ಶಾಂತಿ, ಸೌಹಾರ್ದತೆಯಿಂದ ಹೋಳಿ ಆಚರಿಸಿ: ಡಿಸಿ ಫೌಜಿಯಾ ಮನವಿ

| Published : Mar 23 2024, 01:01 AM IST

ಸಾರಾಂಶ

ಹೋಳಿ ಹಬ್ಬದ 2 ದಿನ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು. ಚುನಾವಣೆ ನೀತಿ ಸಂಹಿತೆ, ಎಸ್‌ಎಸ್ಎಲ್‌ಸಿ ಪರೀಕ್ಷೆ ಹಾಗೂ ರಂಜಾನ್‌ ಹಬ್ಬ ಒಂದೇ ಸಮಯದಲ್ಲಿ ಬಂದಿರುವುದರಿಂದ ಪರಸ್ಪರ ಕೋಮು ಸೌಹಾರ್ದತೆ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ನಗರ ಮತ್ತು ಜಿಲ್ಲೆಯಾದ್ಯಂತ ಹೋಳಿ ಹಬ್ಬದ ಪ್ರಯುಕ್ತ ಮಾ. 24 ರಂದು ಕಾಮದಹನ ಮತ್ತು ಮಾ. 25ರಂದು ಧುಲಂಡಿಯನ್ನು ಶಾಂತಿ ಮತ್ತು ಸೌಹಾರ್ದಯುತವಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರಂದು ಹೋಳಿ ಹಬ್ಬ ಆಚರಣೆಯ ಅಂಗವಾಗಿ ಕರೆಯಲಾದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಲಬುರಗಿ ನಗರ ಹಾಗೂ ಜಿಲ್ಲೆಯಾದ್ಯಂತ ಹೋಳಿ ಹಬ್ಬ ಆಚರಣೆಯ ಸಂದರ್ಭದಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಎಚ್ಚರ ವಹಿಸಲು ತಿಳಿಸಿದರು.

ಚುನಾವಣೆ ನೀತಿ ಸಂಹಿತೆ, ಎಸ್‌ಎಸ್ಎಲ್‌ಸಿ ಪರೀಕ್ಷೆ ಹಾಗೂ ರಂಜಾನ್‌ ಹಬ್ಬ ಒಂದೇ ಸಮಯದಲ್ಲಿ ಬಂದಿರುವುದರಿಂದ ಪರಸ್ಪರ ಕೋಮು ಸೌಹಾರ್ದತೆ ಕಾಪಾಡಿಕೊಳ್ಳಬೇಕೆಂದು ಶಾಂತಿ ಸಮಿತಿ ಸದಸ್ಯರು ಸಭೆಯಲ್ಲಿ ಹೇಳಿದರು.

ಜೆಸ್ಕಾಂನವರು ಅಂದು 2 ದಿನ ವಿದ್ಯುತ್‌ ತೆಗೆಯಕೂಡದು ಎಂದು ಜೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಹಾನಗರ ಪಾಲಿಕೆಯವರು ಹಬ್ಬದ ಎರಡು ದಿನ ನೀರು ಸರಬರಾಜು ಮಾಡಬೇಕು. ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

ನಗರ ಪೋಲಿಸ್ ಆಯುಕ್ತರಾದ ಚೇತನ ಆರ್ ಮಾತನಾಡಿ, ಜಿಲ್ಲೆಯಲ್ಲಿ 15 ಚೆಕ್ಪೋಸ್ಟ್‌ಗಳು ತೆರೆಯಲಾಗಿದೆ. ಬೈಕ್‌ನಲ್ಲಿ ತ್ರಿಬಲ್ ರೈಡಿಂಗ್ ಮತ್ತು ಸೈಲೆನ್ಸರ್ ತೆಗೆದು ಓಡಿಸುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಹಬ್ಬದ ಸಂದರ್ಭದಲ್ಲಿ ಶಾಂತಿ ಭಂಗವನ್ನುಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದಲ್ಲದೆ ಯಾವುದೇ ಅಹಿತರ ಘಟನೆಗಳು ಸಂಭವಿಸದಂತೆ ಸೂಕ್ತ ಪೋಲಿಸ್ ಬಂದೋಬಸ್ತ್ ಮಾಡಲಾಗುವುದು.

ನಿಮ್ಮ ನಿಮ್ಮ ಬಡಾವಣೆಯಲ್ಲಿ ಯಾವುದಾದರು ಇಂತಹ ಘಟನೆ ನಡೆದರೆ ಪೊಲೀಸ್ ಸಹಾಯ ವಾಣಿ ಸಂಖ್ಯೆ 112ಕ್ಕೆ ಕರೆ ಮಾಡಲು ಸೂಚಿಸಿದರು. ಎಲೆಲ್ಲಿ ಕಾಮದಹನ/ಹೋಳಿ ಹಬ್ಬ ಆಚರಣೆ ಮಾಡಲಾಗಿದೆ. ಅಲ್ಲಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಮಾಹಿತಿ ಕಲ್ಪಿಸಬೇಕು ಎಂದು ಮನವಿ ಮಾಡಿಕೊಂಡರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೈ ಮಾತನಾಡಿ, ಆಚಾರ ಸಂಹಿತೆ ಮತ್ತು ಹತ್ತನೇ ತರಗತಿ ಮಕ್ಕಳ ಪರೀಕ್ಷೆ ಇರುವುದರಿಂದ ಎಲೆಲ್ಲಿ ಪರೀಕ್ಷೆ ಕೇಂದ್ರಗಳಿವೆ ಅಲ್ಲಿ ಹಬ್ಬ ಆಚರಣೆ ಮಾಡುವರು ಮಕ್ಕಳಿಗೂ ಹಾಗೂ ಅವರ ಪಾಲಕರಿಗೂ ಯಾವುದೇ ತೊಂದರೆ ಉಂಟುಮಾಡಬಾರದು ಎಂದು ಹೇಳಿದರು.

ಡಿಸಿಪಿ ಕನಿಕಾ ಸಿಕ್ರಿವಾಲ್, ಸೇರಿದಂತೆ ಪೋಲಿಸ್ ಇನ್ಸ್‌ಪೆಕ್ಟರ್‌ಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಶಾಂತಿ ಸಮಿತಿ ಸದಸ್ಯರು ನಾಗರಿಕರು, ಸಮಾಜದ ಮುಖಂಡರು ಹಿರಿಯ ನಾಗರಿಕರು ಹಲವಾರು ಸೂಕ್ತ ಸಲಹೆಗಳನ್ನು ನೀಡಿದರು.