ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸುಳ್ಳುಗಳ ಸರಮಾಲೆಯನ್ನೇ ಹೇಳಿಕೊಂಡು ಬಂದಿದ್ದಾರೆ. ತಮಿಳುನಾಡಿನ ರೈತರು ಬೆಳೆ ಬೆಳೆಯಲು ನೀರು ಹರಿಸಿ ನಮ್ಮ ಭಾಗದ ರೈತರಿಗೆ ನೀರಿಲ್ಲ, ಬೆಳೆ ಬೆಳೆಯಬೇಡಿ ಎನ್ನುತ್ತಿದ್ದಾರೆ. ಇದು ಸರ್ಕಾರದ ರೈತ ವಿರೋಧಿ ನೀತಿಯಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾವೇರಿ ಜಲಾನಯನ ವ್ಯಾಪ್ತಿಯ ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಕನ್ನಡ ಸೇನೆ ಹಾಗೂ ರೈತ ಸಂಘದ ಕಾರ್ಯಕರ್ತರು ಕಡ್ಲೆಪುರಿ ತಿನ್ನುವ ಮೂಲಕ ವಿನೂತನ ಪ್ರತಿಭಟನೆ ಮಾಡಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್, ರೈತ ಸಂಘದ ಶಿವಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಸೇರಿದ ಕಾರ್ಯಕರ್ತರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸುಳ್ಳುಗಳ ಸರಮಾಲೆಯನ್ನೇ ಹೇಳಿಕೊಂಡು ಬಂದಿದ್ದಾರೆ. ತಮಿಳುನಾಡಿನ ರೈತರು ಬೆಳೆ ಬೆಳೆಯಲು ನೀರು ಹರಿಸಿ ನಮ್ಮ ಭಾಗದ ರೈತರಿಗೆ ನೀರಿಲ್ಲ, ಬೆಳೆ ಬೆಳೆಯಬೇಡಿ ಎನ್ನುತ್ತಿದ್ದಾರೆ. ಇದು ಸರ್ಕಾರದ ರೈತ ವಿರೋಧಿ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಬೆಂಗಳೂರು-ಮೈಸೂರು ಹಳೆಯ ಹೆದ್ದಾರಿಯಲ್ಲಿ ಕಡ್ಲೆಪುರಿ ತಿನ್ನುವ ಮೂಲಕ ಧರಣಿ ಕುಳಿತ ಕಾರ್ಯಕರ್ತರು, ರೈತರ ಸ್ಥಿತಿ ಯಾವ ರೀತಿ ಇದೆ ಎಂದರೆ ಕಡ್ಲೆಪುರಿ ತಿಂದು ಹೊಟ್ಟೆ ಹಸಿವನ್ನು ನೀಗಿಸಿಕೊಳ್ಳುವ ಸ್ಥಿತಿಗೆ ಬಂದಿದ್ದೇವೆ. ಇನ್ನಷ್ಟು ನೀರು ತಮಿಳುನಾಡಿಗೆ ಕೊಟ್ಟರೆ ಕಡ್ಲೆಪುರಿ ಭಾಗ್ಯವನ್ನೇ ರಾಜ್ಯ ಸರ್ಕಾರ ನೀಡಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಮುಖ್ಯಮಂತ್ರಿಗಳೇ, ಶಾಸಕರೇ, ಸಂಸದರೇ ಕಾವೇರಿ ನದಿ ನೀರಿನ ಸಮಸ್ಯೆಯನ್ನು ಸಮಸ್ಯೆಯಾಗಿಯೇ ಉಳಿಸಬೇಡಿ ಎಂದು ಒತ್ತಾಯಿಸಿದ ಕಾರ್ಯಕರ್ತರು, ಇಲ್ಲಿಯವರೆಗೆ ನಿಮಗೆ ಇಚ್ಛಾಶಕ್ತಿ ಇಲ್ಲದ ಕಾರಣ ಇಂದು ರಾಜ್ಯದ ಜನ ರಸ್ತೆಯಲ್ಲಿ ನಿಲ್ಲುವಂತಹ ಪರಿಸ್ಥಿತಿಗೆ ಬಂದಿದೆ ಎಂದರು.

