ಅಕ್ರಮ ಆಸ್ತಿ ಸಂಪಾದನೆ : ಕಾವೇರಿ ನೀರಾವರಿ ನಿಗಮದ ಎಂಡಿ ಮನೆ ಮೇಲೆ ಲೋಕಾಯುಕ್ತ ದಾಳಿ

| Published : Nov 22 2024, 01:18 AM IST / Updated: Nov 22 2024, 11:56 AM IST

ಅಕ್ರಮ ಆಸ್ತಿ ಸಂಪಾದನೆ : ಕಾವೇರಿ ನೀರಾವರಿ ನಿಗಮದ ಎಂಡಿ ಮನೆ ಮೇಲೆ ಲೋಕಾಯುಕ್ತ ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ರಮ ಆಸ್ತಿ ಸಂಪಾದನೆಯ ಆರೋಪದ ಮೇರೆಗೆ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್‌ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಜಿಲ್ಲೆಯ ವಿವಿಧೆಡೆಯೂ ದಾಳಿ ನಡೆಸಿ ಆಸ್ತಿ ಸೇರಿದಂತೆ ಇತರೆ ದಾಖಲೆ ಪತ್ರಗಳ ಪರಿಶೀಲನೆ ನಡೆಸುತ್ತಿದ್ದಾರೆ.

  ಮಂಡ್ಯ : ಅಕ್ರಮ ಆಸ್ತಿ ಸಂಪಾದನೆಯ ಆರೋಪದ ಮೇರೆಗೆ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್‌ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಜಿಲ್ಲೆಯ ವಿವಿಧೆಡೆಯೂ ದಾಳಿ ನಡೆಸಿ ಆಸ್ತಿ ಸೇರಿದಂತೆ ಇತರೆ ದಾಖಲೆ ಪತ್ರಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಬೆಂಗಳೂರಿನ ಕಾವೇರಿ ನೀರಾವರಿ ನಿಗಮದ ಕಚೇರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹೇಶ್ ಅವರಿಗೆ ಸಂಬಂಧಿಸಿದ ಆಸ್ತಿ ಇರುವ ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ 9 ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಮಂಡ್ಯದ ಕೆಆರ್‌ಎಸ್‌ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್, ಮಳವಳ್ಳಿಯ ದಳವಾಯಿ ಕೋಡಿಹಳ್ಳಿಯಲ್ಲಿ ಮಹೇಶ್‌ ಅವರ ಮಾವ ಕೃಷ್ಣಪ್ಪ ಅವರ ನಿವಾಸದಲ್ಲಿ ಮಂಡ್ಯ ಲೋಕಾಯುಕ್ತ ಎಸ್‌ಪಿ ಸುರೇಶ್‌ಬಾಬು ನೇತೃತ್ವದ ಅಧಿಕಾರಿಗಳ ತಂಡ ತಪಾಸಣೆ ನಡೆಸುತ್ತಿದೆ. ಬೆಳಗ್ಗೆಯಿಂದ ಕಡತಗಳ ಪರಿಶೀಲನೆಯಲ್ಲಿ ತೊಡಗಿರುವ ಲೋಕಾಯುಕ್ತ ಪೊಲೀಸರು‌ ರಾತ್ರಿಯಾದರೂ ಮುಗಿದಿರಲಿಲ್ಲವೆಂದು ಹೇಳಲಾಗಿದೆ.

23 ರಂದು ಮತಗಟ್ಟೆಗಳ ಸುತ್ತ ನಿಷೇಧಾಜ್ಞೆ ಜಾರಿ

ಕನ್ನಡಪ್ರಭ ವಾರ್ತೆ ಮಂಡ್ಯಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ, ತೆರವಾಗಿರುವ ಸದಸ್ಯ ಸ್ಥಾನಗಳ ಉಪ ಚುನಾವಣೆಯ ಮತದಾನವು ನ.23ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ.

ಮತದಾನದ ದಿನದಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಜಿಲ್ಲೆಯ ಗ್ರಾಮ ಪಂಚಾಯಿತಿ ಉಪ ಚುನಾವಣೆ ನಡೆಯುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಷರತ್ತುಗಳನ್ನು ವಿಧಿಸಿ ನಿಷೇದಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಡಾ.ಕುಮಾರ ಆದೇಶ ಹೊರಡಿಸಿದ್ದಾರೆ.ಈ ಆದೇಶವು ಜಿಲ್ಲೆಯ ಉಪ ಚುನಾವಣೆಯ ಮತದಾನ ನಡೆಯುವ ಗ್ರಾಮ ಪಂಚಾಯಿತಿ ಮತಗಟ್ಟೆಗಳ ವ್ಯಾಪ್ತಿಗೊಳಪಟ್ಟಿರುತ್ತದೆ. ಜಿಲ್ಲೆಯಲ್ಲಿ ಮತದಾನ ನಡೆಯಲಿರುವ ಗ್ರಾಮ ಪಂಚಾಯಿತಿ ಮತಗಟ್ಟೆಗಳ 100 ಮೀಟರ್ ಪ್ರದೇಶದ ವ್ಯಾಪ್ತಿಯಲ್ಲಿ ಯಾವುದೇ ಅಂಗಡಿ ಮುಂಗಟ್ಟುಗಳನ್ನು ತೆರೆಯಕೂಡದು. ನಿಷೇದಾಜ್ಞೆ ಇರುವ ಯಾವ ಪ್ರದೇಶದಲ್ಲೂ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವಂತಿಲ್ಲ. ಯಾವುದೇ ಮೆರವಣಿಗೆ ಸಭೆ ಸಮಾರಂಭ ಮಾಡುವಂತಿಲ್ಲ.

ಪಟಾಕಿ, ಸಿಡಿಮದ್ದು ಹಾಗೂ ಇತರೆ ಸ್ಫೋಟಕಗಳನ್ನು ಉಪಯೋಗಿಸುವಂತಿಲ್ಲ. ಮನುಷ್ಯ ಶವಗಳ ಅಥವಾ ಪ್ರತಿಕೃತಿ ಅಣಕು ಪ್ರದರ್ಶನ ಮಾಡುವುದನ್ನು ಪ್ರತಿಬಂಧಿಸಲಾಗಿದೆ. ನಿಷೇದಾಜ್ಞೆ ಇರುವ ಪ್ರದೇಶದಲ್ಲಿ ಬಹಿರಂಗವಾಗಿ ಘೋಷಣೆ ಮಾಡುವುದು, ಪ್ರಚೋದನಾತ್ಮಕ ಮತ್ತು ಉದ್ರೇಕಕಾರಿ, ಕಾನೂನು ಸುವ್ಯಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ.

ಈ ನಿಷೇದಾಜ್ಞೆಯು ಸದುದ್ದೇಶದ ಮದುವೆ, ಶವಸಂಸ್ಕಾರ ಕಾರ್ಯಗಳಿಗೆ ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ಮತ್ತು ಚುನಾವಣಾ ಕಾರ್ಯಕ್ಕೆ ನೇಮಿಸಲ್ಪಟ್ಟಿರುವ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಹಾಗೂ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವ ಮತದಾರರಿಗೆ ಅನ್ವಯಿಸುವುದಿಲ್ಲ. ಈ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಲಂ 223 ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದ್ದಾರೆ.