ಪ್ರಜಾಪ್ರಭುತ್ವ ದಿನವನ್ನು ಹಬ್ಬದಂತೆ ಆಚರಿಸಿ: ಮೀನಾ ನಾಗರಾಜ್‌

| Published : Sep 05 2024, 12:39 AM IST

ಪ್ರಜಾಪ್ರಭುತ್ವ ದಿನವನ್ನು ಹಬ್ಬದಂತೆ ಆಚರಿಸಿ: ಮೀನಾ ನಾಗರಾಜ್‌
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ದೇಶದ ಸಾರ್ವಭೌಮತ್ವ ಹಿರಿಮೆಯನ್ನು ಸ್ಮರಿಸುವ ಸದುದ್ದೇಶದಿಂದಲೇ ಸೆ. 15 ರಂದು ಅಂತಾರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನ ಆಚರಿಸಲಾಗುತ್ತದೆ. ಜಿಲ್ಲೆಯಲ್ಲಿ ಸಾರ್ವಜನಿಕರು ಇದನ್ನು ಹಬ್ಬದ ರೀತಿ ಆಚರಿಸಿ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ನಮ್ಮ ದೇಶದ ಸಾರ್ವಭೌಮತ್ವ ಹಿರಿಮೆಯನ್ನು ಸ್ಮರಿಸುವ ಸದುದ್ದೇಶದಿಂದಲೇ ಸೆ. 15 ರಂದು ಅಂತಾರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನ ಆಚರಿಸಲಾಗುತ್ತದೆ. ಜಿಲ್ಲೆಯಲ್ಲಿ ಸಾರ್ವಜನಿಕರು ಇದನ್ನು ಹಬ್ಬದ ರೀತಿ ಆಚರಿಸಿ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು.ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸುವ ಕುರಿತು ಜಿಲ್ಲಾ ಪಂಚಾಯ್ತಿಯಲ್ಲಿ ಬುಧವಾರ ನಡೆದ 2ನೇ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೆ. 15 ರಂದು ಬೀದರ್‌ನಿಂದ ಚಾಮರಾಜನಗರದವರೆಗೆ ಮಾನವ ಸರಪಳಿ ನಿರ್ಮಿಸಿ ಪ್ರಜಾಪ್ರಭುತ್ವದ ಮಹತ್ವವನ್ನು ದಾರಿಯುದ್ದಕ್ಕೂ ಪಸರಿಸುವ ಕಾರ್ಯಕ್ರಮ ಮಾಡಬೇಕಿದೆ ಎಂದರು.

ಇದರ ಅಂಗವಾಗಿ ಚಿಕ್ಕಮಗಳೂರು ತಾಲೂಕಿನ ಮಾಗಡಿ ಕೈ ಮರದಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ನಮ್ಮ ಜಿಲ್ಲೆಯಲ್ಲಿ 92 ಕಿ.ಮೀ. ಮಾನವ ಸರಪಳಿ ಹಾಗೂ ಸಂವಿಧಾನ ಬಗ್ಗೆ ತಿಳಿವಳಿಕೆ ಮೂಡಿಸುವುದು ಸೇರಿದಂತೆ ವಿವಿಧ ಕಾರ್ಯ ಕ್ರಮಗಳು ನಡೆಯಲಿವೆ. ಮಾಗಡಿ ಕೈಮರದಿಂದ ಎಐಟಿ ಸರ್ಕಲ್, ಸಖರಾಯಪಟ್ಟಣ, ಕಡೂರು-ಬೀರೂರು, ತರೀಕೆರೆ ಗಡಿ ಭಾಗವಾದ ಎಂ.ಸಿ. ಹಳ್ಳಿಯವರಿಗೂ ಈ ಕಾರ್ಯಕ್ರಮ ನಡೆಯಲಿದೆ ಎಂದರು.

ಪ್ರತಿ ಒಂದು ಕಿ.ಮೀ. ದೂರದಲ್ಲಿ ಆ ಭಾಗದ ಸ್ಥಳೀಯ ಶಾಲಾ ವಿದ್ಯಾರ್ಥಿಗಳು ಸಂಘ ಸಂಸ್ಥೆ ಪದಾಧಿಕಾರಿಗಳು ವಿವಿಧ ಸಂಘಟನೆಗಳು, ಸಮುದಾಯದ ಪ್ರಮುಖರು, ಮಠ ಮಾನ್ಯರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸ್ಥಳೀಯ ಜನ ಪ್ರತಿನಿಧಿ ಗಳು, ಸರ್ಕಾರಿ ಅಧಿಕಾರಿಗಳು, ಸಿಬ್ಭಂದಿ, ಗ್ರಾಮಗಳ ಜನತೆ, ಸ್ತ್ರೀಶಕ್ತಿ, ವಿವಿಧ ಸಂಘಗಳ ಪದಾಧಿಕಾರಿಗಳು ಭಾಗವಹಿಸಿ ಮಾನವ ಸರಪಳಿ ನಿರ್ಮಿಸಿ ಸಂವಿಧಾನದ ಮಹತ್ವ ಸಾರಬೇಕು ಎಂದು ಕರೆ ನೀಡಿದರು.

ಈ ಬೃಹತ್ ಕಾರ್ಯಕ್ರಮದಲ್ಲಿ ಜನರ ಸಹಭಾಗಿತ್ವ ಬಹಳ ಮುಖ್ಯ. ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವವನ್ನು ನಾವು ಹೊಂದಿದ್ದೇವೆ. ಯುವ ಪೀಳಿಗೆಗೆ ಪ್ರಜಾಪ್ರಭುತ್ವದ ಮೌಲ್ಯಾನುಸಾರ ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ಜಾಗೃತಿ ಮೂಡಿಸುವುದು ಬಹಳ ಅವಶ್ಯಕ. ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಸ್ವಯಂ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು.

ಸರ್ಕಾರಿ ಹಿರಿಯ ಅಧಿಕಾರಿಗಳಿಗೆ ಕಾರ್ಯಕ್ರಮ ಯಶಸ್ವಿಗೊಳಿಸುವ ಜವಾಬ್ದಾರಿ ವಹಿಸಲಾಗಿದ್ದು, ಆಯಾಯ ಗ್ರಾಪಂ ಅಭಿವೃದ್ಧಿ ಹಾಗೂ ತಾಲೂಕು ಅಧಿಕಾರಿಗಳಿಗೆ ನಿಗಾ ವಹಿಸಲು ಉಸ್ತುವರಿವಹಿಸಲಾಗಿದೆ ಎಂದರು.ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳಾಗಿರುವಾಗ ಸ್ವಾತಂತ್ರ್ಯದ ಮಹತ್ವ ತಿಳಿಯುವುದು ಬಹಳ ಮುಖ್ಯ. ನಮ್ಮ ಸಂವಿಧಾನ ಭಾರತೀಯರ ಹೆಮ್ಮೆ.ಸ್ಥಳೀಯ ಗ್ರಾಮಸ್ಥರು ಹಸಿರು ತೋರಣಗಳಿಂದ ಸಿಂಗರಿಸಿ ತಮ್ಮ ಊರುಗಳಿಗೆ ಸ್ವಾಗತಿಸಿ ಬಿಳ್ಕೊಡುಗೆ ನೀಡಬೇಕು ಎಂದು ಹೇಳಿದರು.ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೀತೆಂದ್ರ ಕುಮಾರ್, ಉಪ ವಿಭಾಗಾಧಿಕಾರಿ ದಲ್ಜಿತ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಯೋಗೀಶ್ ಇದ್ದರು.