ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸದುರ್ಗ
ಜನವರಿ 22ರಂದು ಎಲ್ಲರೂ ತಮ್ಮ ಮನೆಗಳಲ್ಲಿ ಹಬ್ಬ ಆಚರಿಸುವ ಮೂಲಕ ರಾಮಮಂದಿರದ ಉದ್ಘಾಟನೆಗೆ ಸಾಕ್ಷಿಕರಿಸುವ ಮೂಲಕ ಸನಾತನ ಹಿಂದೂ ಧರ್ಮ ಉಳಿಸಬೇಕಿದೆ ಎಂದು ಬ್ರಹ್ಮವಿದ್ಯಾನಗರದ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಹೇಳಿದರು.ಅಯೋಧ್ಯೆ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಆಮಂತ್ರಣ ಅಭಿಯಾನದ ನಿಮಿತ್ತ ಆಗಮಸಿದ್ದ ಪವಿತ್ರಾ ಮಂತ್ರಾಕ್ಷತೆಯ ಬೃಹತ್ ಶೋಭಾಯಾತ್ರೆಗೆ ಪಟ್ಟಣದಲ್ಲಿ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆ ಪ್ರತಿ ಮನೆಗೂ ತಲುಪಿಸಬೇಕು. ಜ.22ರಂದು ಎಲ್ಲಾ ಹಿಂದುಗಳು ಗ್ರಾಮದ ದೇವಸ್ಥಾನದಲ್ಲಿ ಸೇರಿ ಶ್ರೀರಾಮನ ಭಾವಚಿತ್ರಕ್ಕೆ ಪುಷ್ವನಮನ ಸಲ್ಲಿಸಿ ಮಂತ್ರಾಕ್ಷತೆ ಅರ್ಪಿಸಬೇಕು ಎಂದರು.ರಾಜ್ಯದ ನಾನಾ ಮಠಾಧೀಶರು ಹನುಮನ ಜನ್ಮಭೂಮಿ ಅಂಜನಾದ್ರಿಯಿಂದ ಮುತ್ತಿಗೆ ತೆಗೆದುಕೊಂಡು ಅಯೋಧ್ಯೆ ರಾಮನ ಮಂದಿರದಲ್ಲಿಟ್ಟು ಪೂಜೆ ಸಲ್ಲಿಸಿ ಬಂದಿದ್ದೇವೆ. ಅನೇಕರ ಹೋರಾಟ, ತ್ಯಾಗ, ಬಲಿದಾನದ ಫಲವಾಗಿ ಇಂದು ರಾಮಮಂದಿರ ನಿರ್ಮಾಣಗೊಂಡು ಲೋಕಾರ್ಪಣೆಗೆ ಸಿದ್ದಗೊಂಡಿದೆ. ಈ ಕಾರ್ಯಕ್ರಮಕ್ಕೆ ನನ್ನನ್ನು ಸೇರಿ ರಾಜ್ಯದ ಅನೇಕ ಮಠಾಧೀಶರ ಆಹ್ವಾನಿಸಿರುವುದು ಅತ್ಯಂತ ಖುಷಿಯ ಸಂಗತಿ ಎಂದರು.
ಅಯೋದ್ಯೆಯಿಂದ ಆಗಮಿಸಿದ ಮಂತ್ರಾಕ್ಷತೆಯ ಬೃಹತ್ ಶೋಭಾಯಾತ್ರೆ ಮೂಲಕ ಪಟ್ಟಣದಲ್ಲಿ ಪೂರ್ಣಕುಂಭದೊಂದಿಗೆ ಸ್ವಾಗತ ನೀಡಲಾಯಿತು. ನಂತರ ಬೃಹತ್ ಶೋಭಾ ಯಾತ್ರೆ ಮೂಲಕ ಪಟ್ಟಣದ ಕೋಟೆ ಬಡಾವಣೆ ಶ್ರೀರಾಮನ ಮಂದಿರಕ್ಕೆ ಮಂತ್ರಾಕ್ಷತೆ ಒಯ್ಯಲಾಯಿತು.ಮೆರವಣಿಗೆಯಲ್ಲಿ ಕೆ.ಎಸ್.ಕಲ್ಮಠ್, ವಕೀಲ ಶ್ರೀನಿವಾಸ್, ರವಿಕುಮಾರ್, ಜಗದೀಶ್ ರಾಮಯ್ಯ, ಸಾ.ಚಾ.ಮಂಜಯ್ಯ, ಉದ್ಯಮಿ ಡಿ.ಎಸ್.ಪ್ರದೀಪ್ ಪುರಸಭೆ ಸದಸ್ಯ ಮಂಜುನಾಥ್, ದಾಳಿಂಬೆ ಗಿರೀಶ್, ನಾಗರಾಜ್, ಶ್ರೀನಿವಾಸ್, ಸಮಾಜ ಸೇವಕ ತುಂಬಿನಕೆರೆ ಬಸವರಾಜ್ ಸೇರಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಭಾಗವಹಿಸಿದ್ದರು.