ಸಾರಾಂಶ
ನವಲಗುಂದ: ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತಿ- ಸೌಹಾರ್ದದೊಂದಿಗೆ ಧಾರ್ಮಿಕ ಭಾವನೆಗಳಿಗೂ ಧಕ್ಕೆಯಾಗದಂತೆ ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ಆಚರಿಸಬೇಕು ಎಂದು ತಹಸೀಲ್ದಾರ್ ಸುಧೀರ ಸಾಹುಕಾರ ಹೇಳಿದರು.
ಇಲ್ಲಿನ ತಾಪಂ ಸಭಾಂಗಣದಲ್ಲಿ ಮಂಗಳವಾರ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಆಚರಣೆ ನಿಮಿತ್ತ ಕರೆದ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿದರು.ಹಬ್ಬದ ವೇಳೆ ಧ್ವನಿವರ್ಧಕ ಬಳಕೆ, ಶಾಮಿಯಾನ, ಮೆರವಣಿಗೆ ಮಾರ್ಗ, ಗಣೇಶ ಮೂರ್ತಿ ಕೂರಿಸುವುದು ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅನುಮತಿ ಪಡೆದುಕೊಳ್ಳಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತ ಹಾಗೂ ಸಂಚಾರ ದಟ್ಟಣೆಯಾಗದಂತೆ ಹಾಗೂ ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದರು.
ಪಿಎಸ್ಐ ಜನಾರ್ಧನ ಭಟ್ರಳ್ಳಿ ಮಾತನಾಡಿ, ಹಬ್ಬದ ಸಂದರ್ಭದಲ್ಲಿ ಯಾವುದೇ ಕಾನೂನು ಸುವ್ಯವಸ್ಥೆ ಸಮಸ್ಯೆಗಳು ಉಂಟಾಗದಂತೆ ಸಮುದಾಯದ ಜನರು ಪರಸ್ಪರ ಸಹಕಾರ ಮತ್ತು ಸಹಾನುಭೂತಿಯೊಂದಿಗೆ ನಡೆದುಕೊಳ್ಳಬೇಕು ಎಂದರು.ತಾಪಂ ಇಒ ಭಾಗ್ಯಶ್ರೀ ಜಹಗೀರದಾರ, ಮುಖ್ಯಾಧಿಕಾರಿ ಶರಣಪ್ಪ ಪೂಜಾರ. ಹಣಮರಡ್ಡಿ ರೂಗಿ, ಸಾವಿತ್ರಿ ಮುಪ್ಪಯ್ಯನವರ, ಹನುಮರಡ್ಡಿ ರೊಗಿ, ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ನಗರದ ಹಿರಿಯರಾದ ರಾಯನಗೌಡ ಪಾಟೀಲ, ರಿಯಾಜಅಹ್ಮದ ಪಿರಜಾದಿ, ಶಂಕ್ರಪ್ಪ ತೋಟದ, ರವಿ ಬೆಂಡಿಗೇರಿ, ಉಸ್ಮಾನ ಬಬರ್ಚಿ, ಜೀವನ ಪವಾರ, ಅಬ್ಬಾಸ ದೇವರಿಡು, ವೀರಣ್ಣ ಅಂಗಡಿ, ಈರಣ್ಣ ಚವಡಿ, ಸಂತೋಷ ನಾವಳ್ಳಿ ಸೇರಿದಂತೆ ಗಜಾನನ ಮಂಡಳಿ ಸದಸ್ಯರು ಅಧಿಕಾರಿಗಳು ಪಾಲ್ಗೊಂಡಿದ್ದರು.