ಸಾರಾಂಶ
ಶಿವಮೊಗ್ಗ: ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು ವೃದ್ಧರೊಬ್ಬರಿಗೆ ವೀಡಿಯೋ ಕಾಲ್ ಮಾಡಿ, ಆಧಾರ್ ಕಾರ್ಡ್‌ನ ಸಂಖ್ಯೆಯಿಂದ ದೊಡ್ಡಮೊಟ್ಟದ ಹಣದ ಅಕ್ರಮ ನಡೆದಿದಿದೆ. ಹಾಗಾಗಿ ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್ ಸೀಜ್ ಆಗಿದೆ ಎಂದು ಹೇಳಿ ಲಕ್ಷಾಂತರ ರು. ವಂಚಿಸಿದ ಘಟನೆ ನಡೆದಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಳೆದ ಸೆ 27ರಂದು ಗೋಪಾಳದ ಎಲ್.ಎಸ್ ಆನಂದ್ (72) ರವರಿಗೆ, ಅಪರಿಚಿತ ವ್ಯಕ್ತಿಯು ವೀಡಿಯೋ ಕಾಲ್ ಮಾಡಿ ಸಿ.ಬಿ.ಐ ಅಧಿಕಾರಿ ಎಂದು ಹೇಳಿ ನಿಮ್ಮ ಆಧಾರ್ಕಾರ್ಡ್ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಹಣವು ಅಕ್ರಮವಾಗಿ ವರ್ಗಾವಣೆಯಾಗಿದ್ದರಿಂದ ನಿಮ್ಮ ಮೇಲೆ ದೂರು ದಾಖಲಾಗಿದೆ. ನಿಮ್ಮನ್ನು ಅರೆಸ್ಟ್ ಮಾಡಲು ವಾರೆಂಟ್ ಜಾರಿ ಆಗಿದೆ. ನಿಮ್ಮ ಎಲ್ಲಾ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ ಎಂದು ಹೆದರಿಸಿದ್ದಾನೆ.ಬಳಿಕ ಇದರಿಂದ ಹೊರ ಬರಬೇಕಾದರೇ ನಾವು ಹೇಳಿದ ಖಾತೆಗೆ ಹಣ ವರ್ಗಾವಣೆ ಮಾಡಬೇಕು ಎಂದು ತಿಳಿಸಿ ಎಲ್.ಎಸ್ ಆನಂದ್ ಅವರಿಂದ ಒಟ್ಟು ₹41 ಲಕ್ಷ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದರು. ಈ ಬಗ್ಗೆ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಆರೋಪಿತರ ಪತ್ತೆಗಾಗಿ ಎಸ್ಪಿ ಜಿ.ಕೆ. ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮ್ ರಡ್ಡಿ ಮತ್ತು ಎ.ಜಿ. ಕಾರಿಯಪ್ಪ ಮಾರ್ಗದರ್ಶನದಲ್ಲಿ ಸಿಇಎನ್ ಠಾಣೆಯ ಡಿವೈಎಸ್ಪಿ ಕೆ.ಡಿ. ಕೃಷ್ಣಮೂರ್ತಿ ಮೇಲ್ವಿಚಾರಣೆಯಲ್ಲಿ, ಪಿಐ ಮಂಜುನಾಥ ನೇತೃತ್ವದಲ್ಲಿ ಎ.ಎಸ್.ಐ ಶೇಖರ್ ಮತ್ತು ಸಿಬ್ಬಂದಿ ವಿಜಯ್, ಬಿ.ರವಿ, ಶರತ್ ಕುಮಾರ್ ಅವರೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.
ಈ ತನಿಖಾ ತಂಡವು ಪ್ರಕರಣವನ್ನು ಭೇದಿಸಿ ನ.12ರಂದು ಪ್ರರಕಣದ ಆರೋಪಿಗಳಾದ ಉತ್ತರ ಪ್ರದೇಶ ಮೂಲದ ಮೊಹಮ್ಮದ್ ಅಹಮದ್ (45), ಅಭಿಶೇಕ್ ಕುಮಾರ್ ಶೇಟ್ ( 27), ಇವರನ್ನು ಬಂಧಿಸಿ ಒಟ್ಟು ₹23.89 ಲಕ್ಷ ವಶಕ್ಕೆ ಪಡೆದಿದೆ.