ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಜಿಲ್ಲೆಯಲ್ಲಿ ಎರಡು ದಿನಗಳಿಂದ ಮಳೆ ಬಿರುಸುಗೊಂಡಿದ್ದು ಕಾವೇರಿ ನದಿ ಪ್ರವಾಹ ಹೆಚ್ಚಿದೆ. ಬಿರುಸಿನ ಮಳೆಯಿಂದ ಮೂರನೇ ಬಾರಿಗೆ ರಸ್ತೆಗಳು ಜಲಾವೃತಗೊಂಡಿವೆ.ನಾಪೋಕ್ಲು -ಮೂರ್ನಾಡು ಸಂಪರ್ಕ ರಸ್ತೆಯಲ್ಲಿನ ಪ್ರವಾಹ ಹೆಚ್ಚಿದ್ದು ಸೋಮವಾರದಿಂದ ಸಂಚಾರ ಸ್ಥಗಿತಗೊಂಡಿದ್ದು ಚಾಲಕರು ನಾಪೋಕ್ಲು-ಕುಯ್ಯಂಗೇರಿ-ಹೊದ್ದೂರು ಬಳಸು ಮಾರ್ಗವನ್ನು ಅವಲಂಬಿಸುವಂತಾಗಿದೆ.ಮಂಗಳವಾರ ಮಧ್ಯಾಹ್ನ ನಂತರ ನಾಪೋಕ್ಲು - ಬೆಟಗೇರಿ ಸಂಪರ್ಕ ರಸ್ತೆಯ ಕೊಟ್ಟಮಡಿಯಲ್ಲಿ ಕಾವೇರಿ ಪ್ರವಾಹ ರಸ್ತೆಯ ಮೇಲೆ ಹರಿಯುತ್ತಿದ್ದು ಸಂಪರ್ಕ ಕಡಿದುಕೊಳ್ಳುವ ಸಾಧ್ಯತೆ ದಟ್ಟವಾಗಿದ್ದು, ನಾಪೋಕ್ಲು ಎಲ್ಲ ಸಂಪರ್ಕ ಕಡಿದುಕೊಂಡು ದ್ವೀಪವಾಗುವ ಸಂಭವ ಕಂಡುಬರುತ್ತಿದೆದೆ.
ಚೆರಿಯಪರಂಬು ಕಲ್ಲುಮೊಟ್ಟೆ ಸಂಪರ್ಕ ರಸ್ತೆ, ನಾಪೋಕ್ಲು -ಬಲಮುರಿ ಮಾರ್ಗದ ಮಕ್ಕಿಕಡವು ರಸ್ತೆ, ನಾಪೋಕ್ಲು - ಅಜ್ಜಿ ಮುಟ್ಟ ಸಂಪರ್ಕ ರಸ್ತೆ , ನಾಪೋಕ್ಲು -ಪಾರಾಣೆ ರಸ್ತೆಯ ಕೈಕಾಡುವಿನಲ್ಲಿ ಸಂಚಾರ ಸ್ಥಗಿತಗೊಂಡಿದೆ.ಪಾಲೂರು ಗ್ರಾಮದ ಹರಿಶ್ಚಂದ್ರ ದೇವಾಲಯ ಜಲಾವೃತವಾಗಿ ಎರಡು ವಾರಗಳೇ ಕಳೆದಿದೆ. ಕಡಂಗ ಹಾಗೂ ಎಡಪಾಲ ಹೊಳೆಯ ಸೇತುವೆ ಮೇಲೆ ಅಂದಾಜು ಎರಡು ಅಡಿ ನೀರು ಇದ್ದು ರಸ್ತೆ ಸಂಚಾರ ಸ್ಥಗಿತಗೊಂಡಿದ್ದು ವಾಹನಗಳು ಕುಂಜಿಲ ಮಾರ್ಗವಾಗಿ ಸಂಚರಿಸುತ್ತಿವೆ. ಕೊಳಕೇರಿ-ಕೋಕೇರಿ ಸಂಪರ್ಕ ಕಲ್ಪಿಸುವ ಕುಪ್ಪೋಟು ಹೊಳೆ ಸೇತುವೆ ಜಲಾವೃತವಾಗಿದ್ದು ಸಮೀಪದ ಕುಡಿಯುವ ನೀರಿನ ಘಟಕ ಮುಳುಗಡೆಯಾಗಿದೆ. ಅಯ್ಯಂಗೇರಿಯ ಬಿದ್ದಿಯಂಡ ರವಿ ಎಂಬವವರ ತೋಟದಲ್ಲಿ ಭೂಕುಸಿತವಾಗಿ ನಷ್ಟ ಸಂಭವಿಸಿದೆ.
ನಾಪೋಕ್ಲು ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆ, ಗಾಳಿಯ ರಭಸಕ್ಕೆ ಅಲ್ಲಲ್ಲಿ ಮರಗಳು ಉರುಳಿ ಬಿದ್ದಿವೆ. ಕೆರೆ-ತೋಡುಗಳಲ್ಲಿ ನೀರು ಉಕ್ಕಿ ಹರಿಯುತ್ತಿವೆ.ಮರಂದೋಡ ಗ್ರಾಮದ ರೈತ ಚೋಯಮಾಡಂಡ ಅಚ್ಚಪ್ಪ ತಮ್ಮ ಗದ್ದೆಯಲ್ಲಿ ಭತ್ತದ ನಾಟಿ ಪೂರೈಸಿದ್ದರು. ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದ ತೋಡಿನಲ್ಲಿ ನೀರು ಉಕ್ಕಿ ಹರಿದಿದ್ದು ನಾಟಿ ಗದ್ದೆ ಮುಳುಗಡೆಯಾಗಿ ನಷ್ಟ ಸಂಭವಿಸಿದೆ.
ವಿಪರೀತ ಮಳೆಯಿಂದಾಗಿ ಕಾಫಿ ತೋಟಗಳಲ್ಲಿ ಕಾಫಿಗೆ ಕೊಳೆರೋಗ ಬಾಧಿಸುತ್ತಿದ್ದು ಇನ್ನಷ್ಟು ನಷ್ಟ ಸಂಭವಿಸುವ ಸಾಧ್ಯತೆಗಳು ಅಧಿಕವಾಗಿದ್ದು ಬೆಳೆಗಾರರು ಆತಂಕ ಪಡುವಂತಾಗಿದೆ .ಬಿರುಸಿನ ಮಳೆಯಿಂದಾಗಿ ಎಮ್ಮೆಮಾಡು ಗ್ರಾಮದ ಅಭಿದ್ ತಂಙಳ್ ಅವರ ವಾಸದ ಮನೆ ಮತ್ತು ನಾಲಡಿ ಗ್ರಾಮದ ಪೂವಣ್ಣ ಅವರ ವಾಸದ ಮನೆ ಹಾನಿ ಯಾಗಿದ್ದು ಸ್ಥಳಕ್ಕೆ ಕಂದಾಯ ಪರಿವೀಕ್ಷಕ ರವಿಕುಮಾರ್ ಮತ್ತು ಸಿಬ್ಬಂ ತೆರಳಿ ಪರಿಶೀಲನೆ ನಡೆಸಿದರು.