ಸಾರಾಂಶ
ಮಕ್ಕಳು ತಂದೆ ತಾಯಂದಿರಿಗೆ, ಗುರು-ಹಿರಿಯರಿಗೆ ಗೌರವ ಕೊಡುವುದನ್ನು ಕಲಿತುಕೊಳ್ಳಬೇಕು. ಇಂತಹ ಹಬ್ಬಗಳ ಆಚರಣೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ, ಧರ್ಮದ ಸಾರಾಂಶ ಅರಿತುಕೊಳ್ಳಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಹಿರೇಕೆರೂರು: ಯಾವುದೆ ಹಬ್ಬ-ಹರಿದಿನಗಳು ಬಂದಲ್ಲಿ ಎಲ್ಲ ಧರ್ಮದವರು ಸೇರಿಕೊಂಡು ಒಂದಾಗಿ ಸಾಮರಸ್ಯದಿಂದ, ಜಾತಿ, ಮತ, ಭೇದ ಮರೆತು ಆಚರಣೆ ಮಾಡಿದರೆ ಈ ದೇಶ ಸರ್ವ ಜನಾಂಗದ ಶಾಂತಿ ನೆಮ್ಮದಿಯ ತೋಟವಾಗಲು ಸಾಧ್ಯ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಗಜಾನನ ಯುವಕ ಸಮಿತಿ ವತಿಯಿಂದ ಗಣಪತಿ ಪ್ರತಿಷ್ಠಾಪನೆ ಸುವರ್ಣ ಮಹೋತ್ಸವದ ನಿಮಿತ್ತ ಏರ್ಪಡಿಸಿದ್ದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಾಲಗಂಗಾಧರ ತಿಲಕ ಅವರು ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಲು ಗಣೇಶನ ಹಬ್ಬವನ್ನು ಸಾರ್ವಜನಿಕವಾಗಿ ಆಚರಣೆ ತಂದರು. ಇದರ ಉದ್ದೇಶ ಜಾತಿ ಭೇದ ಮರೆತು ಎಲ್ಲರೂ ಒಂದಾಗಿ ಹೋರಾಟ ಮಾಡಿದರೆ ಮಾತ್ರ ಈ ದೇಶಕ್ಕೆ ಸ್ವಾತಂತ್ರ್ಯ ದೊರಕಬಹುದು ಎಂಬುದಾಗಿತ್ತು. ಮಕ್ಕಳು ತಂದೆ ತಾಯಂದಿರಿಗೆ, ಗುರು-ಹಿರಿಯರಿಗೆ ಗೌರವ ಕೊಡುವುದನ್ನು ಕಲಿತುಕೊಳ್ಳಬೇಕು. ಇಂತಹ ಹಬ್ಬಗಳ ಆಚರಣೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ, ಧರ್ಮದ ಸಾರಾಂಶ ಅರಿತುಕೊಳ್ಳಬೇಕು ಎಂದರು.ಮದ್ವೀರಶೈವ ಸಮಾಜದ ಉಪಾಧ್ಯಕ್ಷ, ನಿವೃತ್ತ ಶಿಕ್ಷಕ ಆರ್.ಬಿ. ಹಂಜಿ ಮಾತನಾಡಿ, ಯುವಶಕ್ತಿ ಮನಸ್ಸು ಮಾಡಿದರೆ ಅಸಾಧ್ಯವಾದುದನ್ನು ಸಾಧಿಸಿ ತೋರಿಸಬಲ್ಲದು ಎಂಬುದಕ್ಕೆ ಅತ್ಯಂತ ಕಡಿಮೆ ಅವಧಿಯಲ್ಲಿ ಇಲ್ಲಿನ ಸುವರ್ಣ ಮಹೋತ್ಸವ ಕಾರ್ಯಕ್ರಮ ಬಹು ಅಚ್ಚುಕಟ್ಟಾಗಿ, ಅರ್ಥಪೂರ್ಣವಾಗಿ ಆಚರಣೆಗೊಳ್ಳುತ್ತಿರುವುದು ಸಾಕ್ಷಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಕಂಠಾಧರ ಅಂಗಡಿ, ಪಪಂ ಸದಸ್ಯ ಮಹೇಂದ್ರ ಬಡಳ್ಳಿ, ತಹಸೀಲ್ದಾರ್ ಎಚ್. ಪ್ರಭಾಕರಗೌಡ, ಸಮಾಜ ಸೇವಕ ಜಿ.ಪಿ. ಪ್ರಕಾಶಗೌಡ ಮಾತನಾಡಿದರು.ಇದೆ ವೇಳೆ ಆಗಮಿಸಿದ್ದ ಗಣ್ಯರಿಗೆ, ಸುವರ್ಣ ಮಹೋತ್ಸವ ಸಮಿತಿಯಿಂದ ಗೌರವಿಸಲಾಯಿತು. ಆನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ನಡೆದವು.
ಪಪಂ ಅಧ್ಯಕ್ಷೆ ಸುಧಾ ಚಿಂದಿ, ಉಪಾಧ್ಯಕ್ಷ ರಾಜು ಕರಡಿ, ಸದಸ್ಯ ಬಸವರಾಜ ಕಟ್ಟಿಮನಿ, ಸುವರ್ಣ ಮಹೋತ್ಸವ ಸಮಿತಿಯ ಉಪಾಧ್ಯಕ್ಷ ರಾಜು ತಿಪ್ಪಶೆಟ್ಟಿ, ಮದ್ವೀರಶೈವ ಸಮಾಜದ ಕಾರ್ಯದರ್ಶಿ ಇಂದೂಧರ ಹಿರೇಮಠ ಹಾಗೂ ಸುವರ್ಣ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಇದ್ದರು.ಸುವರ್ಣ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ತಿಪ್ಪಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ನವೀನ್ ಮಳಗಿ ವಂದಿಸಿದರು.