ಶಾಂತಿ, ಸೌಹಾರ್ದತೆಯಿಂದ ಹೋಳಿ ಆಚರಿಸಿ: ಡಿವೈಎಸ್‌ಪಿ

| Published : Mar 24 2024, 01:34 AM IST

ಸಾರಾಂಶ

ಮಾ.26ರಂದು ಪರಸ್ಪರ ಬಣ್ಣ ಎರಚಿಕೊಳ್ಳುವ ಹಬ್ಬವೂ ನಡೆಯಲಿದೆ. ಯುವಕರು ಕಾಮದಹನದಂದು ಕಟ್ಟಿಗೆಗಳನ್ನು ಸಂಗ್ರಹಿಸುವ ಭರದಲ್ಲಿ ಜನರಿಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು.

ಸಿಂಧನೂರು: ಹೋಳಿ ಹಬ್ಬವನ್ನು ಎಲ್ಲರು ಶಾಂತಿ, ಸೌಹಾರ್ದತೆಯಿಂದ ಆಚರಿಸಬೇಕು ಎಂದು ಡಿವೈಎಸ್ ಪಿ.ಬಿ.ಎಸ್ ತಳವಾರ ಸೂಚನೆ ನೀಡಿದರು.

ನಗರ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬದ ನಿಮಿತ್ಯ ಶಾಂತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇದೇ ಮಾ.25 ರಂದು ರತಿ-ಮನ್ಮಥರ ಕಾಮದಹನ ನಡೆಯುತ್ತದೆ. ಮಾ.26ರಂದು ಪರಸ್ಪರ ಬಣ್ಣ ಎರಚಿಕೊಳ್ಳುವ ಹಬ್ಬವೂ ನಡೆಯಲಿದೆ. ಯುವಕರು ಕಾಮದಹನದಂದು ಕಟ್ಟಿಗೆಗಳನ್ನು ಸಂಗ್ರಹಿಸುವ ಭರದಲ್ಲಿ ಜನರಿಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು. ಹೊಸ ಕಟ್ಟಡ ಕಟ್ಟಲು ಹಾಕಿರುವ ಕಟ್ಟಿಗೆಗಳನ್ನು, ಮರದ ತುಂಡು, ಬಾಗಿಲು, ಕಿಟಕಿಗಳನ್ನು ಮುರಿಯುವ, ಕಳುವು ಮಾಡಿಕೊಂಡು ಹೋಗುವ ಕೆಲಸ ಮಾಡಬಾರದು. ಇದು ಕಾನೂನು ಬಾಹಿರ ಹಾಗೂ ಶಿಕ್ಷರ್ಹವಾಗುತ್ತದೆ. ಇಂತಹ ಘಟನೆಗಳು ಕಂಡುಬಂದರೆ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.

ಶಹರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಸುಧೀರ್ ಎಂ.ಬೆಂಕಿ ಮಾತನಾಡಿ, ಬಣ್ಣ ಎರಚುವಾಗ ಯುವಕ-ಯುವತಿಯರು ಮೊಟ್ಟೆ, ಗ್ರೀಸ್ ಬಳಸಿ ಬಣ್ಣ ಹಚ್ಚಬಾರದು. ಗುಲಾಲು ಪುಡಿಯನ್ನು ಬಳಸಿದ ಬಣ್ಣವನ್ನೇ ಹಚ್ಚಬೇಕು. ಒತ್ತಾಯದಿಂದ ಯಾರಿಗೂ ಬಣ್ಣ ಹಚ್ಚಬಾರದು. ಈ ನಿಯಮಗಳನ್ನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಅಪರಾಧ ವಿಭಾಗದ ಪಿಎಸ್ಐ ಶ್ರೀನಿವಾಸಲು ಉಪಸ್ಥಿತರಿದ್ದರು. ಮುಖಂಡರಾದ ವೀರೇಶ ಯಡಿಯೂರಮಠ, ರವಿ ಹಿರೇಮಠ ಮಾತನಾಡಿದರು. ಮುಖಂಡರಾದ ಅಮರೇಗೌಡ ಕಾನಿಹಾಳ, ಫಕೀರಪ್ಪ ಬೂದಿಹಾಳ, ಬಸವರಾಜಗೌಡ ಅಮರಾಪುರ, ಭೀಮಣ್ಣ ಅಮರಾಪುರ, ಆದೆಪ್ಪ ಬಳಿಗಾರ ಸೇರಿದಂತೆ ವಿವಿಧ ವಾರ್ಡ್‌ನ ಯುವಕರು ಪಾಲ್ಗೊಂಡಿದ್ದರು.