ಕೊಲ್ಲಾಪುರದಮ್ಮ ಸೇರಿ ಐದು ದೇವಗಣಗಳ ಸಿಡಿ ಮಹೋತ್ಸವ

| Published : May 20 2024, 01:38 AM IST

ಸಾರಾಂಶ

ಚಿಕ್ಕಮಗಳೂರಿನ ಕೊಲ್ಲಾಪುರದಮ್ಮ ದೇವಾಲಯದ ಆವರಣದಲ್ಲಿ ನಡೆದ ಸಿಡಿ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತ ಸಮೂಹ.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ದೋಣಿ ಖಣದ ಜಾತ್ರೆಯ ಪ್ರಯುಕ್ತ ಶ್ರೀ ಕೊಲ್ಲಾಪುರದಮ್ಮ ಸೇರಿ ಐದು ದೇವಗಣಗಳ ಸಿಡಿ ಮಹೋತ್ಸವ ದೇವಾಲಯದ ಆವರಣದಲ್ಲಿ ಶ್ರದ್ಧಾಭಕ್ತಿಯೊಂದಿಗೆ ನೆರವೇರಿತು.

ದೋಣಿಖಣ, ಕೋಟೆ, ಮೂರುಮನೆಹಳ್ಳಿ, ಹೊಸಮನೆ ಮತ್ತು ಶಂಕರಪುರದ ಗ್ರಾಮಸ್ಥರು ಕೊಲ್ಲಾಪುರದಮ್ಮನವರ ದೇವಾಲಯದ ಆವರಣದಲ್ಲಿ ಜಮಾಯಿಸಿದರು. ಸಿಡಿ ಕಂಬದ ಪೂಜೆ ನೆರವೇರಿತು. ಎತ್ತು ಮತ್ತು ಗಾಡಿಗಳನ್ನು ಸುಂದರವಾಗಿ ಅಲಂಕರಿಸಿ ತಂದು ತೀರ್ಥ ಪ್ರೋಕ್ಷಣೆ ಮಾಡಿಸಲಾಯಿತು.

ಮುಂಭಾಗದ ಹೆದ್ದಾರಿಯಲ್ಲಿ ಎತ್ತಿನಗಾಡಿಗಳ ಓಟದ ನಿಮಿತ್ತ ಅಂದಚಂದದ ಎತ್ತು ಹೋರಿಗಳನ್ನು ಹುರಿದುಂಬಿಸಿ ಚಾಟಿಬೀಸಿ ಕೆರಳಿಸಿ ಓಡಿಸಲಾಯಿತು. ಮೂಗುದಾರ ಹಿಡಿದ ಯುವಕರ ಪಡೆ ಅವುಗಳ ಹಿಂದೆಯೆ ಓಡಿ ನಿಯಂತ್ರಿಸಲು ಹರ ಸಾಹಸ ಪಡುತ್ತಿದ್ದರು. ಒಂದೆರಡು ಗಂಟೆ ಜನಜಂಗುಳಿ ವಿಪರೀತವಾಗಿ ಸಾರಿಗೆ ಬಸ್ಸುಗಳೂ ಸೇರಿ ವಾಹನ ಸಂಚಾರ ಅಸ್ತವ್ಯಸ್ತವಾಯಿತು.

ಇಳಿಹೊತ್ತು ಜಾರುತ್ತಿದ್ದಂತೆ ಶ್ರೀಕೊಲ್ಲಾಪುರದಮ್ಮ, ಮುತ್ತಿನಮ್ಮ, ಚಿಕ್ಕಮ್ಮ, ಉಗ್ರಾಣದಮ್ಮ, ಭೂತಪ್ಪ ದೇವರಗಳ ಪೂಜೆ ನಂತರ ಗಣಮಕ್ಕಳ ಮೇಲೆ ಆವಾಹನೆಯಾಯಿತು. ಮಂಗಳವಾದ್ಯ ಮೊಳಗಿದಂತೆ ಸರಪಳಿ, ತ್ರಿಶೂಲ ಸಿಕ್ಕಿಸಲಾಯಿತು. ಹಣೆಗೆ ಕುಂಕುಮಹಚ್ಚಿ ಹೂವಿನ ಹಾರ ಹಾಕಿ ಗಣಮಕ್ಕಳಿಗೆ ಪೂಜೆ ಸಲ್ಲಿಸಲಾಯಿತು. ದೇವರೊಂದಿಗೆ ಗಣಮಕ್ಕಳು ಸುತ್ತಮುತ್ತಲಿನ ಜನವಸತಿ ಪ್ರದೇಶದಲ್ಲಿ ಮೆರವಣಿಗೆ ಸಾಗಿ ಪೂಜೆ ಸ್ವೀಕರಿಸಿ ಆಶೀರ್ವದಿಸಿ ದೇವಸ್ಥಾನಕ್ಕೆ ಹಿಂತಿರುಗುವ ವೇಳೆಗೆ ಕತ್ತಲು ಆವರಿಸಿತ್ತು.

ಸಾವಿರಾರು ಭಕ್ತರು ದೇವಸ್ಥಾನ ಆವರಣದಲ್ಲಿ ಜಮಾಯಿಸಿ ಸಿಡಿಉತ್ಸವ ಕಣ್ತುಂಬಿಕೊಳ್ಳಲು ಗಂಟೆಗಟ್ಟಲೆ ಕಾಯ್ದು ನಿಂತಿದ್ದರು. ಸುತ್ತಲ ಎತ್ತರದ ಕಟ್ಟಡಗಳು ಹಾಗೂ ಮರಗಳಮೇಲೂ ಹತ್ತಿನಿಂತು ವೀಕ್ಷಿಸಿದರು. 7.30ರ ವೇಳೆಗೆ ದೇವಾಲಯದ ಒಳಗೆ ಗಣಮಕ್ಕಳ ಪೂಜೆ ನಂತರ ಆವರಣದಲ್ಲಿ ದೇವಿಗಣಗಳ ನರ್ತನ ಜನರ ಹರ್ಷೋದ್ಘಾರಗಳ ನಡುವೆ ನಡೆಯಿತು.

ಶಾಸಕ ಎಚ್.ಡಿ.ತಮ್ಮಯ್ಯ ದೇವಿಗೆ ಪೂಜೆಸಲ್ಲಿಸಿದರು. ಸಿಡಿ ಕಂಬದ ಪೂಜೆ, ಬಲಿ ಪೂಜೆ ನಡೆದ ನಂತರ ಶ್ರೀಕೊಲ್ಲಾಪುರದಮ್ಮ ದೇವಿಗಣವನ್ನು ಮೊದಲು ಸಿಡಿ ಕಂಬಕ್ಕೆ ಹೊಸ ವಸ್ತ್ರದಿಂದ ಬಿಗಿದು ಕಟ್ಟಿ ಮೂರು ಸುತ್ತು ತಿರುಗಿಸಲಾಯಿತು. ಉಗ್ರಾಣದಮ್ಮ, ಚಿಕ್ಕಮ್ಮ, ಗುಂಡಮ್ಮ ನಂತರ ಭೂತಪ್ಪದೇವ ಗಣಗಳನ್ನು ಸಿಡಿಕಂಬಕ್ಕೆ ಕಟ್ಟಿ ಆಡಿಸಲಾಯಿತು. ಭಕ್ತರ ಜಯಘೋಷದ ನಡುವೆ ಗಣಮಕ್ಕಳು ಮೇಲಿನಿಂದ ಹೂವು ಪತ್ರೆ ಪ್ರಸಾದರೂಪದಲ್ಲಿ ಎಸೆಯುತ್ತಿದ್ದನ್ನು ಭಕ್ತಿಭಾವದಿಂದ ಕಣ್ಣಿಗೊತ್ತಿಕೊಂಡು ಜನರು ಸ್ವೀಕರಿಸಿದರು.

ಬಾನಂಗಳದಲ್ಲಿ ರಂಗು ರಂಗಿನ ಸಿಡಿ ಮದ್ದುಗಳ ಚಿತ್ತಾರ ಆಕರ್ಷಕವಾಗಿತ್ತು. ಸಿಡಿ ಮುಗಿದ ನಂತರ ಪುಟಾಣಿ ಮಕ್ಕಳನ್ನು ಸಿಡಿ ಕಂಬಕ್ಕೆ ಮುಟ್ಟಿಸಿ ದೇವಿ ಗಣಗಳಿಂದ ಆಶೀರ್ವಾದ ಪಡೆಯುವುದರೊಂದಿಗೆ ಪ್ರಸಕ್ತ ಸಾಲಿನ ಸಿಡಿ ಉತ್ಸವ ಸಂಪನ್ನಗೊಂಡಿತು.

ಸೇವಾ ಸಮಿತಿಯ ಪ್ರಮುಖರಾದ ಕೆ.ರಾಮಣ್ಣ, ಈಶಣ್ಣ, ಮಧು, ರಂಗನಾಥ್, ಸೋಮಣ್ಣ, ಶಂಕರ್, ನಾಗೇಶ್, ಅಪ್ಸರ್‌ ಅಹಮ್ಮದ್ ಸೇರಿದಂತೆ ನೂರಾರು ಯುವಕರು ಸಿಡಿ ಉತ್ಸವದ ಮುಂಚೂಣಿಯಲ್ಲಿದ್ದರು.