ಎಲ್ಲರ ಮನ ಗೆಲ್ಲುವಂತೆ ಹಬ್ಬಗಳ ಆಚರಿಸಿ: ನವೀನ್

| Published : Aug 22 2025, 12:00 AM IST

ಸಾರಾಂಶ

ತಾಲೂಕಿನ ಚಂದ್ರಗುತ್ತಿ ಗ್ರಾಮದ ಗಾಂಧಿ ವೃತ್ತದಲ್ಲಿ ಸಾರ್ವಜನಿಕ ಶ್ರೀ ಗಜಾನನೋತ್ಸವ ಸಮಿತಿಯಿಂದ ಪ್ರತಿಷ್ಠಾಪಿಸಲ್ಪಡುವ ಶ್ರೀ ಗಣೇಶ ಮೂರ್ತಿಯ ಸ್ಥಳಕ್ಕೆ ಪೊಲೀಸ್ ಇಲಾಖೆಯಿಂದ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಸೊರಬ

ತಾಲೂಕಿನ ಚಂದ್ರಗುತ್ತಿ ಗ್ರಾಮದ ಗಾಂಧಿ ವೃತ್ತದಲ್ಲಿ ಸಾರ್ವಜನಿಕ ಶ್ರೀ ಗಜಾನನೋತ್ಸವ ಸಮಿತಿಯಿಂದ ಪ್ರತಿಷ್ಠಾಪಿಸಲ್ಪಡುವ ಶ್ರೀ ಗಣೇಶ ಮೂರ್ತಿಯ ಸ್ಥಳಕ್ಕೆ ಪೊಲೀಸ್ ಇಲಾಖೆಯಿಂದ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಪಿಎಸ್‌ಐ ಎಂ.ಎಚ್. ನವೀನ್ ಮಾತನಾಡಿ, ಹಬ್ಬಗಳು ಎಲ್ಲರ ಮನಗಳನ್ನು ಗೆಲ್ಲುವಂತಿರಬೇಕು. ಇತರರಿಗೆ ಕಿರಿಕಿರಿ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಉಂಟು ಮಾಡುವಂತಿದ್ದರೆ ಹಬ್ಬಗಳು ಅರ್ಥಹೀನ ಎನಿಸುತ್ತವೆ. ಯಾವುದೇ ಸಮುದಾಯಗಳ ಆಚರಣೆಯಲ್ಲಿ ವಿಜೃಂಭಣೆ ಒಂದಡೆಯಾದರೆ, ಅವಘಡಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ಸರ್ಕಾರದ ಕಾನೂನುಗಳನ್ನು ಗೌರವಿಸಬೇಕು ಎಂದು ತಿಳಿಸಿದರು.

ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ಈದ್ ಮಿಲಾದ್ ಹಬ್ಬ ಸಹ ಬಂದಿದೆ. ಎಲ್ಲಾ ಸಮುದಾಯವರು ಶಾಂತಿ ಸೌಹಾರ್ದಯುತವಾಗಿ ಹಬ್ಬ ಆಚರಣೆ ಮಾಡಬೇಕು. ಗಣೇಶ ಮೂರ್ತಿಯ ವಿಸರ್ಜನಾ ಸ್ಥಳದಲ್ಲಿ ಮಕ್ಕಳ ಬಗ್ಗೆ ನಿಗಾ ವಹಿಸಬೇಕು. ಅತ್ಯಂತ ಕರ್ಕಶವಾಗಿ ಧ್ವನಿವರ್ಧಕಗಳನ್ನು ಬಳಸಬಾರದು ಎಂದು ಸೂಚನೆ ನೀಡಿದ ಅವರು, ಈಗಾಗಲೇ ಗಣೇಶ ಮೂರ್ತಿ ಸಂಘಟಕರಿಗೆ ಅನುಕೂಲ ಕಲ್ಪಿಸಲು ಏಕಗವಾಕ್ಷಿ ಪದ್ದತಿಯಲ್ಲಿ ಅನುಮತಿಗಳನ್ನು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಎಸ್.ಟಿ. ಸುಧಾಕರ್, ಎಂ.ಆರ್. ಪ್ರದೀಪ್, ರವೀಂದ್ರ, ಸಾರ್ವಜನಿಕ ಗಜಾನನೋತ್ಸವ ಸಮಿತಿ ಅಧ್ಯಕ್ಷ ಆನಂದ ಆಚಾರಿ, ಸಮಿತಿ ಸದಸ್ಯರಾದ ಆರ್.ಎಂ. ಧನುಷ್, ಸುದರ್ಶನ್ ಬಾಬು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.