ಹಾನಗಲ್ಲ: ಪಟ್ಟಣದಿಂದ ಮೂರು ಕಿಮೀ ಅಂತರದಲ್ಲಿರುವ ಮೂರು ಜಿಲ್ಲೆಗಳಿಗೆ ಸಂಪರ್ಕದ ಜನನಿಬಿಡ ನಾಲ್ಕರ ಕ್ರಾಸ್‌ನಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವ ಮೂಲಕ ಪೊಲೀಸ್ ಇಲಾಖೆ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವ ಪ್ರಯತ್ನ ಮಾಡಿದೆ.

ಕಳೆದೆರಡು ದಶಕಗಳಿಂದ ನಾಲ್ಕರ ಕ್ರಾಸ್‌ ಅತಿ ಹೆಚ್ಚು ಜನರು ಬಸ್‌ಗಳಿಗಾಗಿ ಕಾದು ಶಿರಸಿ, ಶಿವಮೊಗ್ಗ, ಹುಬ್ಬಳ್ಳಿ, ಹಾವೇರಿಗಳ ಕಡೆಗೆ ಸಂಚರಿಸುವ ಅತ್ಯಂತ ಜನ ದಟ್ಟಣೆಯ ತಾಣವಾಗಿದೆ. ಎಲ್ಲ ಬಸ್‌ಗಳು ಇಲ್ಲಿ ನಿಲುಗಡೆ ಮಾಡಿಯೇ ಮುಂದೆ ಸಂಚರಿಸುವಷ್ಟು ಪ್ರಯಾಣಿಕರ ದಟ್ಟಣೆಯ ತಾಣವಾಗಿದೆ ಇದು.

ಇದೇ ಕಾರಣಕ್ಕೆ ಇಲ್ಲಿ ಜನರ ಅಗತ್ಯದ ಉಪಾಹಾರ, ಊಟದ ಅಂಗಡಿಗಳು, ಸಿಹಿ ತಿಂಡಿಗಳ ಅಂಗಡಿಗಳು, ದೊಡ್ಡ ದೊಡ್ಡ ಹೊಟೆಲ್‌ಗಳು, ದಾಬಾಗಳು, ವಾಹನ ರಿಪೇರಿ ಅಂಗಡಿಗಳು ಕೂಡ ಈ ಕ್ರಾಸ್‌ನಲ್ಲಿ ತಲೆ ಎತ್ತಿವೆ.

ಇಲ್ಲಿನ ಹೊಟೆಲ್‌ಗಳಲ್ಲಿ ರಾತ್ರಿ ಹಾಗೂ ಹಗಲು ಹೊತ್ತಿನಲ್ಲಿ ಬಸ್‌ಗಳು ನಿಂತು ಪ್ರಯಾಣಿಕರಿಗೆ ಊಟಕ್ಕೂ ಅವಕಾಶ ಕಲ್ಪಿಸುತ್ತವೆ. ಈ ಕ್ರಾಸ್‌ನಲ್ಲಿ ಶಾಲೆ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಕಾಯ್ದು ನಿಲ್ಲುತ್ತಾರೆ.

ಈ ನಾಲ್ಕರ ಕ್ರಾಸ್‌ನಿಂದ ಕೂಗಳತೆಯಲ್ಲಿ ಭೂತೇಶ್ವರ ದೇವಸ್ಥಾನವಿದೆ. ವಿಶೇಷವಾಗಿ ಭಾನುವಾರ, ಗುರುವಾರ, ಅಮಾವಾಸ್ಯೆ, ಹುಣ್ಣಿಮೆಯಂದು ದೊಡ್ಡ ಪ್ರಮಾಣದಲ್ಲಿ ಜನ ಸೇರುತ್ತಾರೆ. ಕ್ಯಾಮೆರಾ ಕಣ್ಗಾವಲು: ಈ ಕ್ರಾಸ್ ಸುತ್ತಮುತ್ತ ಅಪರಾಧಿಕ ಕೃತ್ಯಗಳ ಬಗ್ಗೆ ಪೊಲೀಸ್ ಠಾಣೆಗೆ ದೂರುಗಳು ಹೆಚ್ಚುತ್ತಿರುವುದನ್ನು ಪರಿಗಣಿಸಿ, ಪೊಲೀಸ್ ಇಲಾಖೆ ತೀರ ಅಗತ್ಯವಾದ ಸಿಸಿ ಕ್ಯಾಮೆರಾ ಅಳವಡಿಸಿದೆ. ೫ ಎಂಪಿ ಸಾಮರ್ಥ್ಯದ ೪ ಸುಧಾರಿತ ಎಚ್‌ಡಿ ಸಿಸಿ ಕ್ಯಾಮೆರಾ ಇವು. ಸಿಸಿ ಕ್ಯಾಮೆರಾದ ನೇರ ವೀಕ್ಷಣೆ ಹಾನಗಲ್ಲ ಪೊಲೀಸ್ ಠಾಣೆಯ ಅಧಿಕಾರಿಗಳ ಮೊಬೈಲ್‌ನಲ್ಲಿ ಸಾಧ್ಯವಾಗುತ್ತಿದೆ.ಅಪರಾಧ ಕೃತ್ಯ: ಈ ಹಿಂದೆ ಇದೇ ಪ್ರದೇಶದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಘಟನೆ ನಡೆದು ರಾಜ್ಯಾದ್ಯಂತ ಸುದ್ದಿ ಮಾಡಿತ್ತು. ಇಲ್ಲಿ ಕಾನೂನು ಸುವ್ಯವಸ್ಥೆ ತರುವ ನಿಟ್ಟಿನಲ್ಲಿ ಸಿಸಿ ಕ್ಯಾಮೆರಾ ಅಗತ್ಯವಾಗಿತ್ತು. ಆದರೆ ಇದಕ್ಕೆ ಬೇಕಾದ ಅನುದಾನ ಇಲಾಖೆಯಿಂದ ಲಭ್ಯವಾಗದ ಕಾರಣ ಪೊಲೀಸ್ ಇಲಾಖೆ ಮತ್ತು ಸ್ಥಳೀಯ ವ್ಯಾಪಾರಸ್ಥರ ಸಹಕಾರದಿಂದ ಹಾನಗಲ್ಲ ಪೊಲೀಸ್ ಠಾಣೆಯ ಅಧಿಕಾರಿಗಳು ಸಿಸಿ ಕ್ಯಾಮೆರಾ ಅಳವಡಿಕೆ ಮಾಡಿದ್ದಾರೆ.ಶೌಚಾಲಯ, ಬೆಳಕು: ಹಗಲಲ್ಲದೆ ರಾತ್ರಿಯಿಡೀ ಪ್ರಯಾಣಿಕರು ಇಲ್ಲಿಂದ ದೂರದೂರಿಗೆ ಬಸ್‌ಗಳನ್ನು ಹತ್ತುವುದು, ದೂರದೂರಿನಿಂದ ಇಲ್ಲಿ ಇಳಿದು ಸಮೀಪದ ಊರುಗಳಿಗೆ ತಮ್ಮ ಖಾಸಗಿ ವಾಹನಗಳಲ್ಲಿ ತೆರಳುತ್ತಾರೆ. ಸುರಕ್ಷತೆಗಾಗಿ ಇಲ್ಲಿ ಇನ್ನೂ ಉತ್ತಮ ವಿದ್ಯುದ್ದೀಪಗಳ ಅಗತ್ಯವಿದೆ. ಅದಕ್ಕಾಗಿ ಪೊಲೀಸ್ ಇಲಾಖೆ ಈ ಸ್ಥಳಕ್ಕೆ ಸಂಬಂಧಿಸಿದ ಗೆಜ್ಜಿಹಳ್ಳಿ ಗ್ರಾಮ ಪಂಚಾಯಿತಿಗೆ ದೀಪ ಅಳವಡಿಸಲು ಮನವಿ ಮಾಡಿದೆ. ಇಲ್ಲೊಂದು ಬಸ್ ನಿಲ್ದಾಣ, ಸಾರ್ವಜನಿಕ ಶೌಚಾಲವೂ ಬೇಕು ಎಂಬುದು ಪ್ರಯಾಣಿಕರ ಬೇಡಿಕೆಯಾಗಿದೆ. ತಾಲೂಕಿನ ನಾಲ್ಕರ ಕ್ರಾಸ್‌ನಲ್ಲಿ ಜನರ ಬೇಡಿಕೆಯಂತೆ ಸಿಸಿ ಕ್ಯಾಮೆರಾ ಅಗತ್ಯವೆಂದು ನಿರ್ಣಯಿಸಿ, ಇಲ್ಲಿ ಉತ್ತಮ ಗುಣ ಮಟ್ಟದ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಇದು ನಮ್ಮ ಮೊಬೈಲ್‌ನಲ್ಲಿಯೂ ವೀಕ್ಷಿಸಲು ಸಾಧ್ಯವಾಗಿದ್ದರಿಂದ ನಿರಂತರ ಇಲ್ಲಿ ನಿಗಾ ಇಡಲು ಸಾಧ್ಯವಾಗಿದೆ ಎಂದು ಪಿಎಸ್‌ಐ ಸಂಪತ್ತ ಆನಿಕಿವಿ ಹೇಳಿದರು.


ನಾಲ್ಕರ ಕ್ರಾಸ್ ದಿನದಿಂದ ದಿನಕ್ಕೆ ಹೆಚ್ಚು ಜನ ದಟ್ಟಣೆಯ ಪ್ರದೇಶವಾಗಿದೆ. ಅಂಗಡಿ ಮುಂಗಟ್ಟುಗಳು ಕೂಡ ಹೆಚ್ಚುತ್ತಿವೆ. ಇಲ್ಲಿ ಬೆಳಕಿಗಾಗಿ ಇನ್ನಷ್ಟು ದೀಪಗಳ ಅಗತ್ಯವಿದೆ ಎಂದು ತಿಳಿದಿದೆ. ಕೂಡಲೇ ಸುರಕ್ಷತೆಗಾಗಿ ದೀಪಗಳನ್ನು ನಮ್ಮ ಗ್ರಾಮ ಪಂಚಾಯತ್‌ನಿಂದ ಅಳವಡಿಸುತ್ತೇವೆ ಎಂದು ಗೆಜ್ಜಿಹಳ್ಳಿ ಗ್ರಾಪಂ ಪಿಡಿಒ ಬಂಗಾರೆಪ್ಪ ಕನ್ನಕ್ಕನವರ ಗೆಜ್ಜಿಹಳ್ಳಿ ಗ್ರಾಪಂ