ಸಾರಾಂಶ
ಭಟ್ಕಳ: ಯುಗಾದಿ, ರಮಜಾನ್, ಚೆನ್ನಪಟ್ಟಣ ಹನುಮಂತ ದೇವರ ರಥೋತ್ಸವ ಪ್ರಯುಕ್ತ ಸಹಾಯಕ ಆಯುಕ್ತೆ ಕಾವ್ಯರಾಣಿ ಅಧ್ಯಕ್ಷತೆಯಲ್ಲಿ ಶಾಂತಿ ಪಾಲನಾ ಸಭೆ ನಡೆಸಿ ಚರ್ಚಿಸಲಾಯಿತು.ಸಹಾಯ ಆಯುಕ್ತೆ ಕಾವ್ಯರಾಣಿ ಮಾತನಾಡಿ, ಮೂರು ಹಬ್ಬಗಳು ಒಟ್ಟೊಟ್ಟಿಗೆ ಬಂದಿದೆ. ಮೂರೂ ಹಬ್ಬದ ಸಂದರ್ಭದಲ್ಲೂ ಶಾಂತಿ ಸುವ್ಯವಸ್ಥೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ತಾಲೂಕು ಆಡಳಿತದ ವತಿಯಿಂದ ನಾವು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಏರ್ಪಡಿಸಲಿದೆ. ಪುರಸಭೆಯಿಂದ ಸ್ವಚ್ಛತೆಯ ಜತೆಗೆ ರಥೋತ್ಸವ ಸಾಗುವ ರಥ ಬೀದಿಯಲ್ಲಿ ಹೊಂಡಗಳನ್ನು ಮುಚ್ಚುವ ಹಾಗೂ ಸ್ವಚ್ಛತೆ ಕಾಪಾಡುವ ಕಾರ್ಯ ಮಾಡಲಾಗುತ್ತದೆ. ಹಬ್ಬಗಳು ಒಟ್ಟೊಟ್ಟಿಗೆ ಬಂದಿದ್ದರಿಂದ ಪ್ರತಿಯೊಬ್ಬರು ಕೂಡ ತಮ್ಮ ಯುವ ಪೀಳಿಗೆಗೆ ಶಾಂತಿ ಸಮಿತಿ ಸಭೆಯ ಸಂದೇಶವನ್ನು ತಲುಪಿಸಬೇಕು. ಯಾವುದೇ ವದಂತಿಗಳಿಗೆ ಕಿವಿಗೊಡದೇ ಸುಳ್ಳು ಸುದ್ದಿಗಳಿಗೆ ಅವಕಾಶ ಮಾಡಿಕೊಡದೇ ಹಬ್ಬಗಳ ಆಚರಿಸಬೇಕು. ರಮಜಾನ್ ಹಬ್ಬದಂದು ಮೆರವಣಿಗೆ ಹೋಗುವುದು ಪ್ರತಿವರ್ಷದಂತೆ ನಡೆಯಲಿ. ಯಾವುದೇ ಕಾರಣಕ್ಕೂ ಮೆರವಣಿಗೆಯ ಪಥವನ್ನು ಬದಲಿಸುವುದು ಬೇಡ ಎಂದ ಅವರು, ವಿದ್ಯುತ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಹೆಸ್ಕಾಂ ಇಲಾಖೆಗೆ ಸೂಚಿಸಿದರು.
ಭಟ್ಕಳದಲ್ಲಿ ಶಾಂತಿಯುತವಾಗಿ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಹಬ್ಬವನ್ನು ಆಚರಿಸುವಂತೆಯೂ ಅವರು ಕರೆ ನೀಡಿದರು.ಹೆದ್ದಾರಿ ಕುರಿತು ಸಭೆಯಲ್ಲಿ ಪ್ರಸ್ತಾಪವಾದ ಕುರಿತು ಪ್ರತಿಕ್ರಿಯೆ ನೀಡಿದ ಸಹಾಯಕ ಆಯುಕ್ತೆ, ಈಗಾಗಲೇ ನಾಲ್ಕು ಸಭೆಗಳನ್ನು ಹೆದ್ದಾರಿ ಸಂಬಂಧಿಸಿದಂತೆ ಮಾಡಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಇನ್ನೊಂದು ಸಭೆ ಕರೆದು ಸೂಕ್ತ ಕೆಲಸ ಮಾಡಲು ಸೂಚಿಸಲಾಗುವುದು. ಮಳೆಗಾಲಕ್ಕೂ ಪೂರ್ವ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸುವುದಾಗಿ ತಿಳಿಸಿದರು.
ಪುರಸಭಾ ಪ್ರಭಾರ ಅಧ್ಯಕ್ಷ ಅಲ್ತಾಫ್ ಖರೂರಿ, ನಾವು ಪ್ರತಿ ಹಬ್ಬಗಳನ್ನು ಸಹ ಪರಸ್ಪರ ಪ್ರೀತಿ, ವಿಶ್ವಾಸ ನಂಬಿಕೆ ಮತ್ತು ಸೌಹಾರ್ದದಿಂದ ಆಚರಿಸುತ್ತಿದ್ದೇವೆ. ಭಟ್ಕಳ ಇತಿಹಾಸದಲ್ಲಿ ರಥೋತ್ಸವದಲ್ಲಿ ಪರಸ್ಪರ ಸ್ನೇಹ ಸೌಹಾರ್ದ ಕಾಣಬಹುದು. ಅದಕ್ಕೆ ಚ್ಯುತಿ ಬಾರದಂತೆ ಇಂದಿಗೂ ನಡೆದುಕೊಂಡು ಬರಲಾಗಿದೆ ಎಂದರು.ಮಜ್ಲಿಸೇ ಇಸ್ಲಾಂ ವ ತಂಜೀಂ ಅಧ್ಯಕ್ಷ ಇನಾಯತ್‌ವುಲ್ಲಾ ಶಾಬಂದ್ರಿ ಮಾತನಾಡಿ, ನಮ್ಮಲ್ಲಿ ಪರಸ್ಪರ ನಂಬಿಕೆ ವಿಶ್ವಾಸವಿದ್ದು, ಪ್ರತಿ ಹಬ್ಬಗಳನ್ನು ಕೂಡ ನಾವು ಅತ್ಯಂತ ಶಾಂತಿಯುತವಾಗಿ ಆಚರಿಸುತ್ತೇವೆ. ನಮ್ಮ ಮೆರವಣಿಗೆ ಹಾಗೂ ಸಾಮೂಹಿಕ ಪ್ರಾರ್ಥನೆಗೆ ಸಹ ಎಲ್ಲರ ಸಹಕಾರವಿದೆ. ಈದ್ಗಾ ಮೈದಾನ ಚಿಕ್ಕದಾಗಿದ್ದು ನ್ಯೂ ಇಂಗ್ಲೀಷ್ ಶಾಲೆಯವರು ತಮ್ಮ ಜಾಗದಲ್ಲಿ ಮಾಡಲು ಸಹಕರಿಸುತ್ತಾ ಬಂದಿದ್ದಾರೆ ಎಂದರು.
ನಾಮಧಾರಿ ಸಮಾಜದ ಅಧ್ಯಕ್ಷ ಅರುಣ ನಾಯ್ಕ, ನಾಮಧಾರಿ ಸಮಾಜದ ಮಾಜಿ ಅಧ್ಯಕ್ಷ ಎಂ.ಆರ್. ನಾಯ್ಕ, ಅರ್ಬನ್ ಬ್ಯಾಂಕ್ ನಿರ್ದೇಶಕ ಶ್ರೀಧರ ನಾಯ್ಕ, ಚೆನ್ನಪಟ್ಟಣ ದೇವಸ್ಥಾನದ ಪರವಾಗಿ ಶ್ರೀಧರ ಮೊಗೇರ, ತಂಜೀಂ ಪ್ರಧಾನ ಕಾರ್ಯದರ್ಶಿ ಅಬ್ದುರ್ ರಕೀಬ್ ಎಂ.ಜೆ., ರಿಕ್ಷಾ ಚಾಲಕರ ಮಾಲಕರ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿದರು. ಸಭೆಯಲ್ಲಿ ಡಿವೈಎಸ್ಪಿ ಮಹೇಶ, ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ, ಪೊಲೀಸ್ ಇನ್ಸಪೆಕ್ಟರ್ ವಸಂತ ಆಚಾರಿ ಮುಂತಾದವರಿದ್ದರು.