ಗವಿಮಠ ಜಾತ್ರೆಯಲ್ಲಿ ಸಿಸಿ ಕ್ಯಾಮೆರಾ ಕಣ್ಣು

| Published : Dec 29 2024, 01:17 AM IST

ಸಾರಾಂಶ

ದಕ್ಷಿಣ ಭಾರತದ ಕುಂಭ ಮೇಳ ಖ್ಯಾತಿಯ ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ವಕ್ಕೆ ಈಗಾಗಲೇ ದಿನಗಣನೇ ಪ್ರಾರಂಭವಾಗಿದ್ದು, ಭರದ ಸಿದ್ಧತೆ ನಡೆದಿದೆ.

ಕೊಪ್ಪಳ: ದಕ್ಷಿಣ ಭಾರತದ ಕುಂಭ ಮೇಳ ಖ್ಯಾತಿಯ ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವಕ್ಕೆ ಈಗಾಗಲೇ ದಿನಗಣನೇ ಪ್ರಾರಂಭವಾಗಿದ್ದು, ಭರದ ಸಿದ್ಧತೆ ನಡೆದಿದೆ.

ಪ್ರತಿವರ್ಷ ಜಾತ್ರೆಯಲ್ಲಿ ಹೆಚ್ಚುತ್ತಿರುವ ಕಳ್ಳತನ ನಿಯಂತ್ರಣ ಮಾಡಲು ಈ ವರ್ಷ ಶ್ರೀ ಗವಿಮಠದಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಲಾಗಿದೆ. ಜಾತ್ರೆ, ಮಹಾದಾಸೋಹ ಸೇರಿದಂತೆ ಹಲವು ಕಡೆ ಅಗತ್ಯವಾಗಿರುವುದನ್ನು ಗುರುತಿಸಿ, ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಕೇವಲ ಅಳವಡಿಸುವುದು ಅಷ್ಟೇ ಅಲ್ಲ, ಅವುಗಳ ಮೇಲೆ ನಿರಂತರ ನಿಗಾ ಇರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳ್ಳರು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗುತ್ತಿದ್ದಂತೆ ಅವರನ್ನು ಬೆನ್ನಟ್ಟಿ ಕ್ರಮವಹಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ.ಸಿದ್ಧಗೊಂಡ ತೇರು, ಜಾತ್ರಾ ಆವರಣ

೨೦೨೫ ಜನವರಿ ೧೫ರಂದು ಜರುಗಲಿರುವ ಶ್ರೀ ಗವಿಮಠದ ಮಹಾರಥೋತ್ಸವದ ಅಂಗವಾಗಿ ಶ್ರೀ ಗವಿಮಠದ ಮುಂಭಾಗದಲ್ಲಿನ ಆವರಣದಲ್ಲಿ ಸಂಪೂರ್ಣ ಸಿದ್ಧ ಮಾಡಲಾಗಿದೆ. ೯೦೦ ರಿಂದ ೧೦೦೦ ಅಂಗಡಿಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರತಿವರ್ಷಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಅಂಗಡಿಗಳು ಆಗಮಿಸಲಿವೆ. ಜಾತ್ರೆ ಹಾಗೂ ಮಹಾರಥೋತ್ಸವ ಆವರಣ ಸ್ಚಚ್ಛತಾ ಕಾರ್ಯಗಳೆಲ್ಲವೂ ಮುಗಿದು ಸಂಪೂರ್ಣವಾಗಿ ಸಿದ್ಧಗೊಂಡಿದೆ

ಬೃಹತ್ ಸ್ವಾಗತ ಮಹಾದ್ವಾರಗಳ ಮುಖೇನ ಜನರಿಗೆ ರಹದಾರಿ ಕಲ್ಪಿಸಲಾಗಿದ್ದು, ಪ್ರತಿ ಸಾಲುಗಳ ಮಧ್ಯೆ ಜನಸಂದಣಿ ಆಗದಂತೆ ಸಮತಟ್ಟಾದ ರಸ್ತೆಗಳನ್ನು ನಿರ್ಮಿಸಲಾಗುತ್ತದೆ.

ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಯ್ದುಕೊಳ್ಳಲು ಪೂರ್ವಭಾವಿಯಾಗಿ ಶ್ರೀ ಮಠ ಜಾತ್ರಾ ಮಳಿಗೆಗಳ ಸನಿಹದಲ್ಲಿಯೇ ಸಕಲ ಮೂಲ ಸೌಕರ್ಯ ಒದಗಿಸುತ್ತದೆ.