ನಿರಂತರ ಮಳೆಯಿಂದ ಕುಶಾಲನಗರದ ಬಡಾವಣೆಗಳಿಗೆ ಕಾವೇರಿ ಪ್ರವಾಹ : ತಗ್ಗು ಪ್ರದೇಶ ಜಲಾವೃತ

| Published : Jul 19 2024, 01:01 AM IST / Updated: Jul 19 2024, 11:44 AM IST

ನಿರಂತರ ಮಳೆಯಿಂದ ಕುಶಾಲನಗರದ ಬಡಾವಣೆಗಳಿಗೆ ಕಾವೇರಿ ಪ್ರವಾಹ : ತಗ್ಗು ಪ್ರದೇಶ ಜಲಾವೃತ
Share this Article
  • FB
  • TW
  • Linkdin
  • Email

ಸಾರಾಂಶ

ನಿರಂತರ ಮಳೆಯಿಂದ ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಕುಶಾಲನಗರ ಪಟ್ಟಣದ ಬಡಾವಣೆಗಳಿಗೆ ನೀರು ನುಗ್ಗಿದೆ.  

 ಕುಶಾಲನಗರ :  ನಿರಂತರ ಮಳೆಯಿಂದ ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಕುಶಾಲನಗರ ಪಟ್ಟಣದ ಬಡಾವಣೆಗಳಿಗೆ ನೀರು ನುಗ್ಗಿದೆ.

ಪಟ್ಟಣದ ತಗ್ಗು ಪ್ರದೇಶಗಳಾದ ಸಾಯಿ ಬಡಾವಣೆಗೆ ಗುರುವಾರ ಸಂಜೆ ವೇಳೆ ರಾಜಕಾಲುವೆಯ ಮೂಲಕ ನೀರು ಹರಿಯಲು ಆರಂಭಿಸಿದ್ದು ಬಡಾವಣೆಯ ಮನೆಗಳ ಚರಂಡಿಗಳಲ್ಲಿ ನೀರು ತುಂಬಿ ನಿವಾಸಿಗಳು ಸ್ಥಳಾಂತರಗೊಳ್ಳಲು ಸಿದ್ಧರಾಗಿದ್ದಾರೆ.

ಕುಶಾಲನಗರ ಪಟ್ಟಣದ ಕುವೆಂಪು ಬಡಾವಣೆ ವ್ಯಾಪ್ತಿಯಲ್ಲಿ ಪ್ರವಾಹ ನಿಯಂತ್ರಣಕ್ಕೆ ನಿರ್ಮಿಸಲಾದ ತಡೆಗೋಡೆಯಿಂದ ಅಲ್ಪ ಪ್ರಮಾಣದ ಅನಾನುಕೂಲತೆ ಉಂಟಾಗಿದೆ ಎಂದು ನಿವಾಸಿಗಳು ದೂರಿದ್ದಾರೆ.

ಬಡಾವಣೆಯ ಒಳಭಾಗದಲ್ಲಿ ಚರಂಡಿಯಲ್ಲಿ ಹರಿಯುವ ನೀರು ಸ್ಥಗಿತಗೊಂಡು ಇದರಿಂದ ಸಮಸ್ಯೆ ಉಂಟಾಗುವ ಆತಂಕದಲ್ಲಿ ನಿವಾಸಿಗಳು ದಿನ ದೂಡುವಂತಾಗಿದೆ.

ಹಾರಂಗಿ ಜಲಾಶಯಕ್ಕೆ ಬರುವ ಒಳಹರಿವಿನ ಪ್ರಮಾಣದಷ್ಟೇ ನೀರನ್ನು ನದಿಗೆ ಹರಿಸಲಾಗುತ್ತಿದ್ದು ಅಧಿಕಾರಿಗಳು ಹಗಲು ರಾತ್ರಿ ಸೂಕ್ಷ್ಮವಾಗಿ ಗಮನಿಸುತ್ತಿರುವ ಕಾರಣ ಪ್ರವಾಹ ನಿಯಂತ್ರಣಕ್ಕೆ ಕಾರಣವಾಗಿದ್ದರೆ, ಇನ್ನೊಂದೆಡೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು ನದಿಯಲ್ಲಿ ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿರುವ ದೃಶ್ಯ ಗೋಚರಿಸಿದೆ.

ತಗ್ಗು ಪ್ರದೇಶದ ಹೊಲಗದ್ದೆಗಳು ಕಳೆದ ಎರಡು ದಿನಗಳಿಂದ ಜಲಾವೃತಗೊಂಡಿವೆ.

ಕುಶಾಲನಗರ ತಹಸೀಲ್ದಾರ್ ಕಿರಣ್ ಗೌರಯ್ಯ, ಪುರಸಭೆ ಮುಖ್ಯ ಅಧಿಕಾರಿ ಕೃಷ್ಣಪ್ರಸಾದ್, ಪಟ್ಟಣ ಪೊಲೀಸ್ ಇನ್‌ಸ್ಪೆಕ್ಟರ್‌ ಪ್ರಕಾಶ್‌, ಠಾಣಾಧಿಕಾರಿ ಚಂದ್ರಶೇಖರ್ ನೇತೃತ್ವದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಅಪಾಯದ ಸ್ಥಳಗಳಿಂದ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಗ್ಗು ಪ್ರದೇಶದ ನಿವಾಸಿಗಳಿಗೆ ಸೂಚನೆ ನೀಡಲಾಗಿದೆ. ಹಾರಂಗಿ ಜಲಾಶಯದಿಂದ ಯಾವುದೇ ಸಮಸ್ಯೆ ಉದ್ಭವ ಆಗುವುದಿಲ್ಲ ಎಂದು ಅಣೆಕಟ್ಟು ಕಾರ್ಯಪಾಲಕ ಅಭಿಯಂತರ ಬಿ ಜೆ ಪುಟ್ಟಸ್ವಾಮಿ ತಿಳಿಸಿದ್ದಾರೆ.