ಸಾರಾಂಶ
ಕೇರಳದ ಜೈಹಿಂದ್ ಚಾನೆಲ್‌ನಲ್ಲಿ ಕರ್ನಾಟಕದ ಡಿ.ಕೆ.ಶಿವಕುಮಾರ್ ಅವರು ಹೂಡಿಕೆಗೆ ಸಂಬಂಧಿಸಿದಂತೆ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಡಿಕೆ ಶಿವಕುಮಾರ್ ಹೂಡಿಕೆ ಕುರಿತು ಮಾಹಿತಿ ಸಿಬಿಐ ನೀಡುವಂತೆ ನೋಟಿಸ್ ನೀಡಿದೆ.
ಪಿಟಿಐ ನವದೆಹಲಿ
ಆದಾಯ ಮೀರಿ ಆಸ್ತಿ ಗಳಿಕೆ ಮಾಡಿದ ಆರೋಪದಲ್ಲಿ ಸಿಬಿಐ ವಿಚಾರಣೆ ಎದುರಿಸುತ್ತಿರುವ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಇನ್ನೊಂದು ಸಂಕಷ್ಟ ಎದುರಾಗಿದೆ. ಕೇರಳದ ‘ಜೈಹಿಂದ್’ ಎಂಬ ಟೀವಿ ಚಾನಲ್‌ನಲ್ಲಿ ಅವರು ಮಾಡಿರುವ ಹೂಡಿಕೆಯ ವಿವರ ಕೇಳಿ ಕಾಂಗ್ರೆಸ್ ನಾಯಕ ಕೂಡ ಆಗಿರುವ ಜೈಹಿಂದ್ ಚಾನಲ್‌ನ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ.)ಗೆ ಸಿಬಿಐ ನೋಟಿಸ್ ಜಾರಿಗೊಳಿಸಿದೆ.
ಜೈಹಿಂದ್ ಕಮ್ಯುನಿಕೇಷನ್ಸ್ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್.ಶಿಜು ಅವರಿಗೆ ಜ.11ರಂದು ಎಲ್ಲಾ ದಾಖಲೆಗಳೊಂದಿಗೆ ವಿಚಾರಣೆಗೆ ಬರುವಂತೆ ಸಿಬಿಐ ತನಿಖಾಧಿಕಾರಿ ನೋಟಿಸ್ ನೀಡಿದ್ದಾರೆ. ಸಿಆರ್‌ಪಿಸಿ ಸೆಕ್ಷನ್ 91ರಡಿ ನೋಟಿಸ್ ನೀಡಲಾಗಿದ್ದು, ಡಿ.ಕೆ.ಶಿವಕುಮಾರ್ ಮತ್ತು ಅವರ ಪತ್ನಿ ಉಷಾ ಶಿವಕುಮಾರ್ ಅವರು ಚಾನಲ್‌ನಲ್ಲಿ ಮಾಡಿರುವ ಹೂಡಿಕೆಗಳ ದಾಖಲೆ, ಅದಕ್ಕೆ ಪಡೆದಿರುವ ಡಿವಿಡೆಂಡ್, ಷೇರು ವಹಿವಾಟು, ಹಣಕಾಸು ವಹಿವಾಟು, ಬ್ಯಾಂಕ್ ವಿವರ, ಲೆಡ್ಜರ್ ಅಕೌಂಟ್‌ಗಳು, ಗುತ್ತಿಗೆ ಕರಾರು ಮುಂತಾದ ಎಲ್ಲಾ ವಿವರಗಳನ್ನು ನೀಡುವಂತೆ ಸೂಚಿಸಲಾಗಿದೆ.ಅದೇ ರೀತಿ, ಚಾನಲ್‌ನಲ್ಲಿ ಡಿ.ಕೆ.ಶಿವಕುಮಾರ್ ಅವರ ಪುತ್ರ ಹಾಗೂ ಕುಟುಂಬದ ಇತರ ಸದಸ್ಯರು ಮಾಡಿರುವ ಹೂಡಿಕೆಯ ವಿವರವನ್ನೂ ನೀಡುವಂತೆ ಸಿಬಿಐ ಸೂಚಿಸಿದೆ. ಸಿಬಿಐನಿಂದ ತಮಗೆ ನೋಟಿಸ್ ಬಂದಿರುವುದನ್ನು ಚಾನಲ್‌ನ ಎಂ.ಡಿ. ಶಿಜು ಖಚಿತಪಡಿಸಿದ್ದು, ಎಲ್ಲಾ ದಾಖಲೆಗಳನ್ನು ತನಿಖಾ ಸಂಸ್ಥೆಗೆ ನೀಡುವುದಾಗಿ ತಿಳಿಸಿದ್ದಾರೆ.
‘ನಮ್ಮ ವ್ಯವಹಾರದಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ. ಸಿಬಿಐ ಅಧಿಕಾರಿಗಳ ನೋಟಿಸ್ ರಾಜಕೀಯ ದುರುದ್ದೇಶದಿಂದ ಕೂಡಿದೆ. ಕೇಂದ್ರದ ಬಿಜೆಪಿ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ. ಹಿಂದೆ ಕರ್ನಾಟಕದ ಬಿಜೆಪಿ ಸರ್ಕಾರ ಕೂಡ ಈ ಬಗ್ಗೆ ತನಿಖೆ ನಡೆಸಿತ್ತು. ಯಾವುದೇ ಅಕ್ರಮ ಪತ್ತೆಯಾಗದೆ ಕೇಸು ಮುಕ್ತಾಯವಾಗಿತ್ತು. ಈಗ ಮತ್ತೆ ತನಿಖೆ ಪುನಾರಂಭಿಸಿರುವುದು ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ನೀಡುತ್ತಿರುವ ಕಿರುಕುಳವಾಗಿದೆ’ ಎಂದು ಶಿಜು ಆರೋಪಿಸಿದ್ದಾರೆ.ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ 2020ರಲ್ಲಿ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣ ದಾಖಲಿಸಿದ್ದು, 74 ಕೋಟಿ ರು.ಗಳಷ್ಟು ಅಕ್ರಮ ಆಸ್ತಿ ಸಂಪಾದಿಸಿರುವ ಬಗ್ಗೆ ತನಿಖೆ ನಡೆಸುತ್ತಿದೆ.