ಸಾರಾಂಶ
ಹಬ್ಬದ ಆಚರಣೆಯ ಪ್ರಯುಕ್ತ ಮೆರವಣಿಗೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿ. ವಾಹನಗಳ ಓಡಾಟ ನಿಷೇಧಿಸಿ ಮೆರವಣಿಗೆಗೆ ಅನುಕೂಲ ಮಾಡಿಕೊಡಲಾಗುವುದು
ಹಿರಿಯೂರು: ಬಕ್ರೀದ್ ಆಚರಣೆಯಲ್ಲಿ ಎಲ್ಲರೂ ಶಾಂತಿ ಕಾಪಾಡಿಕೊಳ್ಳಬೇಕೆಂದು ಡಿವೈಎಸ್‌ಪಿ ಚೈತ್ರಾ ಹೇಳಿದರು.
ನಗರಠಾಣೆ ಆವರಣದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ನಡೆದ ಶಾಂತಿಸಭೆ ಉದ್ದೇಶಿಸಿ ಮಾತನಾಡಿದ ಅವರು, ಹಬ್ಬದ ಸಡಗರದ ಜೊತೆಗೆ ಸಾಮರಸ್ಯವೂ ವೃದ್ಧಿಸಬೇಕು. ಕಳೆದ ವರ್ಷದಂತಹ ಅಹಿತಕರ ಘಟನೆ ಮರುಕಳಿಸಬಾರದು. ಗೋಹತ್ಯೆ ನಿಷೇಧ ಕಾಯಿದೆ ಜಾರಿಯಲ್ಲಿದ್ದು ಕಾಯಿದೆ ನಿಯಮಗಳು ಉಲ್ಲಂಘನೆಯಾಗಕೂಡದು. ಯಾರೂ ಯಾವ ವಿಷಯಕ್ಕೂ ಪ್ರಚೋದನೆಗೆ ಒಳಗಾಗಬೇಡಿ. ಅಹಿತಕರ ಘಟನೆ ಸುಳಿವು ಸಿಕ್ಕಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವಂತೆ ತಿಳಿಸಿದರು.ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ಮಾತನಾಡಿ, ಹಬ್ಬದ ಆಚರಣೆಯ ಪ್ರಯುಕ್ತ ಮೆರವಣಿಗೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿ. ವಾಹನಗಳ ಓಡಾಟ ನಿಷೇಧಿಸಿ ಮೆರವಣಿಗೆಗೆ ಅನುಕೂಲ ಮಾಡಿಕೊಡಲಾಗುವುದು ಅಲ್ಲದೆ ಸಾರ್ವಜನಿಕರ ಓಡಾಟಕ್ಕೆ ಯಾವುದೇ ತೊಂದರೆಯಾಗದಂತೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು.
ಮೆರವಣಿಗೆಯ ಸಂದರ್ಭದಲ್ಲಿ ಮುಖಂಡರು ಗುಂಪುಗಳ ನಾಯಕತ್ವ ವಹಿಸಿ ಶಿಸ್ತುಬದ್ಧ ನಿರ್ವಹಣೆ ಮಾಡಬೇಕು. ಅನಾವಶ್ಯಕ ಘೋಷಣೆಗಳನ್ನು ಯಾರೂ ಕೂಗಬಾರದು. ನಿಯಮ ಮೀರಿ ವರ್ತಿಸಿದವರಿಗೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು. ಈ ವೇಳೆ ಪಿಎಸ್ಐ ಮಂಜುನಾಥ್, ಶಶಿಕಲಾ, ನಗರಸಭೆ ಸದಸ್ಯ ಜಬಿವುಲ್ಲಾ, ಮಾಜಿ ಸದಸ್ಯ ಕೇಶವಮೂರ್ತಿ, ಮುಖಂಡರಾದ ಅಸ್ಗರ್ ಅಹಮದ್, ಗೋವಿಂದರಾಜ್, ವಿಶ್ವ, ನವೀನ್, ದಾದಾಪೀರ್, ಬಾಟ್ಲಿ ಆಸೀಫ್, ಜಾಕೀರ್, ಸುಹೇಲ್, ಮನ್ಸೂರ್, ಅಶ್ರಫ್ ಸಿಬ್ಬಂದಿಗಳಾದ ರಾಘು, ರವಿ ಮುಂತಾದವರು ಇದ್ದರು.