ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ/ಕಿಕ್ಕೇರಿ
ಕಾವೇರಿ ಕಣಿವೆ ಪ್ರದೇಶದಲ್ಲಿ ಮಳೆಯ ಆರ್ಭಟಕ್ಕೆ ಕಾವೇರಿ, ಹೇಮಾವತಿ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದ ನದಿ ತೀರದ ಪ್ರದೇಶಗಳು ಜಲಾವೃತಗೊಂಡಿವೆ. ತಗ್ಗು ಪ್ರದೇಶಗಳು ಭಾಗಶಃ ನೀರಿನಲ್ಲಿ ಮುಳುಗಡೆಯಾಗಿರುವ ಬಗ್ಗೆ ವರದಿಯಾಗಿವೆ.ಕೃಷ್ಣರಾಜಸಾಗರ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಜಲಾಶಯದ ಒಳಹರಿವು ಹೆಚ್ಚಿರುವುದರಿಂದ ೭೪ ಸಾವಿರ ಕ್ಯುಸೆಕ್‌ಗೂ ಹೆಚ್ಚು ನೀರನ್ನು ನದಿಗೆ ಹರಿಯಬಿಡಲಾಗುತ್ತಿದೆ. ಇದರ ಪರಿಣಾಮ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮ, ಪಶ್ಚಿಮವಾಹಿನಿ, ಸ್ನಾನಘಟ್ಟ, ಶ್ರೀಸಾಯಿ ಮಂದಿರ, ವೆಲ್ಲೆಸ್ಲಿ ಸೇತುವೆ ಸೇರಿದಂತೆ ಕಾವೇರಿ ನದಿ ತೀರದ ತಗ್ಗು ಪ್ರದೇಶಗಳು ಭಾಗಶಃ ಮುಳುಗಡೆಯಾಗಿವೆ. ಕೆಲವೆಡೆ ಜಮೀನುಗಳಿಗೆ ನೀರು ನುಗ್ಗಿರುವ ಬಗ್ಗೆಯೂ ವರದಿಯಾಗಿವೆ.
ತಾತ್ಕಾಲಿಕ ತಡೆಗೋಡೆ ನಿರ್ಮಾಣ:ಪ್ರಸ್ತುತ ಅಣೆಕಟ್ಟೆಗೆ ೬೬,೯೪೫ ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ಅಣೆಕಟ್ಟೆಯಲ್ಲಿ ೧೨೪.೮೦ ಅಡಿವರೆಗೆ ನೀರು ಸಂಗ್ರಹವಾಗಿದೆ. ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ೭೪,೦೨೧ ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಹರಿಸಲಾಗಿದೆ. ಮುಂಜಾಗ್ರತೆಯಾಗಿ ನದಿ ತೀರ ಪ್ರದೇಶಗಳಲ್ಲಿ ಸಾರ್ವಜನಿಕರು ನೀರಿಗಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಜಿಲ್ಲಾ ಹಾಗೂ ತಾಲೂಕು ಆಡಳಿತದದಿಂದ ನದಿ ತೀರ ಪ್ರದೇಶಗಳಿಗೆ ಪ್ರವೇಶ ನಿರ್ಬಂಧಿಸಿ ಪೊಲೀಸ್ ಬ್ಯಾರಿಗೇಡ್ ಸೇರಿದಂತೆ ತಾತ್ಕಾಲಿಕ ತಡೆಗೋಡೆ ನಿರ್ಮಿಸಲಾಗಿದೆ.
ಆರ್ಭಟಿಸುತ್ತಿರುವ ಹೇಮೆ:ಉಕ್ಕಿ ಹರಿಯುತ್ತಿರುವ ಹೇಮೆಯ ಆರ್ಭಟಕ್ಕೆ ರೈತಾಪಿ ಜನರ ಜಮೀನುಗಳಿಗೆ ನೀರು ನುಗ್ಗಿ ದೊಡ್ಡಅವಾಂತರ ಮಾಡಿದೆ.ಬಹುತೇಕ ನದಿಪಾತ್ರದ ಜಮೀನುಗಳಿಗೆ ನೀರುನುಗ್ಗಿರೈತರುಜಮೀನು ಪ್ರವೇಶ ಮಾಡದಂತೆ ಜಲದಿಗ್ಭಂಧನೆ ಹೇಮೆ ವಿಧಿಸಿದೆ.
ಶುಕ್ರವಾರಗೊರೂರುಅಣೆಕಟ್ಟಿನಿಂದ ೭೫ ಸಾವಿರ ಕ್ಯೂಸೆಕ್ಸ್ ನೀರು ಹರಿಯ ಬಿಟ್ಟಿರುವುದರಿಂದ ಸುತ್ತಮುತ್ತಲ ಹೇಮಾವತಿ ನದಿಪಾತ್ರದ ನಿವಾಸಿಗಳ ರೈತರುಆತಂಕಕ್ಕೆ ಒಳಗಾಗುವಂತಾಯಿತು.ಬಹುತೇಕರೈತರು ಸತತಒಂದು ವರ್ಷದಿಂದ ಮಳೆ ಇಲ್ಲದೆ ಕಂಗಲಾಗಿ ಹೈನುಗಾರಿಕೆ ನಂಬಿಕೊಂಡಿದ್ದರು.ನದಿಪಾತ್ರದಲ್ಲಿ ಮೇವಿನ ಬೆಳೆ ಬೆಳೆದುಕೊಂಡಿದ್ದರು. ಹಲವರುರಾಗಿ, ಜೋಳದ ಹುಲ್ಲಿನ ಬವಣೆ ಹಾಕಿಕೊಂಡು ಶೇಖರಣೆ ಮಾಡಿಕೊಂಡಿದ್ದರು.ದೇಗುಲದ ಗರ್ಭಗುಡಿಗೆ ನುಗ್ಗಿದ ನೀರು:
ಉಕ್ಕಿ ಹರಿದ ಹೇಮಾವತಿಆರ್ಭಟಕ್ಕೆ ಕೆ.ಆರ್.ಪೇಟೆ ತಾಲೂಕಿನ ಚಿಕ್ಕಮಂದಗೆರೆ ಬಳಿಯ ಬೇವಿನಹಳ್ಳಿ ಗ್ರಾಮದ ಶ್ರೀ ಅಂಕನಾಥೇಶ್ವರದೇಗುಲಕ್ಕೆ ನದಿಯ ನೀರು ಪ್ರವೇಶಿಸಿದೆ. ಶ್ರೀ ಅಂಕನಾಥೇಶ್ವರ ಸ್ವಾಮಿ ಗರ್ಭಗುಡಿಗೆ ನೀರು ನುಗ್ಗಿದ ಕಾರಣ ಪೂಜಾ ಕೈಂಕರ್ಯಕ್ಕೆ ಜಲದಿಗ್ಭಂದನ ಏರ್ಪಟ್ಟಿದೆ. ದೇಗುಲದ ಬಳಿ ಇರುವ ರೈತರ ತೆಂಗಿನತೋಟಕ್ಕೂ ನೀರು ನುಗ್ಗಿದ್ದು, ರೈತರು ಪಂಪ್‌ಸೆಟ್‌ಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲು ಪರದಾಡಿದರು.ತೆಂಗು, ಬಾಳೆ, ಅಡಿಕೆತೋಟಕ್ಕೆ ನೀರು ನುಗ್ಗಿದ್ದು, ನೀರಿನ ರಭಸಕ್ಕೆ ತೆಂಗಿನ ಸಸಸಿಗಳು ಕೊಚ್ಚಿ ಹೋಗಿವೆ. ಜಮೀನಿಗೆ ಹಾಕಲು ಶೇಖರಣೆ ಮಾಡಲಾಗಿದ್ದ ಕುರಿ, ಕೋಳಿ ಗೊಬ್ಬರದ ಮೂಟೆಗಳು ನೀರು ಪಾಲಾಗಿವೆ. ಗೊನೆಬಿಟ್ಟಿದ್ದ ಬಾಳೆಗಿಡ ನೆಲಕಚ್ಚಿವೆ. ಜಮೀನಿನಲ್ಲಿದ್ದ ಪಂಪ್‌ಸೆಟ್ ಮನೆಗೆ ನೀರು ನುಗ್ಗಿದೆ.
ಗೊರೂರು ಅಣೆಕಟ್ಟಿಯಿಂದ ಸುಮಾರು ೭೫ ಸಾವಿರ ಕ್ಯುಸೆಕ್ ನೀರು ಹರಿದುಬರುತ್ತಿದ್ದು, ನದಿ ಪಾತ್ರದ ಜನರಲ್ಲಿ ಆತಂಕ ಮೂಡಿದೆ. ಗಾಣದಹಳ್ಳಿ, ಮಾದಾಪುರ, ಚಿಕ್ಕಮಂದಗೆರೆ, ಗದ್ದೆಹೊಸೂರು, ಕುರೆವು ಗ್ರಾಮಗಳ ರೈತರು ಬಲು ಎಚ್ಚರಿಕೆಯಿಂದ ಇರಲು ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಮಂದಗೆರೆ ಸೇತುವೆ ಬಳಿ ಯುವಕರದಂಡು ಸೆಲ್ಪಿ ತೆಗೆದುಕೊಳ್ಳುವುದನ್ನು ಕಂಡು ಪೊಲೀಸರು ಅವರನ್ನು ಬೈದು ಬುದ್ಧಿವಾದ ಹೇಳಿ ಅಲ್ಲಿಂದ ದೂರ ಕಳುಹಿಸಿದರು.ಸ್ಥಳದಲ್ಲಿಯೇ ಬೀಡುಬಿಟ್ಟಿರುವ ಕಿಕ್ಕೇರಿ ಇನ್ಸ್‌ಪೆಕ್ಟರ್ ರೇವತಿ ಅವರು ನದಿ ಪಾತ್ರದ ಜನರು ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡಿದ್ದಾರೆ.