ಚೌತಿ, ಈದ್ ಮಿಲಾದ್ ಹಬ್ಬಗಳಲ್ಲಿ ಸೌಹಾರ್ದ ಮೆರೆಯಿರಿ

| Published : Aug 21 2025, 01:00 AM IST

ಸಾರಾಂಶ

ಸಾರ್ವಜನಿಕ ಗಣಪತಿ ಪ್ರತಿಷ್ಠಾಪಿಸುವ ಸಂಘಟನೆಗಳವರ ಮೇಲೆ ಹೆಚ್ಚಿನ ಹೊಣೆಗಾರಿಕೆ ಇದೆ. ಯಾವುದೇ ಸಮಸ್ಯೆಗಳು ಆಗದಂತೆ ಶಾಂತಿ ಪಾಲನೆ ಮಾಡುವುದಕ್ಕೆ ಆದ್ಯತೆ ನೀಡಬೇಕು. ಈದ್‌ ಮಿಲಾದ್‌ ಆಚರಣೆಯಲ್ಲೂ ಶಾಂತಿ ಸುವ್ಯವಸ್ಥೆ ಪಾಲಿಸಬೇಕು ಎಂದು ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಹೇಳಿದ್ದಾರೆ.

- ಜಿಲ್ಲೆಯ ಗಣೇಶೋತ್ಸವ ಸಮಿತಿ ಸದಸ್ಯರಿಗೆ ಎಸ್‌ಪಿ ಉಮಾ ಪ್ರಶಾಂತ ಸಲಹೆ

- - -

ಕನ್ನಡಪ್ರಭ ವಾರ್ತೆ ಹರಿಹರ

ಸಾರ್ವಜನಿಕ ಗಣಪತಿ ಪ್ರತಿಷ್ಠಾಪಿಸುವ ಸಂಘಟನೆಗಳವರ ಮೇಲೆ ಹೆಚ್ಚಿನ ಹೊಣೆಗಾರಿಕೆ ಇದೆ. ಯಾವುದೇ ಸಮಸ್ಯೆಗಳು ಆಗದಂತೆ ಶಾಂತಿ ಪಾಲನೆ ಮಾಡುವುದಕ್ಕೆ ಆದ್ಯತೆ ನೀಡಬೇಕು. ಈದ್‌ ಮಿಲಾದ್‌ ಆಚರಣೆಯಲ್ಲೂ ಶಾಂತಿ ಸುವ್ಯವಸ್ಥೆ ಪಾಲಿಸಬೇಕು ಎಂದು ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಹೇಳಿದರು.

ನಗರದ ಕಿರ್ಲೋಸ್ಕರ್ ಸಭಾಂಗಣದಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್, ಗ್ರಾಮಾಂತರ ಉಪ ವಿಭಾಗ, ಹರಿಹರ ನಗರ ಪೊಲೀಸ್ ಠಾಣೆ ವತಿಯಿಂದ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗಣಪತಿ ಪೆಂಡಾಲ್‌ನಲ್ಲಿ ವಿದ್ಯುತ್ ದೀಪಾಲಂಕಾರ, ಗಣೇಶ ಸ್ಥಾಪನೆ, ಆಭರಣಗಳು, ವಿಸರ್ಜನಾ ವಾಹನ ಮುಂತಾದವುಗಳನ್ನು ಸುರಕ್ಷಿತವಾಗಿ ಕಾಯ್ದುಕೊಳ್ಳಬೇಕು. ಯಾವುದೇ ತೊಂದರೆ ಸೃಷ್ಟಿಯಾದಲ್ಲಿ ಸಮಿತಿಯವರೇ ಹೊಣೆಗಾರರಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮನೋರಂಜನಾ ಕಾರ್ಯಕ್ರಮಗಳು ನಡೆಯುವಾಗ ಅಥವಾ ಹೆಚ್ಚಿನ ಜನಸಂದಣಿ ಸೇರಿದಾಗ ಸಂಘಟಕರು ಸ್ವಯಂ ಸೇವಕರನ್ನು ನೇಮಿಸಬೇಕು ಎಂದು ತಿಳಿಸಿದರು.

ಪಿಒಪಿ ಮೂರ್ತಿಗಳನ್ನು ವಶಕ್ಕೆ ಪಡೆಯಲಾಗುವುದು. ಪರಿಸರಸ್ನೇಹಿ ಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗುವುದು. ಪ್ರತಿ ಸಮಿತಿಯವರೂ ಕಾರ್ಯಕ್ರಮಗಳು, ಮೆರವಣಿಗೆ ಮಾರ್ಗ, ಮಂಟಪದಲ್ಲಿ ಸಣ್ಣಪುಟ್ಟ ಜಗಳಕ್ಕೆ ಆಸ್ಪದ ನೀಡಬಾರದು. ಮದ್ಯಪಾನ ಮಾಡಿದವರ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಬಂಟಿಗ್ಸ್, ಬ್ಯಾನರ್, ಫ್ಲೆಕ್ಸ್‌ ಬೋರ್ಡ್‌ ಹಾಕಲು ಸಂಬಂಧಪಟ್ಟ ಇಲಾಖೆಯಿಂದ ಪೂರ್ವಾನುಮತಿ ಪಡೆಯಬೇಕು ಎಂದ ಅವರು, ಸುಪ್ರಿಂ ಕೋರ್ಟ್ ಆದೇಶ ಹಿನ್ನೆಲೆ ಡಿಜೆ ಸಂಗೀತ ಹಾಕುವುದನ್ನು ನಿಷೇಧಿಸಲಾಗಿದೆ. ಡಿಜೆಗೆ ಅನುಮತಿ ನೀಡುವುದಿಲ್ಲ ಎಂದು ಕಾನೂನುಗಳ ತಿಳಿಸಿ, ಪಾಲಿಸಲು ಸೂಚಿಸಿದರು.

ಕವಿತಾ ಮಾರುತಿ ಬೇಡರ್, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಪರಮೇಶ್ವರ ಹೆಗಡೆ, ಪೌರಾಯುಕ್ತ ನಾಗಣ್ಣ, ಗ್ರೇಡ್-2 ತಹಸೀಲ್ದಾರ್ ಪುಷ್ಟಲತಾ, ನಗರ ಇನ್‌ಸ್ಪೆಕ್ಟರ್ ಆರ್.ಎಫ್. ದೇಸಾಯಿ, ಗ್ರಾಮಾಂತರ ಇನ್‌ಸ್ಪೆಕ್ಟರ್ ಸುರೇಶ್ ಸಗರಿ ಇತರರು ಉಪಸ್ಥಿತರಿದ್ದರು.

- - -

(ಕೋಟ್‌) ಉತ್ಸವಗಳಲ್ಲಿ ಬಹುತೇಕರು ಡಿಜೆ ಸಂಗೀತ ಬಳಸುವುದು ಸಾಮಾನ್ಯ. ಒಂದೇ ಬಾರಿಗೆ ಈ ವ್ಯವಸ್ಥೆ ನಿಲ್ಲಿಸುವುದು ಕಷ್ಟ. ಆದರೆ, ಡಿಜೆ ಸಂಗೀತದ ಶಬ್ದವನ್ನು ಕಡಿಮೆಗೊಳಿಸಿ ಬಳಸಲು ಅನುಮತಿ ನೀಡಬೇಕು. ರಾಜ್ಯದ ಎಲ್ಲ ಕಡೆ ಡಿಜೆ ಬಳಕೆ ನಿರ್ಬಂಧಿಸಿದರೆ ಇಲ್ಲಿಯೂ ನಿರ್ಬಂಧಿಸುವುದು ಸೂಕ್ತ.

- ಬಿ.ಪಿ.ಹರೀಶ್, ಶಾಸಕ, ಹರಿಹರ ಕ್ಷೇತ್ರ.

- - -

-16ಎಚ್‍ಆರ್‍ಆರ್06:

ಶಾಂತಿಸಭೆಯನ್ನು ಜಿಲ್ಲಾ ಎಸ್‍ಪಿ ಉಮಾ ಪ್ರಶಾಂತ ಉದ್ಘಾಟಿಸಿದರು.