ಸಾರಾಂಶ
ಮತದಾನ ಜಾಗೃತಿ ಕಾರ್ಯಕ್ರಮವು ಒಂದು ಉತ್ತಮ ಯೋಚನೆಯಾಗಿದ್ದು, ಮತದಾನದ ಪ್ರಾಮುಖ್ಯತೆಯನ್ನು ತಿಳಿಸಲು ಅನುಕೂಲವಾಗಿದೆ.
ಭಟ್ಕಳ: ಮತದಾನವನ್ನು ಹಬ್ಬದಂತೆ ಆಚರಿಸುವಂತಾಗಬೇಕು, ಪ್ರತಿಯೊಬ್ಬರೂ ಸಂವಿಧಾನ ನೀಡಿದ ಹಕ್ಕನ್ನು ಚಲಾಯಿಸಿ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು ಎನ್ನುವುದು ಮತದಾನ ಜಾಗೃತಿಯ ಉದ್ದೇಶವಾಗಿದೆ ಎಂದು ಸಹಾಯಕ ಆಯುಕ್ತೆ ಡಾ. ನಯನಾ ಎನ್. ತಿಳಿಸಿದರು.
ತಾಲೂಕು ಆಡಳಿತದಿಂದ ಸೋಮವಾರ ಏರ್ಪಡಿಸಿದ್ದ ಮತದಾನ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿ, ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಶೇ. ೭೯ರಷ್ಟು ಮತದಾನವಾಗಿದ್ದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೇ. ೧೦೦ರಷ್ಟು ಮತದಾನವಾಗಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಹೆಚ್ಚಿನದಾಗಿ ವಿದ್ಯಾರ್ಥಿಗಳು, ಯುವ ಮತದಾರರು ತಮ್ಮ ತಮ್ಮ ಪ್ರದೇಶದಲ್ಲಿನ ಮತದಾರರಿಗೆ ಪ್ರೇರೇಪಿಸಿ ಮತಗಟ್ಟೆಯೆಡೆಗೆ ಕಳುಹಿಸುವಂತಾಗಬೇಕು ಎಂದು ಕರೆ ನೀಡಿದ ಅವರು, ಮತದಾನ ಜಾಗೃತಿ ಕಾರ್ಯಕ್ರಮವು ಒಂದು ಉತ್ತಮ ಯೋಚನೆಯಾಗಿದ್ದು, ಮತದಾನದ ಪ್ರಾಮುಖ್ಯತೆಯನ್ನು ತಿಳಿಸಲು ಅನುಕೂಲವಾಗಿದೆ ಎಂದರು.ಹಿರಿಯ ನಾಗರಿಕರು, ಅಂಗವಿಕಲರು ಮತದಾನದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಅವರಿಗೆ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದರು.ಮತದಾನ ಜಾಗೃತಿ ಕಾರ್ಯಕ್ರಮದ ರಾಯಭಾರಿಯಾದ ಸಾಹಿತಿ ಮಾನಾಸುತ ಶಂಭು ಹೆಗಡೆ ಮಾತನಾಡಿ, ಸಂವಿಧಾನ ನಮಗೆ ಮತದಾನದ ಹಕ್ಕನ್ನು ನೀಡಿದ್ದು, ಇದನ್ನು ಸರಿಯಾಗಿ ಚಲಾಯಿಸಿದಾಗ ಮಾತ್ರ ಉತ್ತಮ ಭವಿಷ್ಯ ಸಾಧ್ಯವಾಗುವುದು. ಎಲ್ಲರೂ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಉತ್ತಮ ಅಭ್ಯರ್ಥಿಗಳ ಆಯ್ಕೆಗೆ ಸಹಕರಿಸಿ ಎಂದು ಕೋರಿದ್ದಲ್ಲದೇ ತಮ್ಮ ಸ್ವರಚಿತ ಕವನದ ಮೂಲಕ ಮತದಾರರನ್ನು ಯುವ ಮತದಾರರನ್ನು ಹುರಿದುಂಬಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ತಾಪಂ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ವಿ.ಡಿ. ಮೊಗೇರ ಮಾತನಾಡಿ, ಮತದಾನ ಜಾಗೃತಿ ಕಾರ್ಯಕ್ರಮವನ್ನು ಎಲ್ಲರೂ ಸೇರಿ ಮಾಡುತ್ತಿದ್ದು, ಇದು ಯಶಸ್ವಿಯಾಗಲು ಜನರ ಸಹಕಾರ ಅಗತ್ಯ. ಪ್ರತಿಯೊಬ್ಬರೂ ಮತದಾನದ ಮಹತ್ವವನ್ನು ಅರಿತು ಮತದಾನ ಮಾಡಬೇಕು ಎಂದು ಕರೆ ನೀಡಿದರು. ಶಿಕ್ಷಕ ನಾಗೇಶ ಮಡಿವಾಳ ಮತದಾನದ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ನಾಗರಾಜ ನಾಯ್ಕಡ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಮಲ್ಲಪ್ಪ, ಜಾಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜಪ್ಪ, ತಾಪಂನ ಕರಿಯಪ್ಪ ನಾಯ್ಕ, ಅಕ್ಷರದಾಸೋಹ ಅಧಿಕಾರಿ ಪ್ರಭಾಕರ ಚಿಕ್ಕನಮನೆ, ಸಹಾಯಕ ಲೆಕ್ಕಾಧಿಕಾರಿ ರಾಜೇಶ ಮಹಾಲೆ, ಶಿಕ್ಷಣ ಇಲಾಖೆಯ ಪೂರ್ಣಿಮಾ ಮೊಗೇರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಪಟ್ಟಣದಲ್ಲಿ ಮತದಾನ ಜಾಗೃತಿ ಜಾಥಾ ನಡೆಸಲಾಯಿತು.