ಸಾರಾಂಶ
ಕೊಪ್ಪಳ: ಆನೆಗೊಂದಿ ಉತ್ಸವವನ್ನು ವಿಜೃಂಭಣೆಯಿಂದ ನಡೆಸಲು ನಾನಾ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿ ಹೇಳಿದರು.
ಆನೆಗೊಂದಿ ಉತ್ಸವ-2024ರ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.ಆನೆಗೊಂದಿ ಉತ್ಸವವನ್ನು ಮಾ.11, 12ರಂದು ಎರಡು ದಿನಗಳ ಕಾಲ ಆನೆಗೊಂದಿ ಹೊರ ಭಾಗದ ತಳವಾರ ಘಟ್ಟದ ರಸ್ತೆಯಲ್ಲಿ ಉತ್ಸವದ ಮುಖ್ಯ ವೇದಿಕೆಯಲ್ಲಿ ಆಚರಿಸಲಾಗುವುದು. ಉತ್ಸವದ ಮುಖ್ಯ ವೇದಿಕೆಗೆ ಆನೆಗೊಂದಿ ಸಂಸ್ಥಾನದ ರಾಜ ವಂಶಸ್ಥ ಶ್ರೀರಂಗದೇವರಾಯಲು ಹೆಸರಿಡಲು ನಿರ್ಧರಿಸಲಾಗಿದೆ. ಹನುಮ ಜನ್ಮಸ್ಥಳವಾದ ಐತಿಹಾಸಿಕ ಅಂಜನಾದ್ರಿ ಬೆಟ್ಟ, ಕಿಷ್ಕಿಂದೆ, ಸುಗ್ರೀವ, ರಾಮಭಕ್ತೆ ಶಬರಿಯ ಹಾಗೂ ಐತಿಹಾಸಿಕ ತಾಣ ಹೊಂದಿರುವ ಈ ಭಾಗದ ಸಂಸ್ಕೃತಿಯನ್ನು ಕಲಾವಿದರಿಂದ ನಾಟಕ ಮತ್ತು ನೃತ್ಯ ರೂಪಕಗಳೊಂದಿಗೆ ಅನಾವರಣಗೊಳಿಸಲಾಗುವುದು. ವಿಶೇಷವಾಗಿ ಶ್ರೀರಾಮ, ಸುಗ್ರೀವ, ಆಂಜನೇಯನ ದರ್ಶನ, ಶಬರಿ, ಪಂಪಾಂಬಿಕೆಯರ ಇತಿಹಾಸ, ವಾಲಿಯ ವಧೆ ಒಳಗೊಂಡಂತೆ ರಾಮಾಯಣ ಹಾಗೂ ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರಲು ಹೆಚ್ಚಿನ ಗಮನ ಹರಿಸಲಾಗುತ್ತಿದೆ ಎಂದರು.
ಆನೆಗೊಂದಿ ಉತ್ಸವವದ ಮೊದಲ ದಿನದ ಕಾರ್ಯಕ್ರಮದಲ್ಲಿ ಪ್ರಖ್ಯಾತ ಗಾಯಕ ಹಂಸಲೇಖ, ನಟ ದೃವ ಸರ್ಜಾ ಸೇರಿದಂತೆ ರಾಜ್ಯದ ಮತ್ತು ಸ್ಥಳೀಯ ಖ್ಯಾತ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಎರಡನೇ ದಿನ ನಟ ಶ್ರೀಮುರಳಿ, ಗಾಯಕ ಅರ್ಜುನ ಜನ್ಯಾ, ನಿರೂಪಕಿ ಅನುಶ್ರೀ ಸೇರಿದಂತೆ ಇತರ ಕಲಾವಿದರು ಹಾಗೂ ಕಲಾ ತಂಡಗಳಿಂದ ಸಂಗೀತ, ನೃತ್ಯ, ಭರತನಾಟ್ಯ ಒಳಗೊಂಡಂತೆ ವಿಭಿನ್ನ ರೀತಿಯ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅದಲ್ಲದೇ ಉತ್ಸವ ಅಂಗವಾಗಿ ಕ್ರೀಡಾಕೂಟ, ವಸ್ತುಪ್ರದರ್ಶನ, ವಿಚಾರ ಸಂಕಿರಣ, ಕವಿಗೋಷ್ಠಿಗಳನ್ನು ಸಹ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್ ತಂಗಡಗಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೊಡಿ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ ಕಡಿ, ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಆನೆಗೊಂದಿ ಉತ್ಸವಕ್ಕೆ ಸಹಕರಿಸಿ: ತಂಗಡಗಿಕೊಪ್ಪಳ: ಮಾ. 11,12ರಂದು ನಿಗದಿಪಡಿಸಿದ ಐತಿಹಾಸಿಕ ಆನೆಗೊಂದಿ ಉತ್ಸವದ ಸಿದ್ಧತೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚಿಸಲಾಗಿದ್ದು, ಸಾರ್ವಜನಿಕರು ಸಹ ಉತ್ಸವದ ಯಶಸ್ಸಿಗೆ ಸಹಕರಿಸಬೇಕು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.ಕನಕಗಿರಿ ಉತ್ಸವದ ಸಿದ್ಧತೆ ನಡೆಸಿದ 18 ತಂಡಗಳೇ ಇಲ್ಲಿ ಕೂಡ ಕಾರ್ಯ ನಿರ್ವಹಿಸಲಿವೆ. ಕನಕಗಿರಿ ಉತ್ಸವ ಯಶಸ್ವಿಗೊಳಿಸಿದಂತೆ ಜನ ಮೆಚ್ಚುವ ಹಾಗೆ ಆನೆಗೊಂದಿ ಉತ್ಸವವನ್ನು ಸಹ ನಡೆಸಲಾಗುವುದು. ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕರಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಆನೆಗೊಂದಿ ಉತ್ಸವದ ಲಾಂಛನ ಬಿಡುಗಡೆಕೊಪ್ಪಳ: ವಿಜಯನಗರ ಸಾಮ್ರಾಜ್ಯದ ತೊಟ್ಟಿಲು ಆನೆಗೊಂದಿ ಉತ್ಸವ-2024ರ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್ ತಂಗಡಗಿ ಮಾ.5ರಂದು ಲೋಗೋ ಬಿಡುಗಡೆ ಮೂಲಕ ಆನೆಗೊಂದಿ ಉತ್ಸವಕ್ಕೆ ವಿದುಕ್ತವಾಗಿ ಚಾಲನೆ ನೀಡಿದರು.
ಇದೇ ಮಾ.11,12ರಂದು ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಆನೆಗೊಂದಿ ಉತ್ಸವ-2024ರ ಆಚರಿಸಲು ನಿರ್ಧರಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಗಣದಲ್ಲಿ ಮಂಗಳವಾರ ಉತ್ಸವದ ಲೋಗೋ ಬಿಡುಗಡೆ ಕಾರ್ಯಕ್ರಮ ನಡೆಯಿತು.