ತಮಿಳುನಾಡಿಗೆ ಕಾವೇರಿ ನೀರು: ಸರ್ಕಾರದ ವಿರುದ್ಧ ಶೀಘ್ರದಲ್ಲೇ ಚಳವಳಿ; ರೈತಸಂಘ ಎಚ್ಚರಿಕೆ

| Published : Jul 16 2024, 12:43 AM IST / Updated: Jul 16 2024, 07:34 AM IST

ತಮಿಳುನಾಡಿಗೆ ಕಾವೇರಿ ನೀರು: ಸರ್ಕಾರದ ವಿರುದ್ಧ ಶೀಘ್ರದಲ್ಲೇ ಚಳವಳಿ; ರೈತಸಂಘ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ರೈತರ ಬೆಳೆಗಳಿಗೆ ಅನುಕೂಲವಾಗುವಂತೆ ನಾಲೆಗಳ ಮೂಲಕ ಕೊನೆ ಭಾಗದ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸಿ ಬೆಳೆ ಬೆಳೆಯಲು ಅನುಕೂಲ ಕಲ್ಪಿಸಬೇಕು. ಅದನ್ನು ಬಿಟ್ಟು ಕಾವೇರಿ ನಿಯಂತ್ರಣ ಸಮಿತಿ ಸೂಚನೆಯಂತೆ ತಮಿಳುನಾಡಿಗೆ ನೀರು ಹರಿಸುವ ಮೂಲಕ ರೈತರಿಗೆ ಸರ್ಕಾರ ದ್ರೋಹ ಮಾಡುತ್ತಿದೆ.

   ಮದ್ದೂರು :  ಕಾವೇರಿಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ಒಂದು ಟಿಎಂಸಿ ಹರಿಸುವಂತೆ ಸಮಿತಿ ನೀಡಿರುವ ಸೂಚನೆ, ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಶೀಘ್ರದಲ್ಲೇ ಚಳವಳಿ ಹಮ್ಮಿಕೊಳ್ಳಲು ತಾಲೂಕು ರೈತ ಸಂಘ ಎಚ್ಚರಿಕೆ ನೀಡಿತು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತ ಮುಖಂಡ ಯರಗನಹಳ್ಳಿ ರಾಮಕೃಷ್ಣಯ್ಯ ನೇತೃತ್ವದಲ್ಲಿ ಸಭೆ ನಡೆಸಿದ ರೈತ ಮುಖಂಡರು, ತಮಿಳುನಾಡಿಗೆ ಪ್ರತಿನಿತ್ಯ ಒಂದು ಟಿಎಂಸಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ಸೂಚನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ನಿಯಂತ್ರಣ ಸಮಿತಿ ಆದೇಶಕ್ಕೆ ಮಣಿದು ಒಂದು ಟಿಎಂಸಿ ನೀರಿಗೆ ಬದಲಾಗಿ 8 ಸಾವಿರ ಕ್ಯುಸೆಕ್ ನೀರು ಬಿಡುವ ಬಗ್ಗೆ ಸರ್ವ ಪಕ್ಷದ ಸಭೆಯಲ್ಲಿ ತೀರ್ಮಾನ ಕೈಗೊಂಡಿರುವುದನ್ನು ರೈತ ಮುಖಂಡರು ಖಂಡಿಸಿದರು.

ಮಂಡ್ಯ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಕಾಡಿದ ಬರಗಾಲದಿಂದಾಗಿ ರೈತರು ತತ್ತರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಕಾವೇರಿ ಜಲಾನಯನ ಪ್ರದೇಶದಿಂದ ಕೆರೆಕಟ್ಟೆಗಳಿಗೆ ಮೊದಲು ನೀರು ತುಂಬಿಸಬೇಕು ಎಂದು ಆಗ್ರಹಿಸಿದರು.

ರೈತರ ಬೆಳೆಗಳಿಗೆ ಅನುಕೂಲವಾಗುವಂತೆ ನಾಲೆಗಳ ಮೂಲಕ ಕೊನೆ ಭಾಗದ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸಿ ಬೆಳೆ ಬೆಳೆಯಲು ಅನುಕೂಲ ಕಲ್ಪಿಸಬೇಕು. ಅದನ್ನು ಬಿಟ್ಟು ಕಾವೇರಿ ನಿಯಂತ್ರಣ ಸಮಿತಿ ಸೂಚನೆಯಂತೆ ತಮಿಳುನಾಡಿಗೆ ನೀರು ಹರಿಸುವ ಮೂಲಕ ರೈತರಿಗೆ ಸರ್ಕಾರ ದ್ರೋಹ ಮಾಡುತ್ತಿದೆ ಎಂದು ರೈತ ಮುಖಂಡರು ಕಿಡಿಕಾರಿದರು.

ಸರ್ಕಾರದ ವಿರುದ್ಧ ರೈತ ಸಂಘ ಶೀಘ್ರದಲ್ಲೇ ಕಾರ್ಯಕರ್ತರ ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆ ಗಳನ್ನು ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ರೈತ ಮುಖಂಡ ರಾಮಕೃಷ್ಣಯ್ಯ ತಿಳಿಸಿದರು.

ಸಭೆಯಲ್ಲಿ ರೈತ ಮುಖಂಡರಾದ ಅಣ್ಣೂರು ಮಹೇಂದ್ರ, ಕೀಳಘಟ್ಟ ನಂಜುಂಡಯ್ಯ, ವಳಗೆರೆಹಳ್ಳಿ ಶ್ರೀನಿವಾಸ್, ಸೋ.ಶಿ. ಪ್ರಕಾಶ್, ಕುದರಗುಂಡಿ ನಾಗರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.