ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲತಾಲೂಕಿನ 400ಕ್ಕೂ ಹೆಚ್ಚು ಗ್ರಾಮಗಳೂ ಸೇರಿದಂತೆ ಕೆ.ಆರ್.ಪೇಟೆ ಮತ್ತು ಪಾಂಡವಪುರ ತಾಲೂಕಿನ ಎಲ್ಲ ಹಳ್ಳಿಗಳ ಪ್ರತಿ ಮನೆಗೂ ಕಾವೇರಿ ನೀರು ಪೂರೈಕೆ ಮಾಡುವ 700 ಕೋಟಿ ರು. ವೆಚ್ಚದ ಕಾಮಗಾರಿ ಎರಡು ತಿಂಗಳಲ್ಲಿ ಪ್ರಾರಂಭಗೊಂಡು ವರ್ಷದೊಳಗೆ ಪೂರ್ಣಗೊಳ್ಳಲಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ತಾಲೂಕಿನ ಚಿಣ್ಯ ಮತ್ತು ಹೊಣಕೆರೆ ಗ್ರಾಪಂ ಕಚೇರಿ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಜನಸಂಪರ್ಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಜನರು ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ವಿಶ್ವಾಸವಿಟ್ಟು ಅತ್ಯಧಿಕ ಸ್ಥಾನಗಳಲ್ಲಿ ಗೆಲ್ಲಿಸುವ ಜೊತೆಗೆ, ರಾಜ್ಯದಲ್ಲಿ 136 ಸ್ಥಾನಗಳೊಂದಿಗೆ ಕಾಂಗ್ರೆಸ್ ಸರ್ಕಾರ ಬರಲು ಕಾರಣವಾಗಿರುವುದರಿಂದ 5 ಗ್ಯಾರಂಟಿ ಯೋಜನೆಗಳ ಜೊತೆಗೆ ಇಷ್ಟೆಲ್ಲಾ ಅಭಿವೃದ್ಧಿ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಲು ಸಾಧ್ಯವಾಗುತ್ತಿದೆ ಎಂದರು.ರಾಜ್ಯ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳಿಂದ ಪ್ರತಿವರ್ಷ 70 ಸಾವಿರ ಕೋಟಿ ಹಣ ರಾಜ್ಯದ ಪ್ರತಿ ಮನೆಗೂ ತಲುಪುತ್ತಿದೆ. ಸ್ವಾತಂತ್ರ್ಯ ನಂತರ ಯಾವೊಂದು ಸರ್ಕಾರವೂ ಸಹ ರಾಜ್ಯದಲ್ಲಿ ಇಂತಹ ಜನಪರ ಯೋಜನೆ ಅನುಷ್ಠಾನಕ್ಕೆ ತಂದಿರಲಿಲ್ಲ ಎಂದರು.
ಸರ್ಕಾರದಿಂದ ನಾಡಿನ ಎಲ್ಲ ವರ್ಗಗಳ ಜನರು ಶಾಂತಿ ನೆಮ್ಮದಿಯ ಬದುಕು ನಡೆಸಲು ಪೂರಕವಾದ ಮತ್ತಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದರು.ತಾಲೂಕು ಸೇರಿದಂತೆ ಜಿಲ್ಲೆಯ ರೈತರು ಮತ್ತು ಸಾರ್ವಜನಿಕರು ಕಂದಾಯ ಇಲಾಖೆ ಅಥವಾ ಇನ್ನಿತರೆ ಯಾವುದೇ ಇಲಾಖೆಗಳಲ್ಲಿ ಆಗಬೇಕಿರುವ ಕೆಲಸ ಕಾರ್ಯಗಳಿಗೆ ಅಧಿಕಾರಿಗಳು ಅಥವಾ ಮಧ್ಯವರ್ತಿಗಳಿಗೆ ಲಂಚ ಕೊಡುವ ಅಗತ್ಯವಿಲ್ಲ. ಯಾವುದೇ ಕೆಲಸ ಕಾರ್ಯಗಳಿಗೆ ಸರ್ಕಾರಿ ಶುಲ್ಕ ಹೊರತುಪಡಿಸಿ ಜನರಿಂದ ಹಣಕ್ಕೆ ಬೇಡಿಕೆ ಇಡಬಾರದೆಂದು ಎಲ್ಲ ಅಧಿಕಾರಿಗಳಿಗೆ ಈಗಾಗಲೇ ಖಡಕ್ ಸೂಚನೆ ನೀಡಲಾಗಿದೆ. ಅಧಿಕಾರಿಗಳು ಲಂಚ ಕೇಳಿದರೆ ನನ್ನ ಗಮನಕ್ಕೆ ತನ್ನಿ ಎಂದರು.
ನೂರಾರು ಸಮಸ್ಯೆ ಹೊತ್ತು ಬಂದಿದ್ದ ಜನರು ಸಭೆಯಲ್ಲಿ ಸಚಿವರಿಗೆ ಅಹವಾಲು ಸಲ್ಲಿಸಿದರು. ಸಲ್ಲಿಕೆಯಾದ ಎಲ್ಲ ಅರ್ಜಿಗಳನ್ನು ಆಯಾ ಇಲಾಖೆ ಅಧಿಕಾರಿಗಳಿಗೆ ಕೊಟ್ಟು ತಿಂಗಳೊಳಗೆ ಸಮಸ್ಯೆ ಬಗೆಹರಿಸಬೇಕೆಂದು ತಾಕೀತು ಮಾಡಿದರು.ಇದೇ ವೇಳೆ ಮಾಶಾಸನ ಮಂಜೂರಾತಿ ಪತ್ರ, ಶವಸಂಸ್ಕಾರ ಪರಹಾರದ ಚೆಕ್ ಸೇರಿದಂತೆ ಪೌತಿಖಾತೆ ಮತ್ತು ಪಹಣಿ ತಿದ್ದುಪಡಿಯ ಹೊಸ ಆರ್‌ಟಿಸಿಗಳನ್ನು ಅರ್ಹ ರೈತರಿಗೆ ವಿತರಿಸಲಾಯಿತು. ನಂತರ ತಾಲೂಕಿನ ಕಾಂತಾಪುರ ಮತ್ತು ಬೋಗಾದಿ ಗ್ರಾಪಂ ಆವರಣದಲ್ಲಿಯೂ ಸಚಿವರು ಜನಸಂಪರ್ಕ ಸಭೆ ನಡೆಸಿದರು.
ಈ ವೇಳೆ ಚಿಣ್ಯ ಗ್ರಾಪಂ ಅಧ್ಯಕ್ಷೆ ಇಂದ್ರಮ್ಮ ಕೃಷ್ಣೇಗೌಡ, ಉಪಾಧ್ಯಕ್ಷ ಸಿ.ಪಿ.ಕೃಷ್ಣಮೂರ್ತಿ, ಹೊಣಕೆರೆ ಗ್ರಾಪಂ ಅಧ್ಯಕ್ಷೆ ಎಂ.ಎ.ಸುನೀತ ಲೋಕೇಶ್, ಪಾಂಡವಪುರ ಉಪ ವಿಭಾಗಾಧಿಕಾರಿ ಎಲ್.ನಂದೀಶ್, ತಹಸೀಲ್ದಾರ್ ನಯೀಂಉನ್ನೀಸಾ, ತಾಪಂ ಇಒ ಚಂದ್ರಮೌಳಿ, ಬಿಇಒ ಸುರೇಶ್, ಸಿಡಿಪಿಒ ಕೃಷ್ಣಮೂರ್ತಿ, ಮುಖಂಡರಾದ ಚಿಣ್ಯ ವೆಂಕಟೇಶ್, ಹೊಣಕೆರೆ ಬಸವರಾಜು, ಆರ್.ಕೃಷ್ಣೇಗೌಡ, ಎನ್.ಜೆ.ರಾಜೇಶ್, ಕೊಣನೂರು ಹನುಮಂತಯ್ಯ, ಜಯರಾಮು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))