ಕಸ್ತೂರ ಬಾ ಗಾಂಧೀ ಬಾಲಕಿಯರ ವಸತಿ ನಿಲಯದಲ್ಲಿ ಇನ್ನರ್ ವೀಲ್ ಕ್ಲಬ್ ವತಿಯಿಂದ ಕ್ಯಾನ್ಸರ್ ರೋಗದ ಕುರಿತು ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು

ಮಹಿಳೆಯರಲ್ಲಿ ಸ್ತನ ಹಾಗೂ ಗರ್ಭಕೋಶ ಕಂಠದ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತಿದ್ದು, ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿದರೆ ಕ್ಯಾನ್ಸರ್‌ನಿಂದ ಗುಣಮುಖರಾಗಬಹುದು. ಕ್ಯಾನ್ಸರ್ ರೋಗದ ಬಗ್ಗೆ ಪ್ರತಿಯೊಬ್ಬರು ಮಾಹಿತಿ ಪಡೆಯುವುದು, ಮುಂಜಾಗೃತೆ ವಹಿಸುವುದು ತುಂಬಾ ಮುಖ್ಯವಾಗಿದೆ. ಕ್ಯಾನ್ಸರ್ ತಡೆಗಟ್ಟುವ ಸಲುವಾಗಿ ಯುವತಿಯರು ಲಸಿಕೆಯನ್ನು ತಪ್ಪದೇ ಪಡೆಯಬೇಕು. ಗರ್ಭಕಂಠ ಕ್ಯಾನ್ಸರ್‌ ತಡೆಗಟ್ಟುವಲ್ಲಿ ಎಚ್‌ಪಿವಿ ಲಸಿಕೆಯು ರಾಮ ಬಾಣವಾಗಿದ್ದು ತಪ್ಪದೆ ಲಸಿಕೆ ಪಡೆಯಬೇಕು ಎಂದು ತಿಳಿಸಿದರು. ಇನ್ನರ್ ವೀಲ್ ಕ್ಲಬ್ ಉಪಾಧ್ಯಕ್ಷೆ ಶಾರದಾ ಶೆಟ್ಟರ ಮಾತನಾಡಿ, ಸಮಾಜ ಸ್ವಸ್ಥವಾಗಿಡಲು ಮಹಿಳೆಯರ ಪಾತ್ರ ಅತಿ ಮುಖ್ಯವಾಗಿದೆ. ಮಹಿಳೆಯರು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು. ಉತ್ತಮವಾದ, ಪೌಷ್ಟಿಕಯುಕ್ತ ಆಹಾರ ಸೇವಿಸಬೇಕು. ಮಹಿಳೆ ಆರೋಗ್ಯವಾಗಿದ್ದಲ್ಲಿ ಕುಟುಂಬ ಉತ್ತಮವಾಗಿ ಸಾಗಲಿದೆ. ಸಮಾಜಕ್ಕೂ ಒಳ್ಳೆಯದಾಗಲಿದೆ. ಆ ನಿಟ್ಟಿನಲ್ಲಿ ಆರೋಗ್ಯದ ಕಡೆ ನಿಗಾವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಗಿರಿಜಾ ಮಾಲಿಪಾಟೀಲ, ಶೋಭಾ ಕಂದಕೂರು, ವಸತಿ ನಿಲಯದ ನೋಡಲ್ ಅಧಿಕಾರಿ ರೇಣುಕಾ ಚೆಳ್ಳಾರಿ, ವಾರ್ಡನ್‌ ಸುಮಿತ್ರಾ ಬಿರಾದಾರ, ಶ್ರೀನಿವಾಸ ಕಂಟ್ಲಿ, ಮಹೇಶ ಹಡಪದ ಸೇರಿದಂತೆ ವಸತಿ ನಿಲಯದ ವಿದ್ಯಾರ್ಥಿನಿಯರು ಇದ್ದರು.