ಕುಮಾರಸ್ವಾಮಿ ಅವರೇ ಬಿಡದಿಯಲ್ಲಿ ನಡೆಯುತ್ತಿರುವ ಟೌನ್‌ಶಿಪ್ ವಿರೋಧಿ ಹೋರಾಟಕ್ಕೆ ಧ್ವನಿಗೂಡಿಸಿ, ಪಾದಯಾತ್ರೆ ನಡೆಸುವ ನೀವು, ಅದೇ ರೈತರು ರಸ್ತೆಯಲ್ಲಿ ನಿಂತು ತಮಿಳುನಾಡಿಗೆ ನೀರು ಹರಿಸಬೇಡಿ ಎಂದು ಒಂದು ತಿಂಗಳಿಂದ ಹೋರಾಟ ಮಾಡುತ್ತಿದ್ದರೂ ಏಕೆ ಇಲ್ಲಿಯವರೆಗೆ ಧ್ವನಿ ಎತ್ತಿಲ್ಲ? ಕಾವೇರಿ ನದಿ ನೀರಿನ ವಿಷಯದ ಬಗ್ಗೆ ರೈತರ ಪರವಾಗಿ ಮಾತನಾಡಬೇಕಾಗಿರುವ ನೀವು ಮೌನವಾಗಿರುವುದು ಏಕೆ ಎಂದು ಪ್ರಶ್ನಿಸಿದರು.

ಕಾವೇರಿ ನೀರು ವಿಚಾರದಲ್ಲಿ ಸಂಸದರೂ ಆದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯ ರೈತರು ಹಾಗೂ ಕನ್ನಡ ಸಂಘಟನೆಗಳ ಹೋರಾಟಗಾರರ ನಿಯೋಗವನ್ನು ದೆಹಲಿಗೆ ಕರೆದೊಯ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿಸುವ ಕೆಲಸ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ಮೇಕೆದಾಟು ಯೋಜನೆಯನ್ನು ಶೀಘ್ರ ಕೈಗೆತ್ತಿಕೊಳ್ಳಬೇಕು. ಇದರ ಜೂತೆಗೆ ಕಾವೇರಿ ನದಿ ನೀರು ತಮಿಳುನಾಡಿಗೆ ಎಷ್ಟು ಹರಿದಿದೆ ಎಂಬ ಅಂಕಿ-ಅಂಶವನ್ನ ಕೊಡಬೇಕು. ಇಂದೇ ತಮಿಳುನಾಡಿಗೆ ಹರಿಯುತ್ತಿರುವ ನೀರನ್ನು ನಿಲ್ಲಿಸಬೇಕು. ಪ್ರತಿ ಟನ್ ಕಬ್ಬಿಗೆ ೫ ಸಾವಿರ ರು. ಬೆಲೆ ನಿಗದಿ ಮಾಡಬೇಕು. ಬರಪೀಡಿತ ಪ್ರದೇಶ ಎಂದು ಘೋಷಿಸಿ ಪ್ರತಿ ಎಕರೆಗೆ ೨ ಲಕ್ಷ ರು. ಹಣವನ್ನು ಪರಿಹಾರವಾಗಿ ಘೋಷಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜವರೇಗೌಡ, ಸೌಭಾಗ್ಯ, ಪುಟ್ಟಸ್ವಾಮಿ, ದೀಪಕ್, ಸುಧಾ, ಪದ್ಮಾ ಸೇರಿದಂತೆ ಹಲವರು ಭಾಗವಹಿಸಿದ್ದರು.110 ಅಡಿ ದಾಟಿದ ಕೆಆರ್ ಎಸ್

ಮಂಡ್ಯ:ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ ಜಲಾಶಯ 110 ಅಡಿ ದಾಟಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಕೊಡಗು, ಭಾಗಮಂಡಲ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಅಣೆಕಟ್ಟೆಗೆ ಗುರುವಾರ ರಾತ್ರಿ 8 ಗಂಟೆ ವೇಳೆ 15,040 ಕ್ಯುಸೆಕ್ ಹರಿದು ಬರುತ್ತಿದೆ. ಅಣೆಕಟ್ಟೆ 110.05 ಅಡಿ ದಾಟಿದೆ. 31.770 ಟಿಎಂಸಿ ನೀರು ಸದ್ಯ ಸಂಗ್ರಹವಾಗಿದೆ. ಜಲಾಶಯದಿಂದ 4563 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.ಕೆಆರ್ ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ - 124.80 ಅಡಿ

ಇಂದಿನ ಮಟ್ಟ – 110.05 ಅಡಿ

ಒಳ ಹರಿವು – 15,040 ಕ್ಯುಸೆಕ್

ಹೊರ ಹರಿವು – 4563 ಕ್ಯುಸೆಕ್

ಒಟ್ಟು ಸಂಗ್ರಹ – 31.770 ಟಿಎಂಸಿ