ಸೌಹಾರ್ದತೆಯಿಂದ ಹೋಳಿ ಆಚರಿಸಿ: ಜಿಲ್ಲಾಧಿಕಾರಿ ನಲಿನ್ ಅತುಲ್

| Published : Mar 13 2025, 12:49 AM IST

ಸೌಹಾರ್ದತೆಯಿಂದ ಹೋಳಿ ಆಚರಿಸಿ: ಜಿಲ್ಲಾಧಿಕಾರಿ ನಲಿನ್ ಅತುಲ್
Share this Article
  • FB
  • TW
  • Linkdin
  • Email

ಸಾರಾಂಶ

ನಾವು ಸಂಭ್ರಮಿಸುವ ಹಬ್ಬ ಇನ್ನೊಬ್ಬರಿಗೆ ತೊಂದರೆಯಾಗಬಾರದು. ಡಿಜೆ ಹಚ್ಚಿ ಶಬ್ದ ಮಾಲಿನ್ಯ ಮಾಡುವುದು, ಸಾಮಾಜಿಕ ಜಾಲತಾಣದಲ್ಲಿ ಕೋಮು-ಸೌಹಾರ್ದತೆಗೆ ಧಕ್ಕೆ ತರುವ ಪೋಸ್ಟ್‌ ಹಾಕಬಾರದು.

ಕೊಪ್ಪಳ:

ರಂಜಾನ್‌ ಹಬ್ಬದ ಆಚರಣೆ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಿದ್ದು ಹೋಳಿ ಸಂಭ್ರಮಾಚರಣೆಯಿಂದ ಅವರಿಗೆ ತೊಂದರೆಯಾಗದಂತೆ ಕಾಳಜಿ ವಹಿಸಿ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.

ಜಿಲ್ಲಾಡಳಿತದ ಭವನದಲ್ಲಿ ಹೋಳಿ ಹಬ್ಬದ ಅಂಗವಾಗಿ ನಡೆದ ಶಾಂತಿಸಭೆಯ ಅಧ್ಯಕ್ಷೆ ವಹಿಸಿ ಮಾತನಾಡಿದ ಅವರು, ನಾವು ಸಂಭ್ರಮಿಸುವ ಹಬ್ಬ ಇನ್ನೊಬ್ಬರಿಗೆ ತೊಂದರೆಯಾಗಬಾರದು. ಡಿಜೆ ಹಚ್ಚಿ ಶಬ್ದ ಮಾಲಿನ್ಯ ಮಾಡುವುದು, ಸಾಮಾಜಿಕ ಜಾಲತಾಣದಲ್ಲಿ ಕೋಮು-ಸೌಹಾರ್ದತೆಗೆ ಧಕ್ಕೆ ತರುವ ಪೋಸ್ಟ್‌ ಹಾಕದಂತೆ ಸೂಚಿಸಿದರು.

ಮಾ. 13ರಿಂದ 15ರ ವರೆಗೆ ಜಿಲ್ಲೆಯ ವಿವಿಧೆಡೆ ಹೋಳಿ ನಡೆಯುತ್ತಿದ್ದು ಶಾಂತರೀತಿಯಿಂದ ಆಚರಿಸಬೇಕು. ಆಯಾ ಸಮಾಜದ ಹಿರಿಯರು ಯುವಕರಿಗೆ ಈ ಕುರಿತು ತಿಳಿಹೇಳಬೇಕು ಎಂದರು.

ಎಸ್ಪಿ ಡಾ. ರಾಮ್ ಅರಸಿದ್ದಿ ಮಾತನಾಡಿ, ಹೋಳಿ ಹಬ್ಬ ಶುಕ್ರವಾರ ಬಂದಿದ್ದು ಅಂದು ರಂಜಾನ್‌ ಪ್ರಾರ್ಥನೆ ಇರಲಿದೆ. ಹೀಗಾಗಿ ಯಾರಿಗೂ ತೊಂದರೆಯಾಗದಂತೆ ಸರ್ವಧರ್ಮಿಯರು ನಡೆದುಕೊಳ್ಳಬೇಕು. ಇತರರ ಭಾವನೆಗೆ ಯಾವುದೇ ಕಾರಣಕ್ಕೂ ಧಕ್ಕೆ ಬರಬಾರದು. ಅನುಮತಿ ಇಲ್ಲದೆ ಡಿಜೆ ಹಚ್ಚಿದರೆ ಸೀಜ್‌ ಮಾಡಲಾಗುವುದು ಎಂದರು.

ರಸ್ತೆ ಮಧ್ಯೆ ದಹನ ಬೇಡ:

ರಸ್ತೆ ಮಧ್ಯದಲ್ಲಿಯೇ ಕಾಮದಹನ ಮಾಡುವುದರಿಂದ ಟ್ರಾಫಿಕ್‌ ಸಮಸ್ಯೆಯಾಗಲಿದೆ. ಹೀಗಾಗಿ ರಸ್ತೆಯ ಒಂದು ಬದಿ ದಹನಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಎಸ್ಪಿ, ಎಲ್ಲೆಡೆ ಸಿಬ್ಬಂದಿ ನಿಯೋಜಿಸಲಾಗುವುದು. ನೈಸರ್ಗಿಕ ಬಣ್ಣ ಬಳಿಸಿ ಹಚ್ಚ ಆಚರಿಸುವಂತೆ ಕರೆ ನೀಡಿದರು.

ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಪೀರಾಹುಸೇನ ಹೊಸಳ್ಳಿ ಮಾತನಾಡಿ, ಹೋಳಿ ಹಾಗೂ ರಂಜಾನ್ ಹಬ್ಬಗಳನ್ನು ಹಿಂದೂ-ಮುಸ್ಲಿಮರು ಸೌಹಾರ್ದಯುತವಾಗಿ ಆಚರಿಸುತ್ತಾ ಬಂದಿದ್ದೇವೆ. ಯಾವುದೇ ಕಹಿ ಘಟನೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು. ಈ ವೇಳೆ ವಿವಿಧ ಸಮುದಾಯಗಳ ಮುಖಂಡರು ತಮ್ಮ ಅಭಿಪ್ರಾಯ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಮಂತಕುಮಾರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಕೊಪ್ಪಳ ಡಿವೈಎಸ್ಪಿ ಮುತ್ತಣ್ಣ ಸರವಗೋಳ, ಗಂಗಾವತಿ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ, ಮುಖಂಡರಾದ ಮುತ್ತೂರ ಸ್ವಾಮಿ ನರೇಗಲ್, ಉಮೇಶ ಕುರುಡೇಕರ್, ಮಾನ್ವಿ ಪಾಷಾ, ಎಸ್ಬಿ ಖಾದ್ರಿಸಾಬ ಇದ್ದರು.