ಭಟ್ಕಳ ಚೆಕ್‌ಪೋಸ್ಟ್‌ನಲ್ಲಿ ಸಿಸಿ ಕ್ಯಾಮೆರಾ ನಾಮಕಾವಸ್ತೆ

| Published : Dec 06 2023, 01:15 AM IST

ಭಟ್ಕಳ ಚೆಕ್‌ಪೋಸ್ಟ್‌ನಲ್ಲಿ ಸಿಸಿ ಕ್ಯಾಮೆರಾ ನಾಮಕಾವಸ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿರಾಲಿ ಮತ್ತು ಸರ್ಪನಕಟ್ಟೆ ಚೆಕ್‌ಪೋಸ್ಟ್ ಭಟ್ಕಳದ ದೃಷ್ಟಿಯಿಂದ ಪ್ರಮುಖವಾಗಿದೆ. ಈ ಚೆಕ್‌ಪೋಸ್ಟ್‌ಗಳಿಗೆ ಸಿಸಿ ಕ್ಯಾಮೆರಾ ಸೇರಿದಂತೆ ಅಗತ್ಯ ಸಿಬ್ಬಂದಿ ಒದಗಿಸಿದರೆ ಅಪರಾಧ ಪ್ರಕರಣ ಪತ್ತೆಗೆ ಮತ್ತು ಕಡಿವಾಣ ಹಾಕಲು ಅನುಕೂಲವಾಗಲಿದೆ.

ಭಟ್ಕಳ:

ಶಿರಾಲಿ ಸೇರಿದಂತೆ ತಾಲೂಕಿನ ಚೆಕ್‌ಪೋಸ್ಟ್‌ಗಳಲ್ಲಿ ಸಿಸಿ ಕ್ಯಾಮೆರಾ ಇಲ್ಲದಿರುವುದು ಅಪರಾಧ ಪ್ರಕರಣ ಪತ್ತೆ ಹಚ್ಚಲು ಹಿನ್ನಡೆಯಾಗಿದೆ.ಅಕ್ರಮ ಚಟುವಟಿಕೆ ತಡೆಯಲು ಶಿರಾಲಿ, ಕುಂಟವಾಣಿ ಮತ್ತು ಸರ್ಪನಕಟ್ಟೆಯಲ್ಲಿ ಚೆಕ್‌ಪೋಸ್ಟ್‌ಗಳನ್ನು ಹಲವು ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಆದರೆ ಇಲ್ಲಿ ಸಿಸಿ ಕ್ಯಾಮೆರಾ ಸೇರಿದಂತೆ ಅಗತ್ಯ ಸೌಕರ್ಯ ಒದಗಿಸಿಲ್ಲ. ಕುಂಟವಾಣಿ ಚೆಕ್‌ಪೋಸ್ಟ್‌ನಲ್ಲಿ ಅಲ್ಪ-ಸ್ವಲ್ಪ ಸೌಲಭ್ಯ ಇದ್ದರೂ ಸಹ ಸಪರ್ಪನಕಟ್ಟೆ ಮತ್ತು ಶಿರಾಲಿ ಚೆಕ್‌ಪೋಸ್ಟ್‌ನಲ್ಲಿ ಸೌಲಭ್ಯ ಇಲ್ಲವಾಗಿದೆ.ಶಿರಾಲಿ ಚೆಕ್‌ಪೋಸ್ಟ್‌ನಲ್ಲಿ ಕುಳಿತುಕೊಳ್ಳಲು ಸ್ಥಳವಿಲ್ಲ. ಕಟ್ಟಡ ಹಳೆಯದಾಗಿದ್ದು, ಶಿಥಿಲಾವಸ್ಥೆ ತಲುಪಿದೆ. ಈ ಹಿಂದೆ ಇಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದರೂ ಅದು ಹಾಳಾಗಿದೆ. ಇತ್ತೀಚೆಗೆ ಇಲ್ಲಿ ಲಾರಿಯೊಂದು ಬೈಕಿಗೆ ಡಿಕ್ಕಿ ಹೊಡೆದು ಯುವತಿಯ ಸಾವಿಗೆ ಕಾರಣವಾಗಿತ್ತು. ಆದರೆ ಡಿಕ್ಕಿ ಹೊಡೆದ ಲಾರಿ ಪರಾರಿಯಾಗಿತ್ತು. ಸಿಸಿ ಕ್ಯಾಮೆರಾ ಇದ್ದಿದ್ದರೆ ಲಾರಿ ಪತ್ತೆ ಹಚ್ಚುವುದು ಸುಲಭವಾಗುತ್ತಿತ್ತು.ಶಿರಾಲಿ ಮತ್ತು ಸರ್ಪನಕಟ್ಟೆ ಚೆಕ್‌ಪೋಸ್ಟ್ ಭಟ್ಕಳದ ದೃಷ್ಟಿಯಿಂದ ಪ್ರಮುಖವಾಗಿದೆ. ಈ ಚೆಕ್‌ಪೋಸ್ಟ್‌ಗಳಿಗೆ ಸಿಸಿ ಕ್ಯಾಮೆರಾ ಸೇರಿದಂತೆ ಅಗತ್ಯ ಸಿಬ್ಬಂದಿ ಒದಗಿಸಿದರೆ ಅಪರಾಧ ಪ್ರಕರಣ ಪತ್ತೆಗೆ ಮತ್ತು ಕಡಿವಾಣ ಹಾಕಲು ಅನುಕೂಲವಾಗಲಿದೆ. ಈ ಹಿಂದೆ ತಾಲೂಕಿನ ಮೂರು ಚೆಕ್‌ಪೋಸ್ಟ್‌ಗಳಲ್ಲಿ ಹಗಲು- ರಾತ್ರಿ ಅಗತ್ಯ ಪೊಲೀಸರು ಇದ್ದು ನಿಗಾ ವಹಿಸುತ್ತಿದ್ದರು. ಹೆದ್ದಾರಿ ಮೇಲೆ ಸಂಚರಿಸುವ ವಾಹನಗಳ ಮೇಲೆ ಗಮನ ಹರಿಸುತ್ತಿದ್ದು, ಅನುಮಾನ ಬಂದ ವಾಹನ ತಡೆದು ನಿಲ್ಲಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರ ಸಂಖ್ಯೆಯೂ ಕಡಿಮೆಯಾಗಿದೆ ಮತ್ತು ಕೆಲವು ದಿನ ಸಿಬ್ಬಂದಿಗಳೇ ಇರುವುದಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.ವಾಹನಗಳಲ್ಲಿ ಅಕ್ರಮ ಸಾಮಗ್ರಿ, ಗೋಮಾಂಸ ಸಾಗಾಟ ಇದೀಗ ಸುಲಭವಾಗಿದೆ ಎನ್ನುವ ಆರೋಪವೂ ಕೇಳಿ ಬಂದಿದೆ. ಮೇಲಿನ ಮೂರು ಚೆಕ್‌ಪೋಸ್ಟ್‌ಗಳು ಬಿಗಿಯಾಗಿದ್ದರೆ ಅಕ್ರಮ ಚಟುವಟಿಕೆ, ಅಕ್ರಮ ಸಾಗಾಟ ಎಲ್ಲದಕ್ಕೂ ಕಡಿವಾಣ ಬೀಳಲಿದೆ. ಪಟ್ಟಣ ಭಾಗದಲ್ಲಿ ಮತ್ತು ಚೆಕ್‌ಪೋಸ್ಟ್‌ಗಳಲ್ಲಿ ಸಮರ್ಪಕವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎನ್ನುವ ಆಗ್ರಹ ಮೊದಲಿನಿಂದಲೂ ಇದೆ. ಆದರೆ ಪಟ್ಟಣದಲ್ಲಿ ಹಾಳಾದ ಸಿಸಿ ಕ್ಯಾಮೆರಾ ಇನ್ನೂ ರಿಪೇರಿ ಆಗಲೇ ಇಲ್ಲ. ದುರಸ್ತಿಗೆ ಅನುದಾನ ಕೊಡುವವರು ಯಾರು ಎನ್ನುವುದು ಸದ್ಯಕ್ಕಿರುವ ಪ್ರಶ್ನೆ. ಇತ್ತೀಚೆಗೆ ನಡೆದ ಅಧಿಕಾರಿಗಳ ಸಭೆಯಲ್ಲೂ ಸಿಸಿ ಕ್ಯಾಮೆರಾ ವಿಷಯ ಚರ್ಚೆಯಾದರೂ ಇನ್ನೂ ಕ್ರಮ ಜರುಗಿಸಿಲ್ಲ.

ಶಿರಾಲಿ ಚೆಕ್‌ಪೋಸ್ಟ್ ಹಳೆಯದಾಗಿದ್ದು, ಅಗತ್ಯ ಸಿಬ್ಬಂದಿಗಳೊಂದಿಗೆ ಇಲ್ಲಿ ಮೂಲಭೂತ ಸೌಕರ್ಯ ಒದಗಿಸಬೇಕಿದೆ. ಅಪರಾಧ ಪ್ರಕರಣ ಪತ್ತೆ ಹಚ್ಚಲು ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಮೋಹನ ದೇವಡಿಗ ಒತ್ತಾಯಿಸಿದ್ದಾರೆ.