ಇದೇ ವೇಳೆ ರಾಜ್ಯದಲ್ಲಿ ಕೈಗೊಂಡಿರುವ ಮೋಡ ಬಿತ್ತನೆ ಕಾರ್ಯವು ಆರಂಭಿಕ ಹಂತದಲ್ಲಿ ನಿರೀಕ್ಷಿತ ಫಲಿತಾಂಶ ನೀಡಿಲ್ಲವಾದರೂ, ಗೌರಿ-ಗಣೇಶ ಹಬ್ಬದ ನಂತರದ ದಿನಗಳಲ್ಲಿ ವಾತಾವರಣ ಅನುಕೂಲಕರವಾಗಿ ಉತ್ತಮ ಫಲಿತಾಂಶ ನೀಡುವ ನಿರೀಕ್ಷೆಯಿದೆ ಎಂದರು.
ಕನ್ನಡಪ್ರಭ ವಾರ್ತೆ ಮಂಡ್ಯ
ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಸಂಬಂಧ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಅರ್ಜಿ ಸೋಮವಾರ ಸುಪ್ರೀಂಕೋರ್ಟ್ ಮುಂದೆ ವಿಚಾರಣೆಗೆ ಬರಲಿದೆ ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.ಸಿಡಬ್ಲ್ಯೂಆರ್‌ಸಿ ಆದೇಶವನ್ನು ಉಲ್ಲಂಘಿಸಿ ನೇರವಾಗಿ ನ್ಯಾಯಾಲಯದ ಮೊರೆ ಹೋದರೆ ಅರ್ಜಿ ತಿರಸ್ಕೃತಗೊಳ್ಳುವ ಅಪಾಯವಿರುತ್ತದೆ. ಹೀಗಾಗಿ ಕಾನೂನು ತಜ್ಞರ ಸಲಹೆಯಂತೆ ಸೋಮವಾರದವರೆಗೆ ತಮಿಳುನಾಡಿಗೆ ನೀರು ಹರಿಸುವುದು ಅನಿವಾರ್ಯವಾಗಿದೆ. ರಾಜ್ಯದಲ್ಲಿ ತೀವ್ರ ನೀರಿನ ಕೊರತೆ ಇದ್ದರೂ, ಒಕ್ಕೂಟ ವ್ಯವಸ್ಥೆಯ ಚೌಕಟ್ಟಿನಲ್ಲಿ ನ್ಯಾಯಾಲಯದ ಆದೇಶಗಳನ್ನು ಗೌರವಿಸಬೇಕಾದ ಇಕ್ಕಟ್ಟಿಗೆ ಸರ್ಕಾರ ಸಿಲುಕಿದೆ ಎಂದು ಶುಕ್ರವಾರ ನಗರದಲ್ಲಿ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.
ಕಳೆದ ೨೦ ವರ್ಷಗಳ ಇತಿಹಾಸದಲ್ಲೇ ಈ ಬಾರಿ ಅತ್ಯಂತ ಕಡಿಮೆ ಪ್ರಮಾಣದ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ. ಈ ಹಿಂದೆ ಇದೇ ರೀತಿಯ ಕಠಿಣ ಪರಿಸ್ಥಿತಿ ಎದುರಾದಾಗಲೂ ೩೫ ಟಿಎಂಸಿ ನೀರು ಬಿಟ್ಟಿರುವ ಉದಾಹರಣೆಗಳಿವೆ. ಸರ್ಕಾರ ಸದಾ ಅನ್ನದಾತರ ಹಿತರಕ್ಷಣೆಗೆ ಬದ್ಧವಾಗಿದ್ದು, ನಮ್ಮ ಅಧಿಕಾರಿಗಳು ಮತ್ತು ಕಾನೂನು ತಂಡ ನ್ಯಾಯಾಲಯದಲ್ಲಿ ಸಮರ್ಥ ವಾದ ಮಂಡಿಸುತ್ತಿದೆ ಎಂದು ಹೇಳಿದರು.ಪ್ರಸ್ತುತ ರೈತರ ಬೆಳೆಗಳಿಗೆ ಕಟ್ಟು ನೀರು ಪದ್ಧತಿಯಲ್ಲಿ ನೀರು ಪೂರೈಸಲಾಗುತ್ತಿದ್ದು, ಜೊತೆಯಲ್ಲೇ ಕೆರೆಗಳನ್ನು ತುಂಬಿಸುವ ಕಾರ್ಯವೂ ಸಾಗಿದೆ. ಮುಂದಿನ ಡಿಸೆಂಬರ್‌ನಿಂದ ಜೂನ್‌ವರೆಗೆ ಸಾರ್ವಜನಿಕರ ಕುಡಿಯುವ ನೀರಿನ ಅಗತ್ಯಕ್ಕೆ ಯಾವುದೇ ಕೊರತೆಯಾಗದಂತೆ ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಪ್ರಮುಖ ಜಲಾಶಯಗಳಲ್ಲಿ ಸಾಕಷ್ಟು ನೀರನ್ನು ಕಾಯ್ದಿರಿಸಲಾಗುವುದು ಎಂದು ಭರವಸೆ ನೀಡಿದರು.
ಕಾವೇರಿ ವಿಚಾರದಲ್ಲಿ ಪ್ರತಿಪಕ್ಷಗಳೊಂದಿಗೆ ರಾಜಕೀಯ ಕೆಸರೆರಚಾಟ ನಡೆಸಲು ಸರ್ಕಾರ ಇಚ್ಛಿಸುವುದಿಲ್ಲ ಎಂದ ಸಚಿವರು, ರಾಜ್ಯದ ಬಿಜೆಪಿ ಸಂಸದರು ಹಾಗೂ ಕೇಂದ್ರ ಸಚಿವರು ಮಹದಾಯಿ ಮತ್ತು ಮೇಕೆದಾಟು ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುಮತಿ ಕೊಡಿಸಲು ಮುಂದಾದರೆ ನಾಡಿನ ಜನತೆಗೆ ಶಾಶ್ವತ ಪರಿಹಾರ ಸಿಗಲಿದೆ. ಮೇಕೆದಾಟು ಯೋಜನೆ ಸಂಬಂಧ ಈಗಾಗಲೇ ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಶೀಘ್ರದಲ್ಲೇ ಅನುಮೋದನೆ ದೊರೆಯುವ ವಿಶ್ವಾಸವಿದೆ ಎಂದು ಹೇಳಿದರು.ಇದೇ ವೇಳೆ ರಾಜ್ಯದಲ್ಲಿ ಕೈಗೊಂಡಿರುವ ಮೋಡ ಬಿತ್ತನೆ ಕಾರ್ಯವು ಆರಂಭಿಕ ಹಂತದಲ್ಲಿ ನಿರೀಕ್ಷಿತ ಫಲಿತಾಂಶ ನೀಡಿಲ್ಲವಾದರೂ, ಗೌರಿ-ಗಣೇಶ ಹಬ್ಬದ ನಂತರದ ದಿನಗಳಲ್ಲಿ ವಾತಾವರಣ ಅನುಕೂಲಕರವಾಗಿ ಉತ್ತಮ ಫಲಿತಾಂಶ ನೀಡುವ ನಿರೀಕ್ಷೆಯಿದೆ ಎಂದರು.
ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಹಾಗೂ ತನಿಖಾ ಸಂಸ್ಥೆಗಳ ದಾಳಿಯ ಕುರಿತು ಪ್ರತಿಕ್ರಿಯಿಸಿದ ಅವರು, ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಐಟಿ ಮತ್ತು ಇಡಿ ದಾಳಿಗಳು ಸಾಮಾನ್ಯ ಸಂಗತಿಯಾಗಿದೆ. ಸಚಿವ ಸತೀಶ್ ಜಾರಕಿಹೊಳಿ ಅವರು ವ್ಯಾಪಾರ- ವಹಿವಾಟು ನಡೆಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಕಾನೂನು ಹೋರಾಟದ ಮೂಲಕ ಅವರ ಮೇಲಿನ ಆರೋಪಗಳು ಸುಳ್ಳೆಂದು ಸಾಬೀತಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.