ಹಬ್ಬಗಳನ್ನು ಶಾಂತಯುತವಾಗಿ ಆಚರಿಸಿ

| Published : Aug 21 2025, 01:00 AM IST

ಸಾರಾಂಶ

ಪೊಲೀಸ್ ಸಿಬ್ಬಂದಿಗಳನ್ನೊಳಗೊಂಡ ತಂಡವು ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಿ ಹಬ್ಬಗಳ ಸಮಯದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣ ಮಾಡುವ ಜತೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಇಲಾಖೆ ರೂಟ್ ಮಾರ್ಚ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗಿದೆ

ಶಿರಹಟ್ಟಿ: ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬವನ್ನು ಎಲ್ಲರೂ ಒಗ್ಗೂಡಿ ಶಾಂತಿ ಸೌಹಾರ್ದತೆಯಿಂದ ಆಚರಣೆ ಮಾಡುವ ನಿಟ್ಟಿನಲ್ಲಿ ಮುಂಜಾಗ್ರತವಾಗಿ ರೂಟ್ ಮಾರ್ಚ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಅಹಿತಕರ ಘಟನೆಗಳು ನಡೆಯದಂತೆ ಎಲ್ಲ ಸಮುದಾಯದವರು ಇಲಾಖೆ ಜತೆಗೆ ಸಹಕರಿಸಬೇಕು ಎಂದು ಪಿಎಸ್‌ಐ ಚನ್ನಯ್ಯ ದೇವೂರ ಕರೆ ನೀಡಿದರು.

ಬುಧವಾರ ಶಿರಹಟ್ಟಿ ಪಟ್ಟಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಆದೇಶದಂತೆ ಹಾಗೂ ಡಿಎಸ್‌ಸ್ಪಿ ಮುರ್ತುಜಾ ಖಾದ್ರಿ, ಸಿಪಿಐ ನಾಗರಾಜ್ ಮಾಡಳ್ಳಿ ಮಾರ್ಗದರ್ಶನದಲ್ಲಿ ಮುಂಬರುವ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆ ಕಾನೂನು ಸುವ್ಯವಸ್ತೆ ಮತ್ತು ಮುಂಜಾಗ್ರತಾ ಕ್ರಮವಾಗಿ ಶಿರಹಟ್ಟಿ ಪೊಲೀಸ್ ಠಾಣೆ ಪಿಎಸ್‌ಐ ಚನ್ನಯ್ಯ ದೇವೂರ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರೂಟ್ ಮಾರ್ಚ ನಡೆಸಿದರು.

ನಂತರ ಪಿಎಸ್‌ಐ ಚನ್ನಯ್ಯ ದೇವೂರ ಮಾಧ್ಯಮದವರೊಂದಿಗೆ ಮಾತನಾಡಿ, ಪೊಲೀಸ್ ಸಿಬ್ಬಂದಿಗಳನ್ನೊಳಗೊಂಡ ತಂಡವು ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಿ ಹಬ್ಬಗಳ ಸಮಯದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣ ಮಾಡುವ ಜತೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಇಲಾಖೆ ರೂಟ್ ಮಾರ್ಚ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗಿದೆ ಎಂದರು.

ಗಣಪತಿ ಪ್ರತಿಷ್ಟಾಪನೆ ದಿನದಿಂದ ಹಿಡಿದು ವಿಸರ್ಜನೆಯಾಗುವವರೆಗೂ ಯಾವುದೇ ಭಾವನೆಗೆ ಧಕ್ಕೆ ಆಗದಂತೆ ನಡೆದುಕೊಳ್ಳಬೇಕು. ಹಬ್ಬ ಎಲ್ಲರೂ ಸಹೋದರತೆಯಿಂದ ಒಟ್ಟಾಗಿ ಆಚರಿಸುವುದು ಒಳ್ಳೆಯದು. ಹಬ್ಬದ ಖುಷಿಯಲ್ಲಿ ಯುವಕರು ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ವೇಳೆ ಯಾವುದೇ ಧರ್ಮದವರಿಗೂ ಧಕ್ಕೆ ಆಗದ ರೀತಿ ನಡೆದುಕೊಳ್ಳಬೇಕು ಎಂದರು.

ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಮುಖಂಡರು ಶ್ರದ್ಧಾ-ಭಕ್ತಿಯಿಂದ ಆಚರಣೆ ಮಾಡುವ ಮೂಲಕ ಯಾರ ಭಾವನೆಗಳಿಗೂ ಧಕ್ಕೆ ಉಂಟಾಗದಂತೆ ನಡೆದುಕೊಳ್ಳಬೇಕು. ಹಬ್ಬಗಳ ಮೂಲ ಉದ್ದೇಶವೇ ಪ್ರೀತಿ, ವಿಶ್ವಾಸ ಮತ್ತು ಸಹಜೀವನದ ಸಂಕೇತ. ನಾಡಿನಲ್ಲಿ ಶಿರಹಟ್ಟಿ ಪಟ್ಟಣ ಹಿಂದು ಮುಸ್ಲಿಂ ಭಾವೈಕ್ಯತೆಗೆ ಹೆಸರಾಗಿದ್ದು, ಯಾವುದೇ ತರಹದ ಗೊಂದಲಕ್ಕೆ ಆಸ್ಪದ ನೀಡಬಾರದು ಎಂದು ಕರೆ ನೀಡಿದರು.

ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಪೊಲೀಸ್ ಇಲಾಖೆಯೊಂದಿಗೆ ಎಲ್ಲರೂ ಸಹಕರಿಸಿ ಶಾಂತಿ ಸೌಹಾರ್ದತೆಯಿಂದ ಗಣೇಶ ಹಾಗೂ ಈದ್ ಮಿಲಾದ್ ಹಬ್ಬ ಆಚರಿಸೋಣ ಎಂದರು.

ಈ ವೇಳೆ ಆರ್‌ಎಸ್‌ಐ ಎಂ.ಎಸ್. ಶೌಕತ್, ಶಿರಹಟ್ಟಿ ಪೊಲೀಸ್ ಠಾಣೆ ಸಿಬ್ಬಂದಿ, ಡಿಎಆರ್, ಕೆಎಸ್‌ಆರ್‌ಪಿ ಪೊಲೀಸರು ಇದ್ದರು.

ರೂಟ್ ಮಾರ್ಚ್ ಶಿರಹಟ್ಟಿ ಪೊಲೀಸ್ ಠಾಣೆಯಿಂದ ಪ್ರಾರಂಭವಾಗಿ ಆಸಾರ್ ಕ್ರಾಸ್, ಮರಾಠ ಗಲ್ಲಿ, ಮ್ಯಾಗೇರಿ ಓಣಿ, ಕನಕದಾಸ ವೃತ್ತ, ನೆಹರು ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್, ವಾಲ್ಮೀಕಿ ಸರ್ಕಲ್, ಗಾಂಧಿ ಸರ್ಕಲ್, ಬಸವೇಶ್ವರ ಸರ್ಕಲ್ ಮಾರ್ಗವಾಗಿ ಪೇಟೆ ಹನುಮಂತ ದೇವರ ದೇವಸ್ಥಾನಕ್ಕೆ ಬಂದು ಮುಕ್ತಾಯ ಮಾಡಲಾಯಿತು.