ಜಾತ್ರೋತ್ಸವ, ಮೊಹರಂನ್ನು ಸೌಹಾರ್ದದಿಂದ ಆಚರಿಸಿ

| Published : Jun 27 2025, 12:48 AM IST

ಸಾರಾಂಶ

ತಾಳಿಕೋಟೆ: ಖಾಸ್ಗತೇಶ್ವರ ಜಾತ್ರೆ ಹಾಗೂ ಮೊಹರಂ ಹಬ್ಬ ಎರಡೂ ಒಂದೇ ವಾರದಲ್ಲಿ ಬಂದಿದ್ದು, ಯಾವುದೇ ತರಹದ ಅಹಿತಕರ ಘಟನೆ ನಡೆಯಲಾರದಂತೆ ಆಯಾ ಉತ್ಸವ ಸಮಿತಿಯವರು ಎಚ್ಚರ ವಹಿಸಿ ಈ ಹಬ್ಬಗಳನ್ನು ಆಚರಿಸಬೇಕು ಎಂದು ಸಿಪಿಐ ಮಹ್ಮದ ಪಶುಉದ್ದೀನ ತಿಳಿಸಿದರು.

ತಾಳಿಕೋಟೆ: ಖಾಸ್ಗತೇಶ್ವರ ಜಾತ್ರೆ ಹಾಗೂ ಮೊಹರಂ ಹಬ್ಬ ಎರಡೂ ಒಂದೇ ವಾರದಲ್ಲಿ ಬಂದಿದ್ದು, ಯಾವುದೇ ತರಹದ ಅಹಿತಕರ ಘಟನೆ ನಡೆಯಲಾರದಂತೆ ಆಯಾ ಉತ್ಸವ ಸಮಿತಿಯವರು ಎಚ್ಚರ ವಹಿಸಿ ಈ ಹಬ್ಬಗಳನ್ನು ಆಚರಿಸಬೇಕು ಎಂದು ಸಿಪಿಐ ಮಹ್ಮದ ಪಶುಉದ್ದೀನ ತಿಳಿಸಿದರು.

ಪಟ್ಟಣದಲ್ಲಿ ಜೂ.೩೦ರಿಂದ ಜು.೧೦ರ ವರೆಗೆ ಜರುಗಲಿರುವ ಖಾಸ್ಗತೇಶ್ವರ ಜಾತ್ರೋತ್ಸವ ಹಾಗೂ ಮೊಹರಂ ಹಬ್ಬದ ಸಂಬಂಧ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ನಡೆದ ಶಾಂತಿ ಪಾಲನಾ ಸಭೆಯಲ್ಲಿ ಅವರು ಮಾತನಾಡಿದರು. ತಾಳಿಕೋಟೆ ಪಟ್ಟಣದಲ್ಲಿ ಹಬ್ಬ ಹರಿದಿನಗಳನ್ನು ಸೌಹಾರ್ದತೆ ಭಾವನೆಯಿಂದ ಆಚರಿಸಿಕೊಂಡು ಬರಲಾಗುತ್ತದೆ. ಜಾತ್ರೆ ಹಾಗೂ ಮೊಹರಂ ಹಬ್ಬವನ್ನು ಆಯಾ ಉತ್ಸವ ಸಮಿತಿಯವರು ಎಚ್ಚರದಿಂದ ಆಚರಿಸಬೇಕು. ಜು.೬ ರಂದು ಮೊಹರಂ ಹಬ್ಬದ ನಡೆಯಲಿದೆ. ಖಾಸ್ಗತೇಶ್ವರ ಮಠಕ್ಕೆ ಪಟ್ಟಣ ಸೇರಿ ಸುಮಾರು ೬೦ ಗ್ರಾಮಗಳ ಸದ್ಭಕ್ತರು ರಾತ್ರಿ ೯ ಗಂಟೆಯಿಂದ ಮಠಕ್ಕೆ ದೀಡ ನಮಸ್ಕಾರ ಹಾಕುತ್ತಾರೆ. ಹೀಗಾಗಿ, ಕತ್ರಿ ಬಜಾರ ಮಾರ್ಗದಲ್ಲಿ ಯಾವುದೇ ತರಹದ ಗದ್ದಲ ನಡೆಯಬಾರದು. ರಾತ್ರಿ 8 ಗಂಟೆಯೊಳಗೆ ಕಾರ್ಯಕ್ರಮ ಮುಗಿಸಬೇಕು ಎಂದು ಸೂಚಿಸಿದರು.ಮೊಹರಂ ಉತ್ಸವ ಸಮಿತಿ ಯುವಕರು ಮಾತನಾಡಿ ರಾತ್ರಿ ೧೦ ಗಂಟೆಯವರೆಗೆ ದೇವರ ಕಾರ್ಯಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಕೇಳಿಕೊಂಡರು. ಅದಕ್ಕೆ ಉತ್ತರಿಸಿದ ಸಿಪಿಐ, ರಾತ್ರಿ ೮ ಗಂಟೆಯೊಳಗೆ ದೇವರುಗಳ ದಪನ ಕಾರ್ಯಕ್ಕೆ ಕತ್ರಿ ಭಜಾರ ಮಾರ್ಗದಲ್ಲಿ ಅನುಕೂಲ ಮಾಡಿಕೊಡಲಾಗುತ್ತದೆ.ಎಲ್ಲರೂ ಕಾನೂನನ್ನು ಗೌರವಿಸುವಂತೆ ಸೂಚಿಸಿದರು. ಕಾನೂನನ್ನು ಉಲ್ಲಂಘಿಸಿದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತದೆ ಎಂದು ಎಚ್ಚರಿಸಿದರು.

ಪಿಎಸ್‌ಐ ರಾಮನಗೌಡ ಸಂಕನಾಳ ಮಾತನಾಡಿ, ಪಟ್ಟಣದಲ್ಲಿ ಒಂದೇ ದಿನ ಎರಡೂ ಉತ್ಸವಗಳು ಜರುಗುವದರಿಂದ ಪಟ್ಟಣದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿಕೊಂಡು ಬರಬೇಕಾಗುತ್ತದೆ. ಜಾತ್ರೋತ್ಸವ ಕಮಿಟಿ ಎಂದಿನಂತೆ ತಮ್ಮ ಕಾರ್ಯವನ್ನು ಮುಂದುವರೆಸಲಿ, ಆದರೆ ಮೊಹರಂ ಉತ್ಸವವನ್ನು ರಾತ್ರಿ ೮ ಗಂಟೆಯೊಳಗೆ ಮುಗಿಸುವಂತೆ ಸುಚಿಸಿದರು.ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ ಮಾತನಾಡಿ, ಹಬ್ಬ ಹರಿದಿನಗಳಾಗಲಿ ಜಾತ್ರೆ ಉತ್ಸವಗಳಾಗಲಿ ತಾಳಿಕೋಟೆ ಪಟ್ಟಣದಲ್ಲಿ ಎಲ್ಲವೂ ಸೌಹಾರ್ದತೆ ಭಾವನೆಯಿಂದ ನಡೆದಿವೆ. ಎಲ್ಲರೂ ಸಹಕಾರ ನೀಡುವಂತೆ ಕೋರಿದರು. ಈ ಎರಡೂ ಹಬ್ಬಗಳನ್ನು ಪೊಲೀಸ್ ಅಧಿಕಾರಿಗಳು ತಿಳಿಸಿದಂತೆ ತಮ್ಮ ಕಾರ್ಯ ಚಟುವಟಿಕೆಗಳನ್ನು ನಡೆಸಿ ಎಂದಿನಂತೆ ಸೌಹಾರ್ದ ಭಾವನೆಯೊಂದಿಗೆ ನಡೆಯಲು ಮುಂದಾಗುವಂತೆ ವಿನಂತಿಸಿದರು.ಮುಸ್ಲಿಂ ಮುಖಂಡ ಇಮಾಮಸಾಬ ಕಾಳಗಿ ಮಾತನಾಡಿ, ಈ ಎರಡೂ ಹಬ್ಬಗಳನ್ನು ಎಲ್ಲರೂ ಒಂದಾಗಿ ಆಚರಿಸೋಣ. ಭಕ್ತಿಭಾವದಿಂದ ಹಬ್ಬ ಮಾಡುವುದರೊಂದಿಗೆ ಭಗವಂತನನ್ನು ಪ್ರಾರ್ಥಿಸಬೇಕು. ಖಾಸ್ಗತೇಶ್ವರ ಜಾತ್ರೋತ್ಸವ ಅಂಗವಾಗಿ ಅಸಂಖ್ಯಾತ ಭಕ್ತರು ದೀಡ ನಮಸ್ಕಾರ ಹಾಕುತ್ತಾರೆ. ನಮ್ಮ ಜನತೆಯೂ ಸಹಕರಿಸಿ ಎರಡೂ ಹಬ್ಬಗಳಲ್ಲಿ ಯಾವುದೇ ಆತಂಕ ಅಡ್ಡಿಯಾಗದಂತೆ ನೋಡಿಕೊಳ್ಳಬೇಕೆಂದರು.ಈ ವೇಳೆ ಜೈಭೀಮ ಮುತ್ತಗಿ, ಮುಸ್ಲಿಂ ಮುಖಂಡರಾದ ಸಿಕಂದರ ವಠಾರ, ಕಾಶಿನಾಥ ಮುರಾಳ, ಮೋದಿನಸಾಬ ನಗಾರ್ಚಿ, ನಜೀರ ಮುಲ್ಲಾ, ಸಿದ್ದನಗೌಡ ಪಾಟೀಲ(ನಾವದಗಿ), ಫಯಾಜ ಉತ್ನಾಳ, ಎಂ.ಕೆ.ಚೋರಗಸ್ತಿ, ಎಂ.ಜಿ.ಪಾಟೀಲ, ಶಶಿಧರ ಡಿಸಲೆ, ಸಂಭಾಜಿ ವಾಡಕರ, ಶಫೀಕ ಇನಾಮದಾರ, ಬಸ್ಸು ಮಾಲಿಪಾಟೀಲ, ಸಂತೋಷ ಘಾವಡೆ, ಸಂಗಯ್ಯ ದುರ್ಗದಮಠ ಇತರರು ಇದ್ದರು.

ಅಪರಾದ ವಿಭಾಗ ಪಿಎಸ್‌ಐ ಆರ್.ಎಸ್.ಭಂಗಿ ಸ್ವಾಗತಿಸಿ, ನಿರೂಪಿಸಿದರು.