ಶಾಂತಿ, ಸಂಯಮದಿಂದ ಗಣೇಶೋತ್ಸವ ಆಚರಿಸಿ

| Published : Aug 27 2024, 01:45 AM IST

ಸಾರಾಂಶ

ಗಣೇಶ ಹಬ್ಬದ ಸಂಭ್ರಮಕ್ಕೆ ಯಾವ ತಕರಾರಿಲ್ಲ. ಪೊಲೀಸ್ ಇಲಾಖೆ ಸೂಚಿಸಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಶಾಂತಿ ಸಂಯಮದಿಂದ ಭಕ್ತಿ ಭಾವದಿಂದ ಗಣೇಶ ಹಬ್ಬ ಆಚರಿಸಬೇಕು. ತಪ್ಪಿದಲ್ಲಿ ಶಿಸ್ತಿನ ಕ್ರಮ ಅನಿವಾರ್ಯವೆಂದು ಡಿಎಸ್ಪಿ ವಿಶ್ವನಾಥ ಕುಲಕರ್ಣಿ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಕೆರೂರ

ಗಣೇಶ ಹಬ್ಬದ ಸಂಭ್ರಮಕ್ಕೆ ಯಾವ ತಕರಾರಿಲ್ಲ. ಪೊಲೀಸ್‌ ಇಲಾಖೆ ಸೂಚಿಸಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಶಾಂತಿ ಸಂಯಮದಿಂದ ಭಕ್ತಿ ಭಾವದಿಂದ ಗಣೇಶ ಹಬ್ಬ ಆಚರಿಸಬೇಕು. ತಪ್ಪಿದಲ್ಲಿ ಶಿಸ್ತಿನ ಕ್ರಮ ಅನಿವಾರ್ಯವೆಂದು ಡಿಎಸ್‌ಪಿ ವಿಶ್ವನಾಥ ಕುಲಕರ್ಣಿ ಎಚ್ಚರಿಕೆ ನೀಡಿದರು.

ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಕರೆದ ಶಾಂತಿಪಾಲನಾ ಸಭೆಯಲ್ಲಿ ಮಾತನಾಡಿದ ಅವರು, ಗಣೇಶ ಮೆರವಣಿಗೆ ಸಮಯದಲ್ಲಿ ಕುಡಿದು ಕುಪ್ಪಳಿಸಿ ಇಲ್ಲ ಸಲ್ಲದ ವಾದ ವಿವಾದಕ್ಕೆ ಆಸ್ಪದ ಕೊಡುವದಾಗಲಿ ಹಳೆಯ ಹಗೆತನ ಸಾಧಿಸುವದಾಗಲಿ ಮಾಡಬಾರದು. ಯುವಕರು ನಾಡು ಕಟ್ಟುವ ಶಿಲ್ಪಿಗಳು, ಜಾಗ್ರತೆಯಿಂದ ಹಬ್ಬವನ್ನು ಸಂಭ್ರಮದಿಂದ ಜರುಗುವಂತೆ ನೋಡಿಕೊಳ್ಳಬೇಕು. ಕಳೆದ 2 ವರ್ಷಗಳ ಹಿಂದೆ ಇದೇ ಹಬ್ಬದಲ್ಲಿ ನಡೆದ ಅಹಿತಕರ ಘಟನೆ ಪಟ್ಟಣದ ಸಾಮರಸ್ಯವನ್ನು ಹಾಳುಮಾಡಿತ್ತು. ಪಟ್ಟಣದ ಹಿರಿ-ಕಿರಿಯರು ಪುನಃ ಆ ಘಟನೆ ಮರುಕಳಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಹೊತ್ತು ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕೆಂದು ಮನವಿ ಮಾಡಿದರು.ಸಿಪಿಐ ಕರಿಯಪ್ಪ ಬನ್ನೆ ಮಾತನಾಡಿ, ಪಟ್ಟಣದಲ್ಲಿ 20 ಕಡೆ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮಾಡುವರೆಂದು ತಿಳಿದಿದ್ದು, ಎಲ್ಲರೂ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ನಿಗದಿತ ಸಮಯದಲ್ಲಿ ವಿಸರ್ಜನೆ ಕಾರ್ಯ ನಡೆಯಬೇಕು. ಗುರುತಿಸಿದ ಸ್ಥಳಗಳಲ್ಲಿ ಪಪಂ ಅಧಿಕಾರಿಗಳು ಸ್ವಚ್ಛತೆ ಸುಗಮ ದಾರಿ ಹೆಸ್ಕಾಂ ಅಧಿಕಾರಿಗಳು ವಿದ್ಯುತ್‌ ವ್ಯವಸ್ಥೆ ಕಲ್ಪಿಸಬೇಕೆಂದು ಸೂಚಿಸಿದರು. ಶಾಂತಿ ಸಭೆಯಲ್ಲಿ ಠಾಣಾಧಿಕಾರಿ ಆರ್‌.ವೈ.ಬೀಳಗಿ, ಐ.ಎಮ್‌.ಹಿರೇಗೌಡರ ಹಾಗೂ ಸಿಬ್ಬಂದಿ ಹೆಸ್ಕಾಂ ಶಾಖಾಧಿಕಾರಿ ಸೋಮಪ್ಪ ಕೊನೇರಿ, ಪ.ಪಂ ಅಧಿಕಾರಿ ಬಸವರಾಜ ಕಟ್ಟಿಮನಿ, ಜಿಪಂ ಮಾಜಿ ಸದಸ್ಯ ಡಾ.ಎಮ್‌.ಜಿ.ಕಿತ್ತಲಿ, ಗುಂಡಣ್ಣ ಬೋರಣ್ಣವರ, ಭರಮಪ್ಪ ಹೊಸಮನಿ, ಉಸ್ಮಾನ ಮುಲ್ಲಾ, ಅಶೋಕ ಕೊಪ್ಪದ, ವಿಷ್ಣು ಕಠಾರಿ ಸೇರಿದಂತೆ ಹಲವಾರು ಜನರಿದ್ದರು.

--

ಬಾಕ್ಸ್‌

ಗಣೇಶ ಪಿಒಪಿ ನಿಷೇಧಿಸಲು ಆಗ್ರಹ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಗಣಪತಿಯ ವಿಗ್ರಹಗಳನ್ನು ನದಿಯಲ್ಲಿ, ಕೆರೆಗಳಲ್ಲಿ ಮತ್ತು ಬಾವಿಯಲ್ಲಿ ವಿಸರ್ಜನೆಗೆ ನಿಷೇಧ ಮಾಡಬೇಕೆಂದು ಶ್ರೀ ಮಾಧವ ಸೇವಾಕೇಂದ್ರದ ಅಧ್ಯಕ್ಷ ನಾಗರಾಜ ಹದ್ಲಿ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ. ವಿಸರ್ಜನೆ ಮಾಡದೆ ಉಳಿಯುವ ಗಣಪತಿಯ ವಿಗ್ರಹಗಳನ್ನು ಸಂರಕ್ಷಿಸಿ ಮುಂದಿನ ವರ್ಷ ಉಪಯೋಗಿಸುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕೆಂದು ಎಲ್ಲ ಗಣಪತಿಯ ತಯಾರಕರಲ್ಲಿ ಮತ್ತು ಸಾರ್ವಜನಿಕ ಗಣೇಶೋತ್ಸವ ಪ್ರತಿಷ್ಠಾಪನೆಯ ಮಂಡಳಿಗಳಿಗೆ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.

ಪ್ಲಾಸ್ಟರ್ ಆಫ್ ಪ್ಯಾರೀಸ್ ಅಥವಾ ಸೀಮೆಂಟ್‌ನಂತಹ ಕೊಳೆಯದ ವಸ್ತುಗಳಿಂದ ರಚಿಸಲಾಗದ ಮತ್ತು ವಿಷಕಾರಿ ಬಣ್ಣ ಮತ್ತು ಆಭರಣಗಳಿಂದ ಅಲಂಕರಿಸಲ್ಪಟ್ಟ, ಅಸಂಖ್ಯಾತ ಗಣಪತಿಯ ವಿಗ್ರಹಗಳು ನಮ್ಮ ಪರಿಸರ ವ್ಯವಸ್ಥೆಗೆ ಗಮನಾರ್ಹ ಹಾನಿಯನ್ನುಂಟುಮಾಡುತ್ತಿವೆ. ಹಾನಿಕಾರಕ ಪದಾರ್ಥಗಳನ್ನು ಉಪಯೋಗಿಸಿ ತಯಾರಿಸಿದ ಈ ವಿಗ್ರಹಗಳು ಸುಲಭವಾಗಿ ಕರಗುವುದಿಲ್ಲವಾದ್ದರಿಂದ ಅವು ಅನುಕೂಲಕರವಾಗಿ ನದಿಯಲ್ಲಿ ತ್ಯಾಜ್ಯವಾಗಿ ಸೇರಿಕೊಳ್ಳುತ್ತವೆ. ಹೀಗಾಗಿ ನದಿಯ ಪರಿಸರಕ್ಕೆ ಅಪಾಯವನ್ನುಂಟುಮಾಡುತ್ತವೆ. ಪರಿಸರ ಪ್ರೇಮಿ ಗಣಪತಿ ಪ್ರತಿಷ್ಠಾಪನೆ ಮಾಡಬೇಕು ಎನ್ನುವ ಸರ್ಕಾರದ ಆದೇಶ ಕೇವಲ ಘೋಷಣೆಯಾಗಿ ಉಳಿದಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ.