ಆಗಸ್ಟ್‌ 15ರ ವೇಳೆಗೆ 110 ಹಳ್ಳಿಗೆ ಕಾವೇರಿ ನೀರು?

| Published : Jul 10 2024, 12:46 AM IST

ಸಾರಾಂಶ

ಕಳೆದ ಬೇಸಿಗೆ ಅವಧಿಯಲ್ಲಿ ಭೀಕರ ಕುಡಿಯುವ ನೀರಿನ ಸಮಸ್ಯೆ ಎದುರಿಸಿದ 110 ಹಳ್ಳಿಗಳಿಗೆ ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆ ವೇಳೆಗೆ ಕಾವೇರಿ ನೀರು ಸಿಗುವ ನಿರೀಕ್ಷೆ ಇದೆ.

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಳೆದ ಬೇಸಿಗೆ ಅವಧಿಯಲ್ಲಿ ಭೀಕರ ಕುಡಿಯುವ ನೀರಿನ ಸಮಸ್ಯೆ ಎದುರಿಸಿದ 110 ಹಳ್ಳಿಗಳಿಗೆ ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆ ವೇಳೆಗೆ ಕಾವೇರಿ ನೀರು ಸಿಗುವ ನಿರೀಕ್ಷೆ ಇದೆ.

ಸದ್ಯ ನಗರಕ್ಕೆ ದಿನನಿತ್ಯ 1,450 ಎಂಎಲ್‌ಡಿ ಕಾವೇರಿ ನೀರು ಪೂರೈಸುತ್ತಿರುವ ಜಲಮಂಡಳಿಯು, ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ನೀರು ಕೊಡುವ ಉದ್ದೇಶದಿಂದ ಹೆಚ್ಚುವರಿ 775 ಎಂಎಲ್‌ಡಿ ನೀರು ಪೂರೈಕೆಗೆ ಕಾವೇರಿ 5ನೇ ಹಂತದ ಯೋಜನೆ ಆರಂಭಿಸಿ ಕಾಮಗಾರಿ ನಡೆಸುತ್ತಿದ್ದು, ಬಹುತೇಕ ಪೂರ್ಣಗೊಂಡಿದೆ. ಆದರೆ, ಪ್ರಾಯೋಗಿಕವಾಗಿ ನೀರು ಹರಿಸುವುದು ಸೇರಿದಂತೆ ಮೊದಲಾದ ಕೆಲಸ ಬಾಕಿ ಇದ್ದು, ಆಗಸ್ಟ್‌ 15ರ ವೇಳೆಗೆ ನೀರು ಪೂರೈಕೆ ಆರಂಭಗೊಳ್ಳಲಿದೆ ಎಂದು ಬೆಂಗಳೂರು ಜಲಮಂಡಳಿಯ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಈಗಾಗಲೇ ಕಾವೇರಿ 5ನೇ ಹಂತದ ನೀರು ಟಿ.ಕೆ.ಹಳ್ಳಿ ವರೆಗೆ ಬಂದಿದೆ. ಪಂಪ್‌ ಹೌಸ್‌ ಗಳಿಗೆ ವಿದ್ಯುತ್‌ ಸಂಪರ್ಕ ಹಾಗೂ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಕೆಲವು ಕಾಮಗಾರಿ ಬಾಕಿ ಇದೆ. ಹೆದ್ದಾರಿ ಪ್ರಾಧಿಕಾರದಿಂದ ಈ ಕಾಮಗಾರಿ ನಡೆಯಬೇಕಿದೆ. ಕಾಮಗಾರಿಗೆ ಸಂಬಂಧಿಸಿದಂತೆ ಹಣವನ್ನು ಜಲಮಂಡಳಿಯೂ ಈಗಾಗಲೇ ಪಾವತಿ ಮಾಡಿದೆ. ಮಳೆ ಹಾಗೂ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಮಿಕರ ಕೊರತೆ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿದೆ.

ಪ್ರಾಯೋಗಿಕ ನೀರು ಜುಲೈ 3ನೇ ವಾರ:

ಈಗಾಗಲೇ 110 ಹಳ್ಳಿ ವ್ಯಾಪ್ತಿಯಲ್ಲಿ ಕಾವೇರಿ ನೀರು ಪೂರೈಕೆಯ ಕೊಳವೆ ಹಾಗೂ ಒಳಚರಂಡಿ ಕೊಳವೆ ಅಳವಡಿಕೆ ಮಾಡಲಾಗಿದೆ. ಹೈಡ್ರೋ ಪರೀಕ್ಷೆ ಮೂಲಕ ಕೊಳವೆ ಪರಿಶೀಲನೆ ಸಹ ಮುಕ್ತಾಯಗೊಂಡಿದೆ. ಜುಲೈ 3ನೇ ವಾರದಿಂದ ಪ್ರಾಯೋಗಿಕವಾಗಿ 110 ಹಳ್ಳಿಗಳಿಗೆ ನೀರು ಪೂರೈಕೆ ಆರಂಭಿಸಲಾಗುತ್ತದೆ. ಯಶಸ್ವಿಯಾದರೆ ಆಗಸ್ಟ್‌ 2ನೇ ವಾರದಲ್ಲಿ 110 ಹಳ್ಳಿ ಜನರಿಗೆ ಕಾವೇರಿ ನೀರು ಲಭ್ಯವಾಗಲಿದೆ.

ಕಾವೇರಿ ಸಂಪರ್ಕಕ್ಕೆ ನಿರಾಸಕ್ತಿ:

110 ಹಳ್ಳಿ ವ್ಯಾಪ್ತಿಯಲ್ಲಿ ಒಟ್ಟು 4 ಲಕ್ಷ ಮನೆಗಳಿವೆ. ಈಗಾಗಲೇ 4ನೇ ಹಂತದಲ್ಲಿ ಉಳಿತಾಯ ಮಾಡುವ ಕಾವೇರಿ ನೀರನ್ನು 110 ಹಳ್ಳಿ ವ್ಯಾಪ್ತಿಯಲ್ಲಿ ಜಲಮಂಡಳಿಯ ಸಂಪರ್ಕ ಪಡೆದವರಿಗೆ ವಾರದಲ್ಲಿ ಒಂದೆರಡು ದಿನ ಪೂರೈಕೆ ಮಾಡಲಾಗುತ್ತಿದೆ. ಇನ್ನೊಂದು ತಿಂಗಳಲ್ಲಿ ಕಾವೇರಿ ನೀರು ಸಂಪೂರ್ಣವಾಗಿ ಪೂರೈಕೆ ಆಗಲಿದೆ.

ಕಳೆದ ಬೇಸಿಗೆಯಲ್ಲಿ ಕೊಳವೆ ಬಾವಿಗಳು ಬಿತ್ತಿ ಹೋದ ಸಂದರ್ಭದಲ್ಲಿ ಕಾವೇರಿ ನೀರು ಬೇಕು ಎಂದು ಕೇಳಿದ ಅಲ್ಲಿನ ನಿವಾಸಿಗಳು ಇದೀಗ ಕಾವೇರಿ ನೀರಿನ ಸಂಪರ್ಕ ಪಡೆಯುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಈವರೆಗೆ ಕೇವಲ 50 ಸಾವಿರ ಮಂದಿ ಜಲಮಂಡಳಿಯಿಂದ ನೀರಿನ ಸಂಪರ್ಕ ಪಡೆದಿದ್ದಾರೆ.

===

ಸಂಪರ್ಕ ಹೆಚ್ಚಳ ಆಗದಿದ್ದರೆ

ಮಂಡಳಿಗೆ ಆರ್ಥಿಕ ಹೊರೆ!

ಈಗಾಗಲೇ ಬೆಂಗಳೂರು ಜಲಮಂಡಳಿಯು ಮಾಸಿಕ ₹75 ಕೋಟಿ ವಿದ್ಯುತ್‌ ಬಿಲ್‌ ಪೂರೈಕೆ ಮಾಡುತ್ತಿದೆ. ಕಾವೇರಿ 5 ಹಂತದ ನೀರು ಪೂರೈಕೆ ಆರಂಭಗೊಂಡರೆ ಹೆಚ್ಚುವರಿ ಇನ್ನೂ ₹25 ಕೋಟಿ ವಿದ್ಯುತ್‌ ಬಿಲ್‌ ಬರಲಿದೆ. ಹೆಚ್ಚಿನ ನೀರು ಸಂಪರ್ಕ ನೀಡಿ, ಮಾಸಿಕ ಶುಲ್ಕ ವಸೂಲಿ ಮಾಡಿದರೆ ಮಾತ್ರ ಹೊರೆ ತಪ್ಪಿಸಬಹುದು. ಇಲ್ಲವಾದರೆ ಜಲಮಂಡಳಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಲಿದೆ. ಅಧಿಕಾರಿ ಸಿಬ್ಬಂದಿಯ ವೇತನ ಪಾವತಿಗೆ ಸಮಸ್ಯೆ ಆಗುವುದು ಬಹುತೇಕ ನಿಶ್ಚಿತವಾಗಿದೆ ಎಂದು ಜಲಮಂಡಳಿ ಅಧಿಕಾರಿಗಳೇ ಹೇಳಿದ್ದಾರೆ.

==

ಕಾವೇರಿ ಸಂಪರ್ಕಕ್ಕೆ ಶಿಬಿರ

110 ಹಳ್ಳಿ ವ್ಯಾಪ್ತಿಯಲ್ಲಿ ಕಾವೇರಿ ನೀರಿನ ಪೂರೈಕೆಗೆ ಚಾಲನೆ ದೊರೆತ ಬಳಿಕ ವಾರ್ಡ್‌ ಮಟ್ಟದಲ್ಲಿ ಜಲಮಂಡಳಿಗಳಿಂದ ಶಿಬಿರಗಳನ್ನು ಆಯೋಜಿಸಿ ನೀರು ಪೂರೈಕೆ ಸಂಪರ್ಕದ ಶಿಬಿರಗಳನ್ನು ನಡೆಸಲಾಗುವುದು. ಆಗ ಹೆಚ್ಚಿನ ಸಂಖ್ಯೆಯಲ್ಲಿ ನೀರಿನ ಸಂಪರ್ಕ ಪಡೆಯುವುದಕ್ಕೆ ಜನ ಮುಂದೆ ಬರಲಿದ್ದಾರೆ. ಈ ಹಿಂದೆ 4ನೇ ಹಂತದ ಕಾವೇರಿ ನೀರು ಪೂರೈಕೆ ಮಾಡಿದ ಸಂದರ್ಭದಲ್ಲಿಯೂ ಇದೇ ರೀತಿ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.