ಹಬ್ಬಗಳನ್ನು ಶಾಂತಿಯುತವಾಗಿ ವಿಜೃಂಭಣೆಯಿಂದ ಆಚರಿಸಿ: ಎಸ್ಪಿ ಡಾ. ವಿಕ್ರಂ ಅಮಟೆ

| Published : Aug 28 2024, 01:04 AM IST

ಹಬ್ಬಗಳನ್ನು ಶಾಂತಿಯುತವಾಗಿ ವಿಜೃಂಭಣೆಯಿಂದ ಆಚರಿಸಿ: ಎಸ್ಪಿ ಡಾ. ವಿಕ್ರಂ ಅಮಟೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಗೌರಿ ಗಣೇಶ ಹಾಗೂ ಈದ್ ಮಿಲಾದ್ ಈ ಬಾರಿಯೂ ಒಟ್ಟೊಟ್ಟಿಗೆ ಬಂದಿದ್ದು, ಈ ಹಬ್ಬಗಳನ್ನು ಪರಿಸರ ಸ್ನೇಹಿ, ಶಾಂತವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲು ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಹೇಳಿದರು.

ಜಿಪಂ ಸಭಾಂಗಣದಲ್ಲಿ ಶಾಂತಿ ಸಮಿತಿ ಸಭೆ, ಪರಿಸರ ಸ್ನೇಹಿ ಆಚರಣೆಗೆ ಕರೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಗೌರಿ ಗಣೇಶ ಹಾಗೂ ಈದ್ ಮಿಲಾದ್ ಈ ಬಾರಿಯೂ ಒಟ್ಟೊಟ್ಟಿಗೆ ಬಂದಿದ್ದು, ಈ ಹಬ್ಬಗಳನ್ನು ಪರಿಸರ ಸ್ನೇಹಿ, ಶಾಂತವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲು ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಹೇಳಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಅಂಗವಾಗಿ ಮಂಗಳವಾರ ನಡೆದ ವಿವಿಧ ಸಮಾಜದ ಮುಖಂಡರನ್ನು ಒಳಗೊಂಡ ಶಾಂತಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಶಾಂತಿಯುತವಾಗಿ ಹಬ್ಬ ಆಚರಿಸಲು ಎಲ್ಲರೂ ಸಹಕಾರ ನೀಡಬೇಕು ಎಂದರು.

ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ 1778 ಗಣಪತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಇದರಲ್ಲಿ ಏಳು ಗಣೇಶ ಮೆರವಣಿಗೆ ಗಳನ್ನು ಅತಿ ಸೂಕ್ಷ್ಮ, 158 ಗಣೇಶ ಮೆರವಣಿಗೆಗಳನ್ನು ಸೂಕ್ಷ್ಮ ಎಂದು ಗುರುತಿಸಲಾಗಿದೆ. ಅದೇ ರೀತಿ ಜಿಲ್ಲೆಯಲ್ಲಿ 27 ಕಡೆ ಪ್ರಮುಖವಾಗಿ ಈದ್ ಮಿಲಾದ್ ಮೆರವಣಿಗೆ ನಡೆಯುತ್ತದೆ. ಇದರಲ್ಲಿ ನಾಲ್ಕು ಮೆರವಣಿಗೆಗಳನ್ನುಸೂಕ್ಷ್ಮ ಎಂದು ಗುರುತಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಸಂಘಟನೆ ಸಂಭವಿಸಿಲ್ಲ. ಈ ಬಾರಿಯೂ ಹಿಂದಿನಂತೆಯೇ ಶಾಂತಿಯುತವಾಗಿ ಹಬ್ಬ ಆಚರಿಸಲು ಎಲ್ಲ ಸಂಘಟಕರು ಕ್ರಮ ಕೈಗೊಳ್ಳ ಬೇಕು ಎಂದು ಸೂಚಿಸಿದರು.

ಗಣೇಶೋತ್ಸವದಲ್ಲಿ ಪಿಒಪಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅವಕಾಶವಿಲ್ಲ. ಜಿಲ್ಲೆಯಲ್ಲಿ ಈ ಮೂರ್ತಿಗಳ ಮಾರಾಟಕ್ಕೆ ನಿಷೇಧ ಹೇರಲಾಗಿದೆ ಎಂದು ತಿಳಿಸಿದರು. ಹಸಿರು ಪಟಾಕಿ ಸಿಡಿಸಲು ಮಾತ್ರ ಅವಕಾಶ ನೀಡಲಾಗಿದೆ. ರಾತ್ರಿ ಎಂಟು ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಬಹುದು. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ರವರೆಗೆ ಧ್ವನಿ ವರ್ಧಕ ಅಳವಡಿಕೆಗೆ ಅವಕಾಶವಿಲ್ಲ. ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಅನಿವಾರ್ಯವಾಗಿ ಕ್ರಮ ಕೈಗೊಳ್ಳ ಬೇಕಾಗುತ್ತದೆ ಎಂದರು.

ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಕ್ಕೆ ಫ್ಲೆಕ್ಸ್, ಬಂಟಿಂಗ್, ಬ್ಯಾನರ್ ಕಟ್ಟಲು ಸ್ಥಳೀಯ ಸಂಸ್ಥೆಗಳಿಂದ ಪರವಾನಗಿ ಪಡೆಯುವುದು ಕಡ್ಡಾಯ ಎಂದ ಅವರು, ಪ್ರಚೋದನಕಾರಿ ಬರಹಗಳು ಹಾಗೂ ಅನ್ಯ ಧರ್ಮದವರ ಬಾವನಗಳಿಗೆ ಧಕ್ಕೆ ಯಾಗುವಂತ ಫ್ಲೆಕ್ಸ್ ಹಾಗೂ ಬ್ಯಾನರ್ ಗಳಿಗೆ ಅವಕಾಶವಿಲ್ಲ. ಗಣೇಶ, ಈದ್ ಮಿಲಾದ್ ಒಂದೇ ಸಮಯಕ್ಕೆ ಬಂದಿರುವು ದರಿಂದ ಸಮನ್ವಯತೆಯಿಂದ ಬ್ಯಾನರ್ ಅಳವಡಿಸಬೇಕು. ಬ್ಯಾನರ್ ಅಳವಡಿಕೆ ಸಂದರ್ಭದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದಲ್ಲಿ ಅವರು ಆ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.

ಗಣೇಶೋತ್ಸವ ಹಾಗೂ ಈ ಜಿಲ್ಲಾ ಆಚರಣೆಗೆ ಅನುಮತಿ ನೀಡಲು ಸಿಂಗಲ್ ವಿಂಡೋ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಅರ್ಜಿ ಸಲ್ಲಿಸುವ ಮೂಲಕ ಹಬ್ಬ ಆಚರಣೆಗೆ ಪರವಾನಗಿ ಪಡೆಯಬೇಕು. ಸಾರ್ವಜನಿಕರು ಒಂದೊಂದು ಅನುಮತಿ ಪಡೆಯಲು ಒಂದೊಂದು ಕಚೇರಿಗೆ ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ತಾಲೂಕು ಮಟ್ಟದಲ್ಲಿ ಏಕ ಕಿಂಡಿ ವ್ಯವಸ್ಥೆ ಜಾರಿಗೆ ತರುವುದಲ್ಲದೆ ಎಲ್ಲಿ ಹೆಚ್ಚು ಗಣೇಶ ಪ್ರತಿಷ್ಠಾಪನೆ ಆಗುತ್ತದೆಯೋ ಆ ಹೋಬಳಿಗಳಲ್ಲಿಯೂ ಈ ವ್ಯವಸ್ಥೆ ಜಾರಿಗೆ ತರಲಾಗುವುದು. ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ಆ. 28ರಿಂದ ಸೆ. 3ರವರೆಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.ಗಣೇಶೋತ್ಸವ ಹಾಗೂ ಈದ್ ಮಿಲಾದ್ ಮೆರವಣಿಗೆ ವೇಳೆ ಸಂಬಂಧಿಸಿದವರು ಸ್ವಯಂ ಸೇವಕರನ್ನು ನೇಮಿಸಿ ಕೊಳ್ಳುವುದರಿಂದ ಮೆರವಣಿಗೆ ಸಂದರ್ಭದಲ್ಲಿ ಆಗುವ ಸಣ್ಣಪುಟ್ಟ ಗೊಂದಲ ಶೀಘ್ರವೇ ಸರಿ ಪಡಿಸಲು ಸಾಧ್ಯ ಎಂದು ವಿಕ್ರಮ ಅಮಟೆ ತಿಳಿಸಿದರು.ಪೊಲೀಸರೊಂದಿಗೆ ಸ್ವಯಂಸೇವಕರು ಇದ್ದಾಗ ಮೆರವಣಿಗೆ ಸರಿಯಾಗಿ ನಿಯಂತ್ರಿಸುವ ಜೊತೆಗೆ, ಸ್ಥಳೀಯರೇ ಸ್ವಯಂ ಸೇವಕರು ಆಗಿರುವುದರಿಂದ ಯಾವುದೇ ಗೊಂದಲಕ್ಕೂ ಅವಕಾಶವಿರುವುದಿಲ್ಲ. ಮೆರವಣಿಗೆಯಲ್ಲಿ ಎಷ್ಟು ಜನ ಸೇರುತ್ತಾರೆ ಅದರಲ್ಲಿ ಶೇ. 5ರಷ್ಟು ಸ್ವಯಂಸೇವಕರನ್ನು ನೇಮಿಸಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ವೇಳೆ ಗಣಪತಿ ವಿಗ್ರಹಗಳು ವಿದ್ಯುತ್ ಲೈನಿಗೆ ತಾಕುವಂತಿರುತ್ತವೆ. ಈ ಬಾರಿ ಧಾರಾಕಾರ ಮಳೆಯಿಂದಾಗಿ ವಿದ್ಯುತ್ ಕಂಬಗಳು ವಾಲಿರುವುದರಿಂದ ವಿದ್ಯುತ್ ತಂತಿಗಳು ತಳಭಾಗದಲ್ಲಿಯೇ ಇವೆ. ಗಣಪತಿ ಮೆರವಣಿಗೆಗೆ ಮೊದಲು ಆಯೋಜಕರು ಮೆರವಣಿಗೆ ನಡೆಯುವ ಮಾರ್ಗ ಪರಿಶೀಲನೆ ನಡೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಪಂ ಸಿಇಒ ಎಚ್.ಎಸ್.ಕೀರ್ತನಾ ಮಾತನಾಡಿ, ಒಂದು ಹಬ್ಬ ಚೆನ್ನಾಗಿ ನಡೆದರೆ ಅದನ್ನು ಮುಂದಿನ ಹಬ್ಬದವರೆಗೂ ಮೆಲುಕು ಹಾಕುತ್ತೇವೆ. ಹಬ್ಬದ ಸಂದರ್ಭದಲ್ಲಿ ಒಂದು ಅವಘಡ ನಡೆದರೂ ಅದರ ಪರಿಣಾಮ ಬೇರೆಯೇ ಆಗಿರುತ್ತದೆ. ಜೊತೆಗೆ ನೂರು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್, ಉಪಾಧ್ಯಕ್ಷೆ ಅನು ಮಧುಕರ್‌, ಸಿಡಿಎ ಅಧ್ಯಕ್ಷ ನಯಾಜ್, ಎಎಸ್ ಪಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಪೋಟೋ ಪೈಲ್ ನೇಮ್‌ 27 ಕೆಸಿಕೆಎಂ 3ಚಿಕ್ಕಮಗಳೂರಿನ ಜಿಪಂ ಸಭಾಂಗಣದಲ್ಲಿ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಅಂಗವಾಗಿ ಮಂಗಳವಾರ ಶಾಂತಿ ಸಭೆ ನಡೆಯಿತು. ಡಿಸಿ ಮೀನಾ ನಾಗರಾಜ್‌, ಎಸ್ಪಿ ಡಾ.ವಿಕ್ರಂ ಅಮಟೆ, ಜಿಪಂ ಸಿಇಒ ಕೀರ್ತನಾ, ಸುಜತಾ ಶಿವಕುಮಾರ್‌, ಅನು ಮಧುಕರ್‌, ನಯಾಜ್‌ ಇದ್ದರು.