ಸಾರಾಂಶ
ಇತ್ತೀಚೆಗೆ ಗರ್ಭಿಣಿಯರಲ್ಲಿ ಮತ್ತು ಕಿಶೋರಿಯರಲ್ಲಿ ರಕ್ತ ಹೀನತೆ ಹೆಚ್ಚಾಗುತ್ತಿದ್ದು, ಅದನ್ನು ತಡೆಗಟ್ಟಬೇಕಾದರೆ ಕಬ್ಬಿಣಾಂಶದ ಮಾತ್ರೆಗಳನ್ನು ಮತ್ತು ಪೌಷ್ಠಿಕ ಆಹಾರವನ್ನು ನಿಯಮಿತವಾಗಿ ಸೇವಿಸಬೇಕು ಎಂದು ಸಿಡಿಪಿಒ ಮುನಿರಾಜು ಹೇಳಿದರು.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಜನರು ಒತ್ತಡದ ದೈನಂದಿನ ಜೀವನದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ನಿತ್ಯ ಸಮತೋಲಿತ ಆಹಾರ ಸೇವಿಸುವುದು ಮತ್ತು ವ್ಯಾಯಾಮ ಮಾಡುವುದು ಅನಿವಾರ್ಯ ಎಂದು ಸಿಡಿಪಿಒ ಮುನಿರಾಜು ಹೇಳಿದರು.ತಾಲ್ಲೂಕಿನ ಯಳೇಸಂದ್ರ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯಿತಿ ಆರೋಗ್ಯ ಅಭಿಯಾನದ ಕಾರ್ಯಕ್ರಮದಲ್ಲಿ ಮಾತನಾಡಿ, ಇತ್ತೀಚೆಗೆ ಗರ್ಭಿಣಿಯರಲ್ಲಿ ಮತ್ತು ಕಿಶೋರಿಯರಲ್ಲಿ ರಕ್ತ ಹೀನತೆ ಹೆಚ್ಚಾಗುತ್ತಿದ್ದು, ಅದನ್ನು ತಡೆಗಟ್ಟಬೇಕಾದರೆ ಕಬ್ಬಿಣಾಂಶದ ಮಾತ್ರೆಗಳನ್ನು ಮತ್ತು ಪೌಷ್ಠಿಕ ಆಹಾರವನ್ನು ನಿಯಮಿತವಾಗಿ ಸೇವಿಸಬೇಕು. ಅಪೌಷ್ಟಿಕತೆ ಬಂದಾಗ ರಕ್ತಹೀನತೆ ಹೆಚ್ಚಾಗುವುದು ಸಾಮಾನ್ಯವಾಗಿದ್ದು, ಇದರಿಂದ ಚರ್ಮ ಸುಕ್ಕುಕಟ್ಟುವುದು ಮತ್ತು ಆಯಾಸ ಹೆಚ್ಚಾಗುತ್ತದೆ. ಜೊತೆಗೆ ಬೇರೆ ಬೇರೆ ರೋಗಗಳು ಕಂಡುಬರುತ್ತದೆ. ಇದನ್ನು ಹೋಗಲಾಡಿಸಲು ಸೊಪ್ಪು ತರಕಾರಿಗಳು, ಹಣ್ಣುಗಳು, ಬೇಳೆ ಕಾಳುಗಳು ಹಾಲಿನ ಉತ್ಪನ್ನಗಳು ಮತ್ತು ಅಯೋಡಿನ್ ಅನ್ನು ಸಮಪ್ರಮಾಣದಲ್ಲಿ ಸೇವನೆ ಮಾಡಬೇಕು ಎಂದರು.
ಗೃಹ ಆರೋಗ್ಯದ ಯೋಜನೆಯ ಮೂಲಕ ಕೋಲಾರ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿದ್ದು, ಇದರ ಮೂಲಕ 30 ವರ್ಷ ಮೇಲ್ಪಟ್ಟವರಿಗೆ ಮನೆ ಬಾಗಿಲಿಗೆ ಬಂದು ಬಿಪಿ ಮತ್ತು ಶುಗರ್ ಪರೀಕ್ಷೆಯನ್ನು ನಡೆಸುತ್ತಾರೆ. ಯಾರಿಗಾದರೂ ಬಿಪಿ ಮತ್ತು ಶುಗರ್ ಕಂಡುಬಂದರೆ ಚಿಕಿತ್ಸೆಯನ್ನು ಮನೆ ಬಾಗಿಲಿಗೇ ತಲುಪಿಸುತ್ತಾರೆ ಎಂದರು.ಈ ಸಂದರ್ಭದಲ್ಲಿ ಗ್ರಾಪಂ ಕಾರ್ಯದರ್ಶಿ ನಾರಾಯಣಸ್ವಾಮಿ, ಕರವಸೂಲಿಗಾರರಾದ ಪ್ರೇಮ್ ಕುಮಾರ್, ಗಿರಿ ಮತ್ತು ಗ್ರಾಮ ಆರೋಗ್ಯ ಸಮಿತಿಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅನಿತಾ ಸದಸ್ಯರು ಹಾಜರಿದ್ದರು.