ಸಾರಾಂಶ
ಸೊರಬ: ಆಡಂಬರಕ್ಕೆ ಆಸ್ಪದ ನೀಡದೇ ಸಾಮಾಜಿಕ ಚಿಂತನೆಯೊಂದಿಗೆ ಅರ್ಥಪೂರ್ಣವಾಗಿ ಆಚರಿಸಿಕೊಂಡಾಗ ಜನ್ಮದಿನಗಳಿಗೆ ಅರ್ಥ ಮೂಡುತ್ತದೆ. ಇದರಿಂದ ಸಮಾಜ ಗುರ್ತಿಸಿ, ಗೌರವಿಸುತ್ತದೆ ಎಂದು ಜಡೆ ಸಂಸ್ಥಾನ ಮಠದ ಡಾ.ಮಹಾಂತ ಸ್ವಾಮಿಗಳು ನುಡಿದರು.
ಗುರುವಾರ ಪಟ್ಟಣದ ಹೊಸಪೇಟೆ ಬಡಾವಣೆಯ ನವಚೇತನ ಬುದ್ಧಿಮಾಂದ್ಯ ಮಕ್ಕಳ ವಸತಿಯುತ ಶಾಲೆಯಲ್ಲಿ ಶಿವಮೊಗ್ಗದ ರೆಡ್‌ಕ್ರಾಸ್ ಸಂಜೀವಿನಿ ರಕ್ತನಿಧಿ ಕೇಂದ್ರದಿಂದ ದಂತ ವೈದ್ಯ, ಸಮಾಜ ಸೇವಕ ಡಾ.ಜ್ಞಾನೇಶ್ ಅವರ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಮನುಷ್ಯನ ಬದುಕಿನ ಸಾರ್ಥಕತೆಗೆ ಸಮಾಜಸೇವೆ ಪೂರಕವಾಗಿದ್ದು, ಇದು ಮಾನಸಿಕ ಸತ್ವತೆಗೆ ಕಾರಣವಾಗುತ್ತದೆ ಎಂದರು.ಮಾನವ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಂಡು ರಕ್ತದಾನ ಮಾಡುವುದು ಶ್ರೇಷ್ಠವಾಗಿದೆ. ಮನುಷ್ಯ ತನ್ನ ಪಂಚೇಂದ್ರಿಯಗಳನ್ನು ಸರಿಯಾಗಿಟ್ಟುಕೊಂಡು ನಡೆದಾಗ ಸಮಾಜದಲ್ಲಿ ಘನತೆಯಿಂದ ಬದುಕಲು ಸಾಧ್ಯ ಎಂದರು.
ಸಮಾಜ ಸೇವಕ ಡಾ.ಎಚ್.ಇ.ಜ್ಞಾನೇಶ್ ಮಾತನಾಡಿ, ಬುದ್ಧಿಮಾಂದ್ಯ ಮಕ್ಕಳು ದೇವರಿಗೆ ಸರಿಸಮಾನರಾಗಿದ್ದಾರೆ. ಅಂತಹ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡರೆ ಪುಣ್ಯ ಲಭಿಸುತ್ತದೆ ಎಂದ ಅವರು, ಸೇವೆ ಎನ್ನುವುದು ಸಾಂಕ್ರಾಮಿಕವಾಗಬೇಕು. ಸಾಮಾಜಿಕ ಕಾರ್ಯಸಾಧನೆಗೆ ಪ್ರೇರಣೆಯಾಗುತ್ತದೆ. ಈ ಮೂಲಕ ಸಮೃದ್ಧ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದರು.ಅನ್ನದಾನ ಶ್ರೇಷ್ಠವಾಗಿದ್ದರೂ ರಕ್ತದಾನ ಪವಿತ್ರವಾಗಿದೆ. ಇಂತಹ ಕಾರ್ಯಕ್ರಮಗಳು ಸಮಾಜಮುಖಿಯಾದಾಗ ಮಾತ್ರ ಸಾರ್ಥಕತೆ ದೊರೆಯುತ್ತದೆ. ಆದ್ದರಿಂದ ಯುವಜನತೆ ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗವಹಿಸಿ ಕೈಜೋಡಿಸಬೇಕು. ೧ ಯೂನಿಟ್ ರಕ್ತದಿಂದ ೪ ಜೀವಗಳು ಉಳಿಯುತ್ತವೆ ಎಂದು ತಿಳಿಸಿದರು.
ಇದೇ ವೇಳೆ ರಕ್ತದಾನ ಶಿಬಿರ ನಡೆಯಿತು. ೩೭ ಬಾರಿ ರಕ್ತದಾನ ನೀಡಿದ ವಕೀಲ, ಪತ್ರಕರ್ತ ದಿನಕರ ಭಟ್ ಭಾವೆ, ೨೪ ಬಾರಿ ರಕ್ತದಾನ ಮಾಡಿದ ಕೆ.ಪರಶುರಾಮ, ರಾಘವೇಂದ್ರ ಅವರನ್ನು ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಸಮಾಜ ಚಿಂತಕ ಟಿ.ರಾಜಪ್ಪ ಮಾಸ್ತರ್, ನವಲಗುಂದ ಮಠದ ಬಸವಲಿಂಗ ಸ್ವಾಮೀಜಿ, ಷಡಾಕ್ಷರಿ ದೇವರು, ಜಡೆ ಹಿರೇಮಠದ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಜಿಪಂ ಉಪಾಧ್ಯಕ್ಷ ಪಾಣಿ ರಾಜಪ್ಪ, ನವಚೇತನ ಬುದ್ಧಿಮಾಂದ್ಯ ಮಕ್ಕಳ ವಸತಿಯುತ ಶಾಳೆಯ ಕಾರ್ಯದರ್ಶಿ ರಾಮಪ್ಪ, ಮುಖ್ಯ ಶಿಕ್ಷಕ ರವೀಂದ್ರ, ಪುಟ್ಟರಾಜು, ವೇಣುಗೋಪಾಲ್, ಬಸವಣ್ಯಪ್ಪ, ಉದ್ಯಮಿ ಗುತ್ತಿ ನಾಗರಾಜ್, ತಾರಕೇಶ್, ಶಶಿಗೌಡ್ರು, ಈಶ್ವರಪ್ಪ ಚನ್ನಪಟ್ಟಣ ಮೊದಲಾದವರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))