ತಮಿಳುನಾಡಿಗೆ ಕಾವೇರಿ ನದಿಯಿಂದ ಮುಂದಿನ 15 ದಿನಗಳ ಕಾಲ ಪ್ರತಿದಿನ 3,000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಆದೇಶಿಸಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ಮಾಡಿದ್ದ ಶಿಫಾರಸ್ಸನ್ನು ಪ್ರಾಧಿಕಾರ ಎತ್ತಿ ಹಿಡಿದಿದ್ದು, ಮುಂದಿನ 15 ದಿನಗಳ ಅವಧಿಯಲ್ಲಿ ತಮಿಳುನಾಡಿಗೆ 3.88 ಟಿಎಂಸಿಯಷ್ಟು ನೀರನ್ನು ಹರಿಸಬೇಕಾದ ಅನಿವಾರ್ಯತೆ ರಾಜ್ಯಕ್ಕೆ ಎದುರಾಗಿದೆ.

ಕನ್ನಡಪ್ರಭ ವಾರ್ತೆ ನವದೆಹಲಿ:

ದೆಹಲಿಯಲ್ಲಿ ಶುಕ್ರವಾರ ಬೆಳಗ್ಗೆ ಕಾವೇರಿ ನೀರು ನಿಯಂತ್ರಣ ಸಮಿತಿಯ ಸಭೆ ನಡೆಯಿತು. ತಮಿಳುನಾಡು ವಾದ ಮಂಡಿಸಿ, ನವೆಂಬರ್ 4ರ ವರೆಗೆ 16 ಟಿಎಂಸಿ ನೀರಿನ ಬಾಕಿ ಇದೆ. ಸಾಂಬಾ ಬೆಳೆಗಳಿಗೆ ತಕ್ಷಣ ನೀರಿನ ಅಗತ್ಯವಿದೆ. ಹೀಗಾಗಿ, ನವೆಂಬರ್ 5 ರಿಂದ 21ರ ವರೆಗೆ ಬಿಳಿಗುಂಡ್ಲುವಿಗೆ 20 ಟಿಎಂಸಿ ನೀರು ಹರಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿತು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕರ್ನಾಟಕ, ರಾಜ್ಯದ ಜಲಾಶಯಗಳಿಗೆ ಹರಿದು ಬರುತ್ತಿರುವ ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ. ರಾಜ್ಯದಲ್ಲಿ ತೀವ್ರ ಬರವಿದೆ. ಕಾವೇರಿ ಜಲಾನಯನ ಪ್ರದೇಶದ 56 ತಾಲೂಕುಗಳ ಪೈಕಿ 55 ತಾಲೂಕುಗಳು ಬರಪೀಡಿತವಾಗಿವೆ. ರಾಜ್ಯದ ನಾಲ್ಕು ಪ್ರಮುಖ ಕಾವೇರಿ ಜಲಾಶಯಗಳಿಗೆ ಕಳೆದ 30 ವರ್ಷಗಳ ಸರಾಸರಿಗೆ ಹೋಲಿಸಿದರೆ ಶೇ.53.88 ರಷ್ಟು ಒಳಹರಿವು ಕೊರತೆಯಾಗಿದೆ ಎಂದು ವಾದಿಸಿತು.

ಜುಲೈ 29ರಿಂದ ನವೆಂಬರ್ 6ರವರೆಗೆ ಬಿಳಿಗುಂಡ್ಲುವಿನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಸುಮಾರು 2.28 ಟಿಎಂಸಿ ನೀರು ಹರಿದಿದೆ. ತಮಿಳುನಾಡಿನಲ್ಲಿ ಈಶಾನ್ಯ ಮುಂಗಾರು ಮಳೆಯ ಪ್ರಮಾಣ ಸಾಮಾನ್ಯಕ್ಕಿಂತ ಶೇ.23ರಷ್ಟು ಹೆಚ್ಚಿದ್ದು, ಮೆಟ್ಟೂರು, ಭವಾನಿ ಮತ್ತು ಅಮರಾವತಿ ಜಲಾಶಯಗಳಲ್ಲಿ ನವೆಂಬರ್ 5ರಂದು ಒಟ್ಟು 37 ಟಿಎಂಸಿಯಷ್ಟು ನೀರಿನ ಸಂಗ್ರಹವಿದೆ.ಇದರಿಂದ ತಮಿಳುನಾಡಿನ ಸಾಂಬಾ ಬೆಳೆಗಳಿಗೆ ಡಿಸೆಂಬರ್ 15ರವರೆಗೆ ನೀರಿನ ಅಗತ್ಯವನ್ನು ಪೂರೈಸಲು ಸಾಧ್ಯವಿದೆ ಎಂದು ಪ್ರತಿಪಾದಿಸಿತು.

ಎರಡೂ ರಾಜ್ಯಗಳ ವಾದ ಪರಿಗಣಿಸಿದ ಸಮಿತಿ, ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ನಿತ್ಯ 3 ಸಾವಿರ ಕ್ಯೂಸೆಕ್‌ ನೀರು ಹರಿಸಲು ಶಿಫಾರಸ್ಸು ಮಾಡಿತು. ಬಳಿಕ, ಸಭೆ ನಡೆಸಿದ ಪ್ರಾಧಿಕಾರ ಸಮಿತಿಯ ಶಿಫಾರಸ್ಸನ್ನು ಎತ್ತಿ ಹಿಡಿಯಿತು. ಹೀಗಾಗಿ, ಮುಂದಿನ 15 ದಿನಗಳ ಅವಧಿಯಲ್ಲಿ ತಮಿಳುನಾಡಿಗೆ ಒಟ್ಟು 3.88 ಟಿಎಂಸಿ ನೀರು ಹರಿಸುವ ಅನಿವಾರ್ಯತೆ ರಾಜ್ಯಕ್ಕೆ ಎದುರಾಗಿದೆ.