ಅಪರಾಧಗಳ ತಡೆ, ಪತ್ತೆಗೆ ಸಿಸಿ ಕ್ಯಾಮೆರಾ ಸಹಕಾರಿ: ಎಸ್ಪಿ ಉಮಾ ಪ್ರಶಾಂತ

| Published : Aug 16 2024, 12:54 AM IST

ಅಪರಾಧಗಳ ತಡೆ, ಪತ್ತೆಗೆ ಸಿಸಿ ಕ್ಯಾಮೆರಾ ಸಹಕಾರಿ: ಎಸ್ಪಿ ಉಮಾ ಪ್ರಶಾಂತ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿ ನಾಗರಿಕ ಜನ ಸಂಪರ್ಕ ಸಭೆಯಲ್ಲಿ ಅಧಿಕಾರಿಗಳ ಬಳಿ ಮಹಿಳೆಯೊಬ್ಬರು ಅಳಲು ತೋಡಿಕೊಂಡರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು ಸಾರ್ವಜನಿಕರು ಆದಷ್ಟು ಜಾಗ್ರತೆ ವಹಿಸಬೇಕು. ಅನಾಮಿಕ ಕರೆಗಳು, ಅನಾಮಧೇಯ ವ್ಯಕ್ತಿಗಳಿಗೆ ಸ್ಪಂದಿಸಬಾರದು. ಒಂದು ವೇಳೆ ಸೈಬರ್‌ ಕ್ರೈಂಗೆ ಒಳಗಾದರೆ ತಕ್ಷಣ‍ ಸೈಬರ್ ಕ್ರೈಂ ಸಹಾಯವಾಣಿ 1930ಗೆ ಕರೆ ಮಾಡುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ತಿಳಿಸಿದ್ದಾರೆ.

ನಗರದ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿ ಹೂವಿನ ಮಾರುಕಟ್ಟೆಯಲ್ಲಿ ನಾಗರಿಕ ಜನ ಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿ, ಸೈಬರ್ ಕ್ರೈಂಗೆ ಒಳಗಾದವರು ತಕ್ಷಣ‍ ಸಹಾಯವಾಣಿಗೆ ಕರೆ ಮಾಡಿ, ಸಮೀಪದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಬೇಕು. ತುರ್ತು ಸಮಯದಲ್ಲಿ ಸಹಾಯಕ್ಕಾಗಿ 112 ಜಾರಿಗೆ ತರಲಾಗಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಿ. ಪೊಲೀಸ್ ಬೀಟ್ ವ್ಯವಸ್ಥೆ ಹಾಗೂ ವಾಟ್ಸಪ್‌ ಗ್ರೂಪ್‌ಗಳಲ್ಲಿ ಸೇರುವ ಮೂಲಕ ತಮ್ಮ ಬೀಟ್ ಸಿಬ್ಬಂದಿ ಬಗ್ಗೆ ತಿಳಿದುಕೊಳ್ಳಿ. ಬೀಟ್ ಸಮಸ್ಯೆಗಳನ್ನು ತಮ್ಮ ಭಾಗದ ಬೀಟ್ ಸಿಬ್ಬಂದಿಗೆ ತಿಳಿಸಲು ಸಹಕಾರಿಯಾಗುತ್ತದೆ. ಯಾವ ಸಮಯದಲ್ಲಿ ಯಾವುದೇ ಅಧಿಕಾರಗಳಿಗಾದರೂ ಮಾತನಾಡಿ ಎಂದು ತಿಳಿಸಿದರು.

ಯುವ ಸಮಿತಿ ರಚಿಸಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲಿ ಅದರಲ್ಲಿ ಸೇರಬೇಕು. ದಾವಣಗೆರೆಯಲ್ಲಿ ಮಹಿಳಾ ಸುರಕ್ಷತೆಗಾಗಿ ಸುರಕ್ಷಾ ಆ್ಯಪ್ ತರಲಾಗಿದೆ. ಎಲ್ಲಾ ಮಹಿಳೆಯರು, ವಿದ್ಯಾರ್ಥಿನಿಯರು, ಯುವತಿಯರು, ವಯೋವೃದ್ಧೆಯರು ತಮ್ಮ ಮೊಬೈಲ್‌ಗಳಲ್ಲಿ ಆ್ಯಪ್‌ ಇನ್‌ಸ್ಟಾಲ್ ಮಾಡಿಕೊಂಡು, ಅದರ ಸದುಪಯೋಗ ಪಡೆಯಬೇಕು. ತಮ್ಮ ಮನೆಗಳ ಮುಂದೆ, ವ್ಯಾಪಾರದ ಸ್ಥಳಗಳಲ್ಲಿ, ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಟಿವಿ, ಸಿಸಿ ಕ್ಯಾಮೆರಾ ಅಳವಡಿಸಿದರೆ ಸಾಕಷ್ಟು ಅಪರಾಧ ತಡೆಯಲು ಹಾಗೂ ಅಪರಾಧಿ ಪತ್ತೆ ಹಚ್ಚಲು ಸಾಧ್ಯ, ಮಹಿಳೆಯರು ತಮ್ಮ ಮೇಲಾಗುವ ದೌರ್ಜನ್ಯಗಳ ವಿರುದ್ಧ ಧೈರ್ಯವಾಗಿ ಧ್ವನಿ ಎತ್ತಬೇಕು ಎಂದು ಹೇಳಿದರು.

ಎಎಸ್ಪಿ ವಿಜಯಕುಮಾರ ಎಂ.ಸಂತೋಷ್ ಮಾತನಾಡಿ, ಚಿಕ್ಕ ವಯಸ್ಸಿನ ಮಕ್ಕಳು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹದಿಹರೆಯದ ವಯಸ್ಸಿನಲ್ಲಿ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಸಾಮಾನ್ಯವಾಗುತ್ತಿದೆ. ಈ ಹಿನ್ನೆಲೆ ಪೋಷಕರು ಮಕ್ಕಳ ಮೇಲೆ ನಿಗಾ ವಹಿಸಬೇಕು. ಕಾನೂನು ಬಾಹಿರ ಚಟುವಟಿಕೆ ತಡೆಯುವಲ್ಲಿ ಪೊಲೀಸರೊಂದಿಗೆ ಸಹಕರಿಸಬೇಕು ಎಂದರು. ಪಾಲಿಕೆ ಸದಸ್ಯೆ ಮೀನಾಕ್ಷಿ ಜಗದೀಶ ಮಾತನಾಡಿ, ಸ್ಥಳೀಯ ಭಾಗದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಈ ಬಗ್ಗೆ ಪೊಲೀಸ್ ಇಲಾಖೆ ಗಮನ ಹರಿಸಬೇಕು ಎಂದರು.

ಸ್ಥಳೀಯ ನಿವಾಸಿಗಳು ಠಾಣೆ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು, ಕೆಲ ಪುಂಡ ಪೋಕರಿಗಳು ಮಧ್ಯರಾತ್ರಿ ಅನಾವಶ್ಯಕವಾಗಿ ಸುತ್ತಾಡುವುದು, ದಾರಿ ಹೋಕರಿಗೆ ಕೀಟಲೆ ಮಾಡುವುದು, ಬಾಡಾ ಕ್ರಾಸ್‌ನಲ್ಲಿ ಮಂಗಳಮುಖಿಯರಿಂದ ಆಗುತ್ತಿರುವ ದೌರ್ಜನ್ಯ ತಡೆಗೆ ಸೂಕ್ತ ಕ್ರಮ ಕೈಗೊಳ್ಳುವುದು ಸೇರಿ ವಿವಿಧ ಸಮಸ್ಯೆಗಳ ಬಗ್ಗೆ ಎಸ್ಪಿ ಗಮನಕ್ಕೆ ತಂದರು.

ಸಾರ್ವಜನಿಕರೊಬ್ಬರು ತಮ್ಮ ಮನೆಯಲ್ಲಿ ಚಿನ್ನಾಭರಣಗಳು ಕಳುವಾಗಿದ್ದ ವೇಳೆ ಪೊಲೀಸರು ನಮ್ಮೊಂದಿಗೆ ಸೌಜನ್ಯದಿಂದ ವರ್ತಿಸಿ, ಧೈರ್ಯ ತುಂಬಿದರು. ಆದಷ್ಟು ಬೇಗನೆ ಕಳ್ಳರನ್ನು ಪತ್ತೆ ಮಾಡಿ, ನಿಮ್ಮ ಕಳುವಾದ ಚಿನ್ನಾಭರಣ ಪತ್ತೆ ಮಾಡುವ ಭರವಸೆ ನೀಡಿದ್ದರು. ಅದರಂತೆ ಕಳ್ಳರನ್ನು ಪತ್ತೆ ಮಾಡಿ, ನಮ್ಮ ಚಿನ್ನಾಭರಣಗಳು ನಮಗೆ ವಾಪಾಸ್ಸಾಗುವಂತೆ ಮಾಡಿದ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ತಮ್ಮ ಕುಟುಂಬದ ಪರವಾಗಿ ಕೃತಜ್ಞತೆ ಸಲ್ಲಿಸಿದರು.

ಆರ್‌ಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳುವು, ಸುಲಿಗೆ, ಕಳೆದುಕೊಂಡವರ ಮೊಬೈಲ್‌ಗಳನ್ನು ** CEIR ** ವೆಬ್‌ಪೋರ್ಟಲ್‌ನಲ್ಲಿ ನೋಂದಾಯಿಸಿ ಬ್ಲಾಕ್ ಮಾಡಿ, ನಂತರ ಪತ್ತೆ ಹಚ್ಚಲಾಗಿದ್ದ ವಿವಿಧ ಕಂಪನಿ 6 ಮೊಬೈಲ್‌ಗಳನ್ನು ಅವುಗಳ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಎಎಸ್ಪಿ ಜಿ.ಮಂಜುನಾಥ, ಡಿವೈಎಸ್ಪಿ ಮಲ್ಲೇಶ ದೊಡ್ಮನಿ, ಗೋಪಿ ನಾಯ್ಕ, ಕರೆಗೌಡ್ರು, ಆಜಾದ್ ನಗರ ವೃತ್ತ ಸಿಪಿಐ ಬಾಲಚಂದ್ರ ನಾಯ್ಕ, ಆರ್‌ಎಂಸಿ ಠಾಣೆ ಪಿಎಸ್ಐ ಸಚಿನ್ ಬಿರಾದರ್ ಇತರರು ಇದ್ದರು